ಬೆಳ್ತಂಗಡಿ: ಪ್ರಜಾಸೇವೆ ಅತ್ಯಂತ ಉತ್ತಮ ಕಲ್ಪನೆಯಾಗಿದ್ದು, ಜನರ ಸಮಸ್ಯೆಗಳಿಗೆ ಇದರಲ್ಲಿ ಪರಿಹಾರ ಸಿಗುತ್ತದೆ. ಸಮಸ್ಯೆ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನವನ್ನು ಅಧಿಕಾರಿಗಳು ಮಾಡಬೇಕು ಎಂದು ಶಾಸಕ ಹರೀಶ್ ಪೂಂಜ ಹೇಳಿದರು.
ವೇಣೂರು ಭರತೇಶ ಸಮುದಾಯ ಭವನದಲ್ಲಿ ಶನಿವಾರ ಬೆಳ್ತಂಗಡಿ ತಾಲೂಕುಮಟ್ಟದ ವೇಣೂರು ಹೋಬಳಿಯ ಪ್ರಜಾಸೇವೆ ಆಂದೋಲನ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪ್ರಜಾಸೇವಾ ಇಲಾಖೆಯನ್ನು ಹೊಸದಾಗಿ ಪರಿಚಯಿಸುವ ಮೂಲಕ ಸರ್ಕಾರವನ್ನೇ ರಾಜ್ಯದ ಜನಸಾಮಾನ್ಯರ ಮನೆಬಾಗಿಲಿಗೆ ಕೊಂಡೊಯ್ದು ದೂರು, ಸಮಸ್ಯೆಗಳಿಗೆ ಕಾನೂನಿನ ಚೌಕಟ್ಟಿನಡಿ ಸ್ಥಳದಲ್ಲೇ ಸೂಕ್ತ ಪರಿಹಾರ ಕಲ್ಪಿಸುವ ಜನಸ್ನೇಹಿ ಆಡಳಿತಕ್ಕೆ ಹೊಸ ಆಂದೋಲನ ಆರಂಭಿಸಲಾಗಿದೆ ಎಂದರು.
ತಹಸೀಲ್ದಾರ್ ಎಸ್.ಎನ್.ನರಗುಂದ, ತಾಪಂ ಕಾರ್ಯನಿರ್ವಹಣಾಧಿಕಾರಿ ಭವಾನಿಶಂಕರ್, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಪದ್ಮನಾಭ ಸಾಲ್ಯಾನ್, ವೇಣೂರು ಗ್ರಾಪಂ ಅಧ್ಯಕ್ಷೆ ಮಲ್ಲಿಕಾ, ಬೆಳ್ತಂಗಡಿ ಪೊಲೀಸ್ ವೃತ್ತ ನಿರೀಕ್ಷಕ ರವಿ ಬಿ.ಎಸ್. ಉಪಸ್ಥಿತರಿದ್ದರು.
ತಾಲೂಕುಮಟ್ಟದ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು. ವೇಣೂರು ಗ್ರಾಪಂ ಅಭಿವೃದ್ಧಿ ಅಧಿಕಾರಿ ಪ್ರಕಾಶ್ ಸ್ವಾಗತಿಸಿದರು. ಗ್ರಾಮ ಆಡಳಿತಾಧಿಕಾರಿ ಹೇಮಾ ಕಾರ್ಯಕ್ರಮ ನಿರೂಪಿಸಿದರು.
ಪ್ರತಿ ತಿಂಗಳ ಎರಡನೇ, ನಾಲ್ಕನೇ ಶನಿವಾರ ಸಭೆ
ಸರ್ಕಾರದ ನೂತನ ಯೋಜನೆಯಡಿ ಪ್ರತಿ ಶನಿವಾರ ತಾಲೂಕು, ಹೋಬಳಿಮಟ್ಟದ ಪ್ರಜಾಸೇವೆ ಅಭಿಯಾನ ಸಭೆಗಳನ್ನು ಪರ್ಯಾಯವಾಗಿ ರಾಜ್ಯಾದ್ಯಂತ ನಡೆಸಲಿದ್ದು, ಪ್ರತಿ ತಿಂಗಳ ಮೊದಲ ಮತ್ತು ಮೂರನೇ ಶನಿವಾರ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ತಾಲೂಕು ಕೇಂದ್ರದಲ್ಲಿ ಸಭೆ ನಡೆಯಲಿದೆ. ಎರಡನೇ ಮತ್ತು ನಾಲ್ಕನೇ ಶನಿವಾರ ಸ್ಥಳೀಯ ಶಾಸಕರ ಅಧ್ಯಕ್ಷತೆಯಲ್ಲಿ ತಾಲೂಕು, ಹೋಬಳಿಮಟ್ಟದಲ್ಲಿ ಸಭೆ ಆಯೋಜಿಸಲಾಗುತ್ತದೆ.