ಉಡುಪಿಯಲ್ಲಿ ಭ್ರಷ್ಟ ವ್ಯವಸ್ಥೆಯಿಂದ ಹಳಿ ತಪ್ಪಿದ ಆಡಳಿತ: ಮಟ್ಟಾರ್

ಮಟ್ಟಾರು ರತ್ನಾಕರ ಹೆಗ್ಡೆ
ಮಟ್ಟಾರು ರತ್ನಾಕರ ಹೆಗ್ಡೆ
Published on
ಉಡುಪಿ: ಜಿಲ್ಲೆಯಲ್ಲಿ ಭ್ರಷ್ಟ ವ್ಯವಸ್ಥೆ ತಾಂಡವವಾಡುತ್ತಿದ್ದು, ಆಡಳಿತ ಸಂಪೂರ್ಣವಾಗಿ ಹಳಿ ತಪ್ಪಿದೆ. ಕಾಂಗ್ರೆಸ್​ ನಾಯಕರ ಕುಮ್ಮಕ್ಕಿನಿಂದ ನಡೆಯುತ್ತಿರುವ ಆಡಳಿತ ವೈಫಲ್ಯದ ವಿರುದ್ಧ ಬಿಜೆಪಿ ಶೀಘ್ರದಲ್ಲೇ ಬೃಹತ್​ ಪ್ರತಿಭಟನೆ ಹಾಗೂ ವಿವಿಧ ಇಲಾಖೆಗಳ ಎದುರು ಸತ್ಯಾಗ್ರಹ ನಡೆಸಲಿದೆ ಎಂದು ಬಿಜೆಪಿ ಕಾರ್ಯಕಾರಿಣಿ ಸದಸ್ಯ ಮಟ್ಟಾರು ರತ್ನಾಕರ ಹೆಗ್ಡೆ ತಿಳಿಸಿದ್ದಾರೆ.
ಶುಕ್ರವಾರ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾರ್ವಜನಿಕರಿಗೆ ರಕ್ಷಣೆ ನೀಡಿ ನ್ಯಾಯ ಒದಗಿಸಬೇಕಾದ ಪೊಲೀಸ್​ ಇಲಾಖೆಯ ಉನ್ನತ ಹುದ್ದೆಯಲ್ಲಿರುವ 3 ಅಧಿಕಾರಿಗಳು ಭ್ರಷ್ಟಾಚಾರದಲ್ಲಿ ಭಾಗಿಯಾಗಿರುವುದು ಸ್ಪಷ್ಟಗೊಂಡು ಅಮಾನತಾಗಿರುವುದು ಜಿಲ್ಲೆಯ ದುಸ್ಥಿತಿಗೆ ಕೈಗನ್ನಡಿಯಾಗಿದೆ. ಭ್ರಷ್ಟಾಚಾರ ಕೇವಲ ಅಧಿಕಾರಿಗಳಿಂದ ಮಾತ್ರ ನಡೆಯುತ್ತಿಲ್ಲ. ಕಾಂಗ್ರೆಸ್​ ಪರಾಜಿತ ಅಭ್ಯರ್ಥಿಗಳು ಮತ್ತು ಮುಖಂಡರು ರಾಜ್ಯ ಸರ್ಕಾರದ ಸಚಿವರ ಕುಮ್ಮಕ್ಕಿನಿಂದ ಈ ದಂಧೆಗಳನ್ನು ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.

ಪೊಲೀಸ್​ ಇಲಾಖೆ ಮಾತ್ರವಲ್ಲದೆ, ಅಬಕಾರಿ ಇಲಾಖೆ, ಪಿಡಬ್ಲ್ಯೂಡಿ, ನಗರಾಡಳಿತ, ನಗರಾಭಿವೃದ್ಧಿ ಪ್ರಾಧಿಕಾರ ಹಾಗೂ ಶಿಕ್ಷಣ ಇಲಾಖೆಗಳಲ್ಲಿ ಯಾವುದೇ ಕಡತಗಳು ಮುಂದೆ ಸಾಗುತ್ತಿಲ್ಲ. ಕಾಂಗ್ರೆಸ್​ ಮುಖಂಡರ ಶಿಫಾರಸು ಇಲ್ಲದೆ ಯಾವ ಕೆಲಸವೂ ಆಗುತ್ತಿಲ್ಲ ಎಂದರು.

ಪೊಲೀಸ್​ ಇಲಾಖೆಯು ಕೇವಲ ಫೇಸ್​ಬುಕ್​, ಇನ್​ಸ್ಟಾಗ್ರಾಮ್​ ಖಾತೆಗಳನ್ನು ನೋಡಿಕೊಂಡು ದೇಶ, ಧರ್ಮದ ಬಗ್ಗೆ ಬರೆಯುವವರ ಮೇಲೆ ಕೇಸ್​ ಹಾಕುವುದರಲ್ಲಿ ನಿರತವಾಗಿದೆ. ಕೊಲೆ, ದರೋಡೆ, ಸುಲಿಗೆಯಂತಹ ನೈಜ ಅಪರಾಧಗಳನ್ನು ತಡೆಯಲು ಯಾವುದೇ ಕಾರ್ಯಾಚರಣೆ ನಡೆಸುತ್ತಿಲ್ಲ. ಬಿಜೆಪಿ ದೂರು ನೀಡಿದರೆ ಎ್​ ಐ ಆರ್​ ಆಗುತ್ತಿಲ್ಲ. ಕಾಂಗ್ರೆಸ್​ ದೂರಿಗೆ ಶ್ರೀಘ್ರ ಸ್ಪಂದಿಸುತ್ತಿದ್ದಾರೆ ಎಂದು ಆರೋಪಿಸಿದರು.

ಬಿಜೆಪಿ ಬಾವುಟ ಸುಟ್ಟಿರುವುದು ಸರಿಯಲ್ಲ
ಕಾಂಗ್ರೆಸ್​ ನೇತೃತ್ವದಲ್ಲಿ ಉಡುಪಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಬಿಜೆಪಿ ಚಿಹ್ನೆಯಿರುವ ಪ್ರತಿಕೃತಿಯನ್ನು ದಹಿಸಿರುವುದು ಸರಿಯಲ್ಲ. ಈ ಬಗ್ಗೆ ಕಾನೂನು ಕ್ರಮಕ್ಕೆ ಚಿಂತನೆ ನಡೆಸಲಾಗಿದೆ. ರಾಮಮಂದಿರ ಹುಂಡಿ ಹಣವನ್ನು ಬಿಜೆಪಿ ಅಥವಾ ಸಂ ಪರಿವಾರದ ಕಾರ್ಯಕರ್ತರು ಕದಿಯಲಿಲ್ಲ. ಕೆಲಸಗಾರರಿಂದ ಈ ಕೃತ್ಯ ನಡೆದಿದ್ದು, ಈ ಬಗ್ಗೆ ಕ್ರಮವಹಿಸಲಾಗಿದೆ ಎಂದರು. ವಕ್ತಾರ ದಿವಾಕರ ಶೆಟ್ಟಿ, ಮಧುಕರ ಮುದ್ರಾಡಿ, ನಗರಾಧ್ಯಕ್ಷ ದಿನೇಶ್​ ಅಮೀನ್​, ಶಶಾಂಕ್ ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net