5 ಲಕ್ಷ ರೂ. ಅನುದಾನ ಕರಾವಳಿ ಕಂಬಳಕ್ಕೆ ಬಹುದೊಡ್ಡ ಶಕ್ತಿ

ರಾಜ್ಯ ಕಂಬಳ ಸಮಿತಿ ಅಧ್ಯಕ್ಷ ಡಾ. ದೇವಿಪ್ರಸಾದ್​ ಶೆಟ್ಟಿ
ರಾಜ್ಯ ಕಂಬಳ ಸಮಿತಿ ಅಧ್ಯಕ್ಷ ಡಾ. ದೇವಿಪ್ರಸಾದ್​ ಶೆಟ್ಟಿ
Published on
ಉಡುಪಿ: ರಾಜ್ಯ ಸರ್ಕಾರ ನುಡಿದಂತೆ ನಡೆದಿದೆ. ಮುಖ್ಯಮಂತ್ರಿಗಳು ಪ್ರತಿಯೊಂದು ಕಂಬಳಕ್ಕೂ 5 ಲಕ್ಷ ರೂ. ಅನುದಾನ ನೀಡಿ ಕರಾವಳಿಯ ಕ್ರೀಡೆಗೆ ಆಸರೆಯಾಗಿದ್ದಾರೆ. ಕಂಬಳ ಆಯೋಜಿಸುವುದು ಇತ್ತೀಚಿನ ದಿನಗಳಲ್ಲಿ ದೊಡ್ಡ ಆರ್ಥಿಕ ಹೊರೆಯಾಗಿದೆ. ತುಳುನಾಡಿನ ಹೆಮ್ಮೆಯ ಸಾಂಪ್ರದಾಯಿಕ ಸಂಸತಿ ಉತ್ತೇಜಿಸಲು ಧನಸಹಾಯ ದೊಡ್ಡ ಶಕ್ತಿಯಾಗಲಿದೆ ಎಂದು ರಾಜ್ಯ ಕಂಬಳ ಸಮಿತಿ ಅಧ್ಯಕ್ಷ ಡಾ. ದೇವಿಪ್ರಸಾದ್​ ಶೆಟ್ಟಿ ಹರ್ಷವ್ಯಕ್ತಪಡಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದಾಗ ಪ್ರವಾಸೋದ್ಯಮ ಹಾಗೂ ಕ್ರೀಡಾ ಇಲಾಖೆಗಳಿಂದ ಧನಸಹಾಯ ನೀಡಿದ್ದರು. ಡಿ.ವಿ. ಸದಾನಂದ ಗೌಡರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಕಂಬಳಕ್ಕೆ 1 ಕೋಟಿ ರೂ. ಅನುದಾನ ಘೋಷಿಸಿದ್ದರು. ರಾಜಕೀಯ ಭೇದ-ಭಾವ ಮರೆತು ಎಲ್ಲಾ ಸರ್ಕಾರಗಳು ಕಂಬಳ ಕ್ರೀಡೆಯನ್ನು ಪ್ರೋತ್ಸಾಹಿಸಿವೆ. ಇದು ನಮ್ಮ ಜಾನಪದ ಕ್ರೀಡೆಗೆ ಸಿಕ್ಕ ಗೌರವ ಎಂದು ಹೇಳಿದರು.

ಮುಂದಿನ ಬಜೆಟ್​ನಲ್ಲಿ 5 ಕೋಟಿ ರೂ.ಗೆ ಬೇಡಿಕೆ
ಕಂಬಳದ ವೈವಿಧ್ಯತೆ ಮತ್ತು ವ್ಯಾಪ್ತಿಯನ್ನು ವಿಸ್ತರಿಸಲು ಮುಂದಿನ ಬಜೆಟ್​ನಲ್ಲಿ ಸರ್ಕಾರ ಕನಿಷ್ಠ 5 ಕೋಟಿ ರೂ. ವಿಶೇಷ ಅನುದಾನ ಮೀಸಲಿಡಬೇಕು. ಜೋಡುಕರೆಯಲ್ಲಿ ನಡೆಯುವ ಎಂಟು ಸಾಂಪ್ರದಾಯಿಕ ಕಂಬಳಗಳಿಗೂ ಈ ಅನುದಾನ ಲಭ್ಯವಾಗಲಿದೆ. ಇದರೊಂದಿಗೆ ಬೈಂದೂರು ಮತ್ತು ಕುಂದಾಪುರ ಭಾಗಗಳಲ್ಲಿ ತಲತಲಾಂತರದಿಂದ ನಡೆಸಿಕೊಂಡು ಬರುತ್ತಿರುವ ಒಂಟಿ ಕರೆ ಕಂಬಳ ಆಯೋಜಕರನ್ನು ಸಹ ರಾಜ್ಯ ಕಂಬಳ ಅಸೋಸಿಯೇಶನ್​ಗೆ ಸೇರ್ಪಡೆಗೊಳಿಸಲಾಗುವುದು. ಮುಂದಿನ ದಿನಗಳಲ್ಲಿ ಸಾಂಪ್ರದಾಯಿಕ ಒಂಟಿ ಕರೆ ಕಂಬಳಗಳಿಗೂ ಸರ್ಕಾರದಿಂದ ಆರ್ಥಿಕ ಅನುದಾನ ಒದಗಿಸುವಂತೆ ಅಧಿಕೃತ ಮನವಿ ಸಲ್ಲಿಸಲಾಗುವುದು ಎಂದು ಹೇಳಿದರು.

ಮೈಸೂರು ಕಂಬಳ ವಿವಾದ
ಇತ್ತೀಚೆಗೆ ಮೈಸೂರು ಕಂಬಳ ಆಯೋಜನೆಯ ಸುತ್ತ ಸೃಷ್ಟಿಯಾಗಿರುವ ರಾಜಕೀಯ ಗದ್ದಲಗಳ ಕುರಿತು ಡಾ. ದೇವಿಪ್ರಸಾದ್​ ಶೆಟ್ಟಿ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಂಬಳದಲ್ಲಿ ಯಾವುದೇ ರಾಜಕೀಯವಿಲ್ಲ. ಇದು ಜಾತಿ, ಧರ್ಮ ಮತ್ತು ರಾಜಕೀಯ ಪಕ್ಷಗಳ ಮಿತಿಗಳನ್ನು ಮೀರಿ ಬೆಳೆದು ನಿಂತಿರುವ ಕರಾವಳಿಯ ಹೆಮ್ಮೆಯ ಕ್ರೀಡೆ. ಮೈಸೂರಿನ ಸಂಸದರು ವಿರೋಧ ವ್ಯಕ್ತಪಡಿಸುತ್ತಾರೆ ಎಂಬ ಒಂದೇ ಒಂದು ರಾಜಕೀಯ ಕಾರಣಕ್ಕೆ ಕರಾವಳಿ ಭಾಗದ ಬಿಜೆಪಿ ಶಾಸಕರು ಕೂಡ ಮೈಸೂರು ಕಂಬಳಕ್ಕೆ ಅಡ್ಡಗಾಲು ಹಾಕುತ್ತಿರುವುದು ಸರಿಯಲ್ಲ. ಕಂಬಳ ಕ್ರೀಡೆ ಕೇವಲ ಕರಾವಳಿ ಜಿಲ್ಲೆಗಳಿಗೆ ಮಾತ್ರ ಸೀಮಿತವಲ್ಲ. ಮೈಸೂರಿನಲ್ಲಿ ಕಂಬಳ ಯಾಕೆ ಆಯೋಜನೆಗೊಳ್ಳಬಾರದು ಎಂದು ಪ್ರಶ್ನಿಸಿದರು.

ಹಿಂದುಳಿದ ವರ್ಗದ ಆರಾಧ್ಯ ದೈವಗಳಾದ ಕೋಟಿ-ಚೆನ್ನಯ್ಯ, ಕಾಂತಬಾರೆ-ಬೂದಬಾರೆ ಹಾಗೂ ಸೂರ್ಯ-ಚಂದ್ರರ ಹೆಸರಿನಲ್ಲಿ ಕಂಬಳವನ್ನು ಅತ್ಯಂತ ಪವಿತ್ರವಾಗಿ ನಡೆಸಲಾಗುತ್ತದೆ. ಇದು ಇಡೀ ದೇಶಕ್ಕೇ ಮಾದರಿಯಾದ ವ್ಯವಸ್ಥೆ. ಕರಾವಳಿಯ ಜನಪ್ರತಿನಿಧಿಗಳು ಯಾವುದೇ ಪಕ್ಷದ ಕೈಗೊಂಬೆಗಳಂತೆ ವರ್ತಿಸದೇ ಧೈರ್ಯದಿಂದ ಕಂಬಳದ ವೈಭವವನ್ನು ರಾಜ್ಯದೆಲ್ಲೆಡೆ ಪಸರಿಸಲು ಕೈಜೋಡಿಸಬೇಕು ಎಂದು ಅವರು ಕರೆ ನೀಡಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net