ಕಾಸರಗೋಡು: ಪರಿಶಿಷ್ಟ ಜಾತಿಗೆ ಸವಲತ್ತು ಕಲ್ಪಿಸಲು ವಿಳಂಬ ಧೋರಣೆ ಅನುಸರಿಸುತ್ತಿರುವ ವಿ.ಡಿ.ಸತೀಶನ್ ನೇತೃತ್ವದ ರಾಜ್ಯ ಸರ್ಕಾರ ಪಿಣರಾಯಿ ವಿಜಯನ್ ಅವರ ಹಾದಿಯನ್ನೇ ಮುಂದುವರಿಸಿದೆ ಎಂದು ಎಸ್‌ಸಿ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ವಿ.ಸಿ.ಬಿನೀಶ್ ಮಾಸ್ಟರ್ ಟೀಕಿಸಿದ್ದಾರೆ.
ಎಸ್‌ಸಿ ಮೋರ್ಚಾ ಕಾಸರಗೋಡು ಜಿಲ್ಲಾ ಸಮಿತಿ, ಬಿಜೆಪಿ ಜಿಲ್ಲಾ ಕಚೇರಿ ಡಾ.ಶ್ಯಾಮಾಪ್ರಸಾದ್ ಮುಖರ್ಜಿ ಮಂದಿರದಲ್ಲಿ ಆಯೋಜಿಸಿದ್ದ ಮಹಾತ್ಮ ಅಯ್ಯಂಕಾಳಿ ಜಯಂತಿ ಆಚರಣೆ ಉದ್ಘಾಟಿಸಿ ಮಾತನಾಡಿದರು.
ಸರ್ಕಾರ ಈಗಾಗಲೇ ವಿದ್ಯಾರ್ಥಿವೇತನ ಮತ್ತು ಇತರ ಸ್ಟೈಫಂಡ್ ಸೇರಿದಂತೆ 377 ಕೋಟಿ ರೂ.ಗೂ ಹೆಚ್ಚಿನ ಮೊತ್ತ ವಿತರಿಸದೆ ಬಾಕಿಯಿರಿಸಿಕೊಂಡಿದೆ. ಪಿಎಸ್‌ಸಿ ರ‌್ಯಾಂಕ್ ಪಟ್ಟಿಯಲ್ಲಿ ಸ್ಥಾನ ಪಡೆದ ಪರಿಶಿಷ್ಟ ಜಾತಿಯ ಹಲವರಿಗೆ ಇನ್ನೂ ನೇಮಕಾತಿ ಆಗಿಲ್ಲ. ಸರ್ಕಾರಿ ಸಂಸ್ಥೆಗಳಲ್ಲಿನ ಎಸ್‌ಸಿ ಮೀಸಲಾತಿ ಹುದ್ದೆಗಳಿಗೆ ತಾತ್ಕಾಲಿಕ ನೇಮಕಾತಿಗಳನ್ನು ನಡೆಸುವ ಮೂಲಕ ಎಡ ಹಾಗೂ ಐಕ್ಯರಂಗ ಸರ್ಕಾರ ಪರಿಶಿಷ್ಟ ಜಾತಿ ಸಮುದಾಯಗಳಿಗೆ ದ್ರೋಹ ಬಗೆಯುತ್ತಾ ಬಂದಿದೆ ಎಂದು ಬಿನೀಶ್ ಆರೋಪಿಸಿದರು.
ಎಸ್‌ಸಿ ಮೋರ್ಚಾ ಜಿಲ್ಲಾಧ್ಯಕ್ಷ ನಾರಾಯಣ ಪೆರಡಾಲ ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ಜಿಲ್ಲಾಧ್ಯಕ್ಷೆ ಎಂ.ಎಲ್.ಅಶ್ವಿನಿ, ರಾಜ್ಯ ಸಮಿತಿ ಸದಸ್ಯ ರಾಮಪ್ಪ ಮಂಜೇಶ್ವರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ಆರ್.ಸುನೀಲ್, ಎಸ್‌ಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಎ.ಕೆ.ಕಯ್ಯರು, ಜಿಲ್ಲಾ ಕಾರ್ಯದರ್ಶಿ ಸಂಜೀವ ಪುಳಿಕ್ಕೂರು, ಜಿಲ್ಲಾ ಸೆಲ್ ಸಂಯೋಜಕ ಸುಕುಮಾರ್ ಕುದ್ರೆಪಾಡಿ, ಶ್ರೀವಿದ್ಯಾ, ಎಸ್‌ಸಿ ಮೋರ್ಚಾ ಮಾಜಿ ಅಧ್ಯಕ್ಷ ಸಂಪತ್ ಕುಮಾರ್ ಪೆರ್ಣಡ್ಕ, ರಘು ಎಂ. ಉಪಸ್ಥಿತರಿದ್ದರು.