ನಿರ್ವಹಣೆಯಿಲ್ಲದೆ ಸೊರಗುತ್ತಿದೆ ಸರ್ಕಾರಿ ಮಹಿಳಾ ಆಸ್ಪತ್ರೆ

ಜಿಲ್ಲಾ ಸರ್ಕಾರಿ ತಾಯಿ ಮತ್ತು ಮಕ್ಕಳ ಆಸ್ಪತ್ರೆ
ಜಿಲ್ಲಾ ಸರ್ಕಾರಿ ತಾಯಿ ಮತ್ತು ಮಕ್ಕಳ ಆಸ್ಪತ್ರೆ
Published on
ಉಡುಪಿ: ಜಿಲ್ಲಾ ಸರ್ಕಾರಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ (ಬಿ.ಆರ್​.ಎಸ್​. ಆಸ್ಪತ್ರೆ) ತಗುಲಿರುವ ಗ್ರಹಣ ಇನ್ನೂ ವಿಮೋಚನೆಯಾದಂತೆ ಕಾಣುತ್ತಿಲ್ಲ. 2022ರಲ್ಲಿ ಖಾಸಗಿ ಸಂಸ್ಥೆಯಿಂದ ಸರ್ಕಾರ ವಶಕ್ಕೆ ಬಂದು 4 ವರ್ಷ ಕಳೆದರೂ ನಿರ್ವಹಣೆಗೆ ಅನುದಾನ ಕೊರತೆಯಿಂದ ಸೊರಗುತ್ತಿದೆ.
ನಗರದ ಹೃದಯ ಭಾಗದಲ್ಲಿ ದಾನಿ ಹಾಜಿ ಅಬ್ದುಲ್ಲಾ ಅವರು ನೀಡಿದ ಜಾಗದಲ್ಲಿ 70 ಬೆಡ್​ ಸಾಮರ್ಥ್ಯದ ಸರ್ಕಾರಿ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಹಲವು ದಶಕಗಳ ಕಾಲ ಚೆನ್ನಾಗಿ ನಡೆಯುತ್ತಿತ್ತು. ಆದರೆ 2015ರಲ್ಲಿ ಅಧಿಕಾರದಲ್ಲಿದ್ದ ಸಿದ್ದರಾಮಯ್ಯ ಸರ್ಕಾರ ಪಿಪಿಪಿ ಮಾದರಿಯಲ್ಲಿ ಅಸ್ಪತ್ರೆಯನ್ನು ಅಭಿವೃದ್ಧಿಪಡಿಸಲು ಜಾಗವನ್ನು ಬಿಆರ್​ಎಸ್​ ಸಂಸ್ಥೆಗೆ ಗುತ್ತಿಗೆ ನೀಡಿತು. 2017ರಲ್ಲಿ 6 ಮಹಡಿಯ ಕೇಂದ್ರೀಕೃತ ಹವಾನಿಯಂತ್ರಣ ವ್ಯವಸ್ಥೆ ಹೊಂದಿದ್ದ 200 ಬೆಡ್​ ಸಾಮರ್ಥ್ಯದ ಸುಸಜ್ಜಿತ ಆಸ್ಪತ್ರೆ ಕಾರ್ಯಾರಂಭ ಮಾಡಿತ್ತು. 2021ರಲ್ಲಿ ಬಿಆರ್​ ಶೆಟ್ಟಿ ಅವರ ಉದ್ಯಮ ಹಣಕಾಸಿನ ತೊಂದರೆ ಸಿಲುಕಿಕೊಂಡ ಪರಿಣಾಮ ಆಸ್ಪತ್ರೆಯನ್ನು ಮತ್ತೆ ಸರ್ಕಾರದ ವಶಕ್ಕೆ ನೀಡಿದ್ದರು. ಬೊಮ್ಮಾಯಿ ನೇತೃತ್ವದ ಸರ್ಕಾರ ಅಸ್ಪತ್ರೆ ನಿರ್ವಹಣೆಗೆ ಸ್ವಲ್ಪ ಅನುದಾನವನ್ನೂ ಮಂಜೂರುಗೊಳಿಸಿತ್ತು. ನಂತರ ಅಧಿಕಾರಕ್ಕೆ ಬಂದ ಕಾಂಗ್ರೆಸ್​ ಸರ್ಕಾರ ಸಿಬ್ಬಂದಿ ಮತ್ತು ವೈದ್ಯರ ಕೊರತೆ ನೀಗಿಸಿದೆ. ಆದರೆ ಆಸ್ಪತ್ರೆ ನಿರ್ವಹಣೆಗೆ ಯಾವುದೇ ಹೆಚ್ಚುವರಿ ಅನುದಾನ ಮಂಜೂರು ಮಾಡಿಲ್ಲ.
ವಿನ್ಯಾಸವೇ ಶಾಪವಾಯಿತೇ?
ಅಂತಾರಾಷ್ಟ್ರೀಯ ಗುಣಮಟ್ಟದ ವಿನ್ಯಾಸ ಹೊಂದಿರುವ 200 ಹಾಸಿಗೆ ಸಾಮರ್ಥ್ಯದ ದೊಡ್ಡ ಅಸ್ಪತ್ರೆಯನ್ನು ನಿರ್ವಹಿಸುವುದು ಸರ್ಕಾರಕ್ಕೆ ಆನೆ ಭಾರವಾಗಿದೆ. ಸರ್ಕಾರಿ ವ್ಯವಸ್ಥೆಗೆ ಪೂರಕವಾಗಿಲ್ಲದ 6 ಮಹಡಿ ಕಟ್ಟಡದ ವಿನ್ಯಾಸವೇ ಈಗ ಶಾಪವಾಗಿ ಪರಿಣಮಿಸಿದೆ. ಎತ್ತರ ಕಡಿಮೆ ಇರುವುದರಿಂದ ಸೀಲಿಂಗ್​ ಫ್ಯಾನ್​ ಅಳವಡಿಸಲು ಅವಕಾಶವಿಲ್ಲ. ಗೋಡೆಗಳು ಪಿಒಪಿನಿಂದ ಕೂಡಿರುವುದರಿಂದ ವಾಲ್​ ಫ್ಯಾನ್​ ಅಳವಡಿಸುವುದು ಕೂಡ ಅಸಾಧ್ಯವಾಗಿದೆ. ಕೇಂದ್ರೀಕೃತ ಹವಾನಿಯಂತ್ರಣ ವ್ಯವಸ್ಥೆ ಹೊಂದಿರುವುದರಿಂದ ಅನೇಕ ವಾರ್ಡ್​ಗಳಲ್ಲಿ ಕಿಟಕಿಗಳೇ ಇಲ್ಲ. ಹೀಗಾಗಿ ಎಸಿ ಇಲ್ಲದಿದ್ದರೆ ರೋಗಿಗಳು ಕತ್ತಲು ಮತ್ತು ಸೆಕೆಯಲ್ಲಿ ಕಾಲ ಕಳೆಯಬೇಕಿದೆ. ಮಳೆಗಾಲದಲ್ಲಿ ಕಟ್ಟಡದ ಒಳಗಡೆ ನೀರು ಸೋರಿಕೆಯಾಗಿ ಪಿಒಪಿ ಗೋಡೆಗಳು ಈಗಾಗಲೆ ಹಾನಿಗೀಡಾಗಿವೆ. ಮಳೆಗಾಲದಲ್ಲಿ ನೀರು ಸೋರಿಕೆಯಾಗಿ ಪಿಒಪಿ ಗೋಡೆಗಳು ಹಾನಿಗೀಡಾಗುತ್ತಿವೆ. ಎಎಂಸಿ (ವಾರ್ಷಿಕ ನಿರ್ವಹಣಾ ಒಪ್ಪಂದ) ಇಲ್ಲದಿರುವುದು ನಿರ್ವಹಣೆಗೆ ಅನುದಾನ ಬಾರದಿರಲು ಪ್ರಮುಖ ಕಾರಣವಾಗಿದೆ. ಎಸಿ ಇಲ್ಲದಿದ್ದರೆ ಎನ್​.ಐ.ಸಿ.ಯು ಮತ್ತು ಪಿ.ಐ.ಸಿ.ಯು ವಿಭಾಗಗಳಲ್ಲಿ ಕಾರ್ಯನಿರ್ವಹಿಸುವುದು ವೈದ್ಯರಿಗೆ ದೊಡ್ಡ ತಲೆನೋವಾಗಿದೆ.
ರಾವಣನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ
ಸರ್ಕಾರ ನೀಡುತ್ತಿರುವ ಅನುದಾನಗಳು ರಾವಣ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎಂಬಂತಾಗಿದೆ. 9 ವರ್ಷದ ಹಿಂದೆ ಬಿ.ಆರ್​. ಶೆಟ್ಟಿ ಅವರು ಆಸ್ಪತ್ರೆಯನ್ನು ನಿರ್ವಹಿಸುತ್ತಿದ್ದ ಸಮಯದಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಅತ್ಯಾಧುನಿಕ ಯಂತ್ರೋಪಕರಣಗಳನ್ನು ಅಳವಡಿಸಿದ್ದರು. ಆದರೆ, ಅವುಗಳ ಬಿಡಿಭಾಗಗಳು ಕರ್ನಾಟಕದಲ್ಲಿ ಲಭ್ಯವಿಲ್ಲ. ದುರಸ್ತಿಗೆ ಬೇಕಾದ ಭಾರಿ ಮೊತ್ತ ಸರ್ಕಾರದ ಬಳಿ ಇಲ್ಲದಿರುವುದು ಆಸ್ಪತ್ರೆಯ ದು@ಸ್ಥಿತಿಗೆ ಕಾರಣವಾಗಿದೆ. ಲಿಫ್ಟ್​, ಸೆಂಟ್ರಲೈಸ್ಡ್​ ಎಸಿ, ಆಕ್ಸಿಜನ್​ ಘಟಕ ಹಾಗೂ ಟ್ರೀಟ್ಮೆಂಟ್​ ಪ್ಲಾಂಟ್​ ಸೇರಿದಂತೆ ಇಡೀ ಆಸ್ಪತ್ರೆಯ ಸುಸ್ಥಿತಿಯ ನಿರ್ವಹಣೆಗೆ ವರ್ಷಕ್ಕೆ ಕನಿಷ್ಠ 43 ಲಕ್ಷ ರೂ. ಅಗತ್ಯವಿದೆ. ಆಸ್ಪತ್ರೆಯ ಎರಡು ಲಿಫ್ಟ್​ಗಳಲ್ಲಿ ಒಂದು ಮಾತ್ರ ಕಾರ್ಯನಿರ್ವಹಿಸುತ್ತಿದ್ದು, ಅದರ ದುರಸ್ತಿಗೆ 1.5 ಲಕ್ಷ ರೂ. ಅವಶ್ಯಕತೆಯಿದೆ. 3 ಎಸಿ ಚಿಲ್ಲರ್​ಗಳಲ್ಲಿ ಒಂದು ಮಾತ್ರ ಸುಸ್ಥಿತಿಯಲ್ಲಿದೆ. ಪ್ರಸ್ತುತ ತುರ್ತು ರಿಪೇರಿ ವೆಚ್ಚ 60 ಲಕ್ಷ ರೂ. ಬೇಕಾಗಿದೆ. ಎಸಿಯಿಂದಾಗಿ ಪ್ರತಿ ತಿಂಗಳಿಗೆ ಅಂದಾಜು 10 ಲಕ್ಷ ರೂ. ವಿದ್ಯುತ್​ ಬಿಲ್​ ಬರುತ್ತಿದೆ.

ಮನೆಯಿಂದ ಫ್ಯಾನ್​ ತಂದಿದ್ದ ರೋಗಿಗಳು!

ಆಸ್ಪತ್ರೆ ಕಟ್ಟಡ ಸಂಪೂರ್ಣ ಹವಾನಿಯಂತ್ರಿತ ವ್ಯವಸ್ಥೆಗೆ ಪೂರಕವಾಗಿ ವಿನ್ಯಾಸಗೊಳಿಸಲಾಗಿದೆ. ಪ್ರಸ್ತುತ 5 ಮಹಡಿಗಳಲ್ಲಿ 70 ಬೆಡ್​ ಸಾಮರ್ಥ್ಯದ ಆಸ್ಪತ್ರೆ ಕಾರ್ಯ ನಿರ್ವಹಿಸುತ್ತಿದ್ದು, ವಾರದ ಹಿಂದೆ ಆಸ್ಪತ್ರೆಯ ಸೆಂಟ್ರಲೈಸ್ಡ್​ ಎಸಿ ಘಟಕದ ಮೂರು ಚಿಲ್ಲರ್​ಗಳು ಕೆಟ್ಟು ನಿಂತ ಕಾರಣ ಕಿಟಕಿಗಳೂ ಇಲ್ಲದೆ ವಾರ್ಡ್​ಗಳಲ್ಲಿ ಬಿರು ಬಿಸಿಲಿನ ಬೇಗೆಗೆ ಗರ್ಭಿಣಿಯರು ಮತ್ತು ಬಾಣಂತಿಯರು ಬಹಳಷ್ಟು ಸಂಕಷ್ಟ ಅನುಭವಿಸಿದ್ದಾರೆ. ಕೆಲವರು ಮನೆಯಿಂದ ಟೇಬಲ್ ಫ್ಯಾನ್​ ತಂದು ದಿನದೂಡಿದ್ದಾರೆ. ಇದೀಗ ಒಂದು ಚಿಲ್ಲರ್​ ರಿಪೇರಿ ಮಾಡಲಾಗಿದ್ದು, ಎಸಿ ಪ್ರಾರಂಭವಾಗಿದೆ. ಆದರೆ 5 ಮಹಡಿಗೆ ಕೂಲಿಂಗ್​ ಸಾಕಾಗುತ್ತಿಲ್ಲ.

9 ವರ್ಷದ ಹಿಂದೆ ಆಸ್ಪತ್ರೆ ಪ್ರಾರಂಭವಾಗಿದ್ದು, ಕೆಲವು ಯಂತ್ರೋಪಕರಣಗಳ ಅವಧಿ ಮುಗಿಯುತ್ತಾ ಬಂದಿದೆ. ಹೀಗಾಗಿ ಸಮಸ್ಯೆ ಕಂಡುಬಂದಿದೆ. ಅಸ್ಪತ್ರೆ ನಿರ್ವಹಣೆಗೆ ಸುಮಾರು 40&45 ಲಕ್ಷ ರೂ. ಅಗತ್ಯವಿದ್ದು, ಈ ಬಗ್ಗೆ ಆಯುಕ್ತರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ತುರ್ತು ದುರಸ್ತಿ ಕಾರ್ಯಕ್ಕೆ 25 ಲಕ್ಷ ರೂ. ನೀಡಲಾಗಿದೆ. ಜೊತೆಗೆ ಮೆಸ್ಕಾಂ ಬಿಲ್​ ಬಾಕಿ ವೊತ್ತ 4 ಕೋಟಿ ರೂ. ಪಾವತಿಸಲಾಗಿದೆ.

— ಡಾ. ಅಶೋಕ್​, ಜಿಲ್ಲಾ ಸರ್ಜನ್​, ಉಡುಪಿ


ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net