ಅಪೂರ್ಣ ಕಾಮಗಾರಿಗೆ ಎನ್‌ಒಸಿ ನೀಡಿದರೆ ಗ್ರಾಪಂಗಳೇ ಹೊಣೆ

ಕುಂದಾಪುರ ತಾಪಂ ಸಭಾಂಗಣದಲ್ಲಿ ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು, ಪಿಡಿಒ ಮತ್ತು ಇತರೆ ಇಲಾಖೆಗಳ ಪ್ರಗತಿ ಪರಿಶೀಲನ ಸಭೆ ನಡೆಯಿತು.
ಕುಂದಾಪುರ ತಾಪಂ ಸಭಾಂಗಣದಲ್ಲಿ ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು, ಪಿಡಿಒ ಮತ್ತು ಇತರೆ ಇಲಾಖೆಗಳ ಪ್ರಗತಿ ಪರಿಶೀಲನ ಸಭೆ ನಡೆಯಿತು.
Published on
ವಿಜಯವಾಣಿ ಸುದ್ದಿಜಾಲ ಕುಂದಾಪುರ
ಸಾವಿರಾರು ಕೋಟಿ ರೂಪಾಯಿಯ ಯೋಜನೆಯನ್ನು ಗ್ರಾಪಂಗಳು ಗಂಭೀರವಾಗಿ ಪರಿಗಣಿಸದಿದ್ದರೆ ಯೋಜನೆ ಹಳ್ಳ ಹಿಡಿಯಬಹುದು. ಕಾಮಗಾರಿ ಪೂರ್ಣಗೊಳ್ಳದೆ ನೀರಿನ ಸಂಪರ್ಕ, ನಿರಾಪೇಕ್ಷಣ ಪತ್ರ ಕೊಡಬಾರದು. ಅಪೂರ್ಣ ಕಾಮಗಾರಿಗಳಿಗೆ ಎನ್‌ಒಸಿ ಕೊಟ್ಟರೆ ಅದಕ್ಕೆ ಆಯಾ ಪಂಚಾಯಿತಿಗಳೇ ನೇರ ಹೊಣೆಯಾಗುತ್ತವೆ ಎಂದು ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ ಎಚ್ಚರಿಕೆ ನೀಡಿದರು.
ಕುಂದಾಪುರ ತಾಪಂ ಸಭಾಂಗಣದಲ್ಲಿ ಮಂಗಳವಾರ ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು, ಪಿಡಿಒಗಳು ಮತ್ತು ಇತರೆ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.
ಜಲಜೀವನ್ ಮಿಶನ್ ಯೋಜನೆಯಡಿ ಒಂದೊಂದು ಕಾಮಗಾರಿಯನ್ನು ಬೇರೆಬೇರೆ ಗುತ್ತಿಗೆದಾರರು ನಿರ್ವಹಿಸಿದ್ದಾರೆ. ಒಬ್ಬರು ಪೈಪ್‌ಲೈನ್ ಮಾಡಿದ್ದಾರೆ, ಇನ್ನೊಬ್ಬರು ನಳ್ಳಿ ಕಟ್ಟೆ ಮಾಡಿದ್ದಾರೆ. ಮತ್ತೊಬ್ಬರು ಟ್ಯಾಂಕ್ ನಿರ್ಮಿಸಿದ್ದಾರೆ. ಅವರೆಲ್ಲ ಅವರ ಕೆಲಸ ಮುಗಿಸಿ ಹೋಗುತ್ತಾರೆ. ಆದರೆ ನೀರು ಸರಬರಾಜು ಮಾಡುವ ಜವಾಬ್ದಾರಿ ಯಾರದ್ದು?, ಒಂದೊಂದು ಕಾಮಗಾರಿ ನಿರ್ವಹಿಸಿದ ಗುತ್ತಿಗೆದಾರರು ಸಬೂಬು ಹೇಳುತ್ತಾರೆ. ಆದರೆ ನೀರು ಬಾರದಿದ್ದಾಗ ಜನರು ಪ್ರಶ್ನಿಸುವುದು ಗ್ರಾಮ ಪಂಚಾಯಿತಿಯನ್ನು. ಹಾಗಾಗಿ ಗ್ರಾಪಂಗಳು ಜೆಜೆಎಂ ಅಧಿಕಾರಿಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬೇಕು ಎಂದು ಶಾಸಕರು ಸೂಚಿಸಿದರು.
ಕಾಮಗಾರಿ ಅವೈಜ್ಞಾನಿಕ: ಕ್ಷೇತ್ರ ವ್ಯಾಪ್ತಿಯ 16 ಗ್ರಾಪಂಗಳಲ್ಲಿ ಬಹುತೇಕ ಕಡೆಗೆ ಜೆಜೆಎಂ ಪೈಪ್‌ಲೈನ್ ಮೂಲಕ ಕುಡಿಯುವ ನೀರನ್ನು ಸರಬರಾಜು ಮಾಡಲಾಗುತ್ತಿದೆ ಎಂದು ಜೆಜೆಎಂ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು. ವಂಡ್ಸೆ ಗ್ರಾಪಂ ಉಪಾಧ್ಯಕ್ಷ ಗೋವರ್ಧನ್ ಜೋಗಿ ಮಾತನಾಡಿ, ನಳ್ಳಿಗಳಲ್ಲಿ ನಿಮಿಷಕ್ಕೆ 10 ಲೀಟರ್ ಬರುವ ಸಾಮರ್ಥ್ಯವಿದೆ ಎಂದು ಹೇಳಿದ್ದರು. ಆದರೆ ನೀರು ಬರುತ್ತಿಲ್ಲ. ಮೇಲ್ಭಾಗದ ಮನೆಗಳಿಗೆ ನೀರು ಹೋಗುತ್ತಿಲ್ಲ, ಪೈಪ್‌ಲೈನ್ ಕಾಮಗಾರಿ ಅವೈಜ್ಞಾನಿಕವಾಗಿದೆ ಎಂದು ದೂರಿದರು.
ಬೈಂದೂರು ಕ್ಷೇತ್ರದಲ್ಲಿ ಸತತ ಸಭೆ ಬಳಿಕ ಫಲಾನುಭವಿಗಳಿಗೆ 94ಸಿ ಹಕ್ಕುಪತ್ರ ನೀಡಲಾಗಿದೆ. ಕ್ಷೇತ್ರ ಯಾವುದಾದರೂ ಅರ್ಹ ಫಲಾನುಭವಿಗಳಿಗೆ ಹಕ್ಕುಪತ್ರ ಸಿಗದಿದ್ದರೆ ಮಾಹಿತಿ ನೀಡಿ ಎಂದು ಶಾಸಕ ಗಂಟಿಹೊಳೆ ಹೇಳಿದರು.

ನಿವೇಶನ ರಹಿತರಿಗೆ ಭೂಮಿ

ಈಗಾಗಲೇ ಬೈಂದೂರು ಕ್ಷೇತ್ರದಲ್ಲಿ 2700 ವಸತಿ, 7904 ನಿವೇಶನಗಳಿಗೆ ಬೇಡಿಕೆ ಇದೆ. ವಸತಿ ಸಮಸ್ಯೆ ಹಾಗೂ ನಿವೇಶನ ಸಮಸ್ಯೆ ಬಗೆಹರಿಸಲು ಪರಿಣಾಮಕಾರಿ ಕ್ರಮ ಹಾಕಿಕೊಳ್ಳಬೇಕು. ಅಕ್ರಮ ಸಕ್ರಮದಲ್ಲಿ ಮಿತಿಗಿಂತ ಜಾಸ್ತಿ ಒತ್ತುವರಿ ಮಾಡಿಕೊಂಡಿರುವ ಸರ್ಕಾರಿ ಭೂಮಿಯನ್ನು ತೆರವು ಮಾಡಿ ನಿವೇಶನ ರಹಿತರಿಗೆ ನೀಡುವ ಬಗ್ಗೆಯೂ ಚಿಂತನೆ ಮಾಡಲಾಗುತ್ತಿದೆ. ಒತ್ತುವರಿಯಾದ ಸರ್ಕಾರಿ ಜಾಗಗಳನ್ನು ಗುರುತಿಸಿ ಸ್ವಾಧಿನಕ್ಕೆ ತಗೆದುಕೊಳ್ಳುವ ಕೆಲಸವನ್ನು ಪಂಚಾಯಿತಿಗಳು ಮಾಡುಬೇಕೆಂದು ತಿಳಿಸಿದರು.
ಕುಂದಾಪುರ ತಹಸೀಲ್ದಾರ್ ಪ್ರದೀಪ ಕುರ್ಡೇಕರ್, ಬೈಂದೂರು ತಹಸೀಲ್ದಾರ್ ಎಚ್.ರಾಮಚಂದ್ರಪ್ಪ, ಜಿಲ್ಲಾ ಉಪ ಕಾರ್ಯದರ್ಶಿ ಎಸ್.ಎಸ್.ಖಾದ್ರಳ್ಳಿ, ಕುಂದಾಪುರ ತಾಪಂ ಕಾರ್ಯನಿರ್ವಹಣಾಧಿಕಾರಿ ಮಹೇಶ್, ಬೈಂದೂರು ತಾಪಂ ಕಾರ್ಯನಿರ್ವಹಣಾಧಿಕಾರಿ ರಾಮದಾಸ್, ಜಿಪಂ ಕುಡಿಯುವ ನೀರು ವಿಭಾಗದ ಇಂಜಿನಿಯರ್ ಉದಯ ಶೆಟ್ಟಿ ಉಪಸ್ಥಿತರಿದ್ದರು.

ಪೈಪ್‌ಲೈನ್‌ನಿಂದ ರಸ್ತೆಗಳಿಗೆ ಹಾನಿ

ಗ್ರಾಪಂ ವ್ಯಾಪ್ತಿಯಲ್ಲಿ ಪೈಪ್‌ಲೈನ್‌ಗಾಗಿ ರಸ್ತೆಗಳನ್ನು ತುಂಡರಿಸಲಾಗಿದೆ. ಕಾಮಗಾರಿ ಮುಗಿದ ಬಳಿಕ ಬೇಕಾಬಿಟ್ಟಿಯಾಗಿ ತೇಪೆ ಹಾಕಿದ್ದಾರೆ. ಈಗಾಗಲೇ ಇರುವ ನೀರಿನ ಪೈಪ್‌ಲೈನ್‌ಗೂ ಹಾನಿ ಮಾಡಿದ್ದಾರೆ ಎಂದು ಉಪ್ಪುಂದ, ಕೊಲ್ಲೂರು, ಇಡೂರು, ಕೆರಾಡಿ, ಅಂಪಾರು, ಜಡ್ಕಲ್ ಪಂಚಾಯಿತಿಯವರು ಆರೋಪಿಸಿದರು. 20 ದಿನದೊಳಗೆ ರಸ್ತೆ ಸರಿಪಡಿಸುವಂತೆ ಅಧಿಕಾರಿಗಳಿಗೆ ಶಾಸಕ ಗಂಟಿಹೊಳೆ ಸೂಚಿಸಿದರು.

ಚರ್ಚೆಯಾದ ವಿಷಯ

ಅಕ್ರಮ-ಸಕ್ರಮ, ಜಾತಿ ಪ್ರಮಾಣ ಪತ್ರ, ಬೀಡಾಡಿ ದನಗಳಿಂದ ಆಗುತ್ತಿರುವ ತೊಂದರೆ, ಬೀದಿನಾಯಿಗಳ ಸಮಸ್ಯೆ, 9/11 ಸಮಸ್ಯೆ, ಪಡಿತರ ಚೀಟಿ ಗೊಂದಲ, ಟ್ಯಾಂಕರ್ ನೀರು ಸರಬರಾಜು, ಪ್ರವಾಸೋದ್ಯಮ, 15ನೇ ಹಣಕಾಸು ಬಿಡುಗಡೆ ಆಗದಿರುವುದು, ಬಿಎಸ್ಸೆನ್ನೆಲ್ ನೆಟ್‌ವರ್ಕ್ ಸಮಸ್ಯೆ, ಇ-ಸೊತ್ತು ಆಸ್ತಿ ನೋಂದಣಿಯಲ್ಲಿ ಹೆಸರು ಬಿಟ್ಟು ಹೋದವರ ಹೆಸರು ಸೇರ್ಪಡೆಗೆ ಕಾಲಾವಕಾಶ ನೀಡಬೇಕು ಇತ್ಯಾದಿ ವಿಷಯಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net