ಕಾಸರಗೋಡು: ದೇಶದ ಸ್ವಾತಂತ್ರೃ ಚಳವಳಿಗೆ ಮಹತ್ವದ ತಿರುವು ತಂದುಕೊಟ್ಟಿದ್ದ ವಂದೇ ಮಾತರಂ ಪೂರ್ಣರೂಪದ ಹಾಡಿಗೆ ವಿರೋಧ ವ್ಯಕ್ತಪಡಿಸುತ್ತಿರುವ ಕೇರಳ ಸರ್ಕಾರದ ಧೋರಣೆ ಪ್ರತ್ಯೇಕತಾವಾದಿಗಳಿಗೆ ಹಾದಿಮಾಡಿಕೊಟ್ಟಂತಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಮಿತಿ ಸದಸ್ಯ ಪಿ.ಕೆ.ಕೃಷ್ಣದಾಸ್ ಹೇಳಿದ್ದಾರೆ.
ಕಾಸರಗೋಡಿನ ಹೊಸ ಬಸ್ ನಿಲ್ದಾಣದ ಬಳಿ ಬಿಜೆಪಿ ಕಾಸರಗೋಡು ಜಿಲ್ಲಾ ಸಮಿತಿ ಆಯೋಜಿಸಿದ್ದ ವಂದೇ ಮಾತರಂ ಸಭೆ ಉದ್ಘಾಟಿಸಿ ಮಾತನಾಡಿದರು.
ಮುಸ್ಲಿಂ ಲೀಗ್ ಮತ್ತು ಜಮಾತ್-ಎ-ಇಸ್ಲಾಮಿಯ ರಾಷ್ಟ್ರವಿರೋಧಿ ಅಜೆಂಡಾಗಳಿಗೆ ಮಣಿದಿರುವ ವಿ.ಡಿ.ಸತೀಶನ್ ನೇತೃತ್ವದ ಸರ್ಕಾರದ ಕ್ರಮ ಕಳವಳಕಾರಿಯಾಗಿದೆ. ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳಲ್ಲಿ ವಂದೇ ಮಾತರಂ ಮೇಲಿಲ್ಲದ ನಿಷೇಧವನ್ನು ಕೇರಳದಲ್ಲಿ ಹೇರಿರುವ ಕ್ರಮ ಮೂಲಕ ಕೇರಳವನ್ನು ಭಾರತದ ಉಳಿದ ಭಾಗಗಳಿಂದ ಬೇರ್ಪಡಿಸುವ ಸಂಚು ನಡೆಯುತ್ತಿರುವ ಶಂಕೆ ಹುಟ್ಟುಹಾಕುತ್ತದೆ. ಭಾರತವನ್ನು ವಿಭಜಿಸಲು ಕಾಂಗ್ರೆಸ್, ಮುಸ್ಲಿಂ ಲೀಗ್ ಮತ್ತು ಕಮ್ಯುನಿಸ್ಟ್ ಪಕ್ಷಗಳು ಮತ್ತೊಮ್ಮೆ ಒಂದಾಗುತ್ತಿವೆ ಕೃಷ್ಣದಾಸ್ ಆರೋಪಿಸಿದರು.
ಬಿಜೆಪಿ ಕಾಸರಗೋಡು ಜಿಲ್ಲಾ ಅಧ್ಯಕ್ಷೆ ಎಂ.ಎಲ್.ಅಶ್ವಿನಿ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಸಮಿತಿ ಸದಸ್ಯರಾದ ವಿ.ರವೀಂದ್ರನ್, ಸವಿತಾ ಟೀಚರ್, ರಾಮಪ್ಪ, ಎ.ವೇಲಾಯುಧನ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಪಿ.ಆರ್.ಸುನೀಲ್, ಮನುಲಾಲ್ ಮೇಲಾತ್, ವಕೀಲೆ ಸಹನಾ ಕುಂದರ್ ಉಪಸ್ಥಿತರಿದ್ದರು.