ಮೂಲ್ಕಿ: ಮೂಲ್ಕಿ ಬಸ್ ನಿಲ್ದಾಣದ ಬಳಿ ಟ್ರಾಫಿಕ್ ನಿಯಂತ್ರಣಕ್ಕೆ ಅಳವಡಿಸಿದ್ದ ಪೊಲೀಸ್ ಚೌಕಿಗೆ ಡಿಕ್ಕಿ ಹೊಡೆದು ಗೂಡ್ಸ್ ಕಂಟೇನರ್ ಚಾಲಕ ಪರಾರಿಯಾಗಿದ್ದಾನೆ.
ಕೇರಳದಿಂದ ಗೋವಾ ಕಡೆಗೆ ಹೋಗುತ್ತಿದ್ದ ಬೃಹತ್ ಗಾತ್ರದ ಕಂಟೇನರ್ ಮಧ್ಯರಾತ್ರಿ 12ಗಂಟೆಗೆ ಮೂಲ್ಕಿ ಬಸ್ ನಿಲ್ದಾಣ ತಲುಪುತ್ತಿದ್ದಂತೆ ಅದರ ಚಾಲಕನ ನಿಯಂತ್ರಣ ತಪ್ಪಿ ಪೊಲೀಸ್ ಚೌಕಿಗೆ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಪೊಲೀಸ್ ಚೌಕಿ. ಕಿತ್ತು ಹೋಗಿ ಹೆದ್ದಾರಿ ನಡುವೆ ಬಿದ್ದಿದೆ. ಅಪಘಾತದ ನಂತರ ಚಾಲಕ ಸರ್ವೀಸ್ ರೋಡ್ ಮುಖಾಂತರ ಸ್ಥಳದಿಂದ ಕಂಟೈನರ್ ಸಮೇತ ಪರಾರಿಯಾಗಿದ್ದಾನೆ.
ಹೆದ್ದಾರಿ ನಡುವಿನಲ್ಲಿ ಬೃಹತ್ ಗಾತ್ರದ ಪೊಲೀಸ್ ಚೌಕಿ ಬಿದ್ದುಕೊಂಡಿದ್ದು, ದಾರಿದೀಪದ ಅವ್ಯವಸ್ಥೆಯಿಂದ ಯಾರ ಗಮನಕ್ಕೂ ಬಂದಿರಲಿಲ್ಲ. ಆದರೆ ಬೆಳಗ್ಗಿನ ಜಾವ 3 ಗಂಟೆಗೆ ಮಂಗಳೂರು ಕಡೆಯಿಂದ ಬಂದ ಕಾರು ಚಾಲಕ ಪೊಲೀಸ್ ಚೌಕಿ ಗಮನಿಸಿ ಏಕಾಏಕಿ ಬ್ರೇಕ್ ಹಾಕಿದ್ದು ಅಪಾಯ ತಪ್ಪಿದೆ.
ಸ್ಥಳೀಯರು ಮೂಲ್ಕಿ ಪೊಲೀಸ್ ಹಾಗೂ ಮಂಗಳೂರು ಉತ್ತರ ಟ್ರಾಫಿಕ್ ಪೊಲೀಸರಿಗೆ ಮಾಹಿತಿ ನೀಡಿದ್ದು. ಸ್ಥಳದಲ್ಲಿದ್ದ ಸಿಸಿ ಕ್ಯಾಮರಾ ಪರಿಶೀಲಿಸಿದಾಗ ಅಪಘಾತ ನಡೆಸಿದ ಕಂಟೇನರ್ ಪರಾರಿಯಾದ ಬಗ್ಗೆ ಕಂಡು ಬಂದಿದೆ. ಆದರೆ ಕಂಟೇನರ್‌ನ ನಂಬರ್ ಪ್ಲೇಟ್ ಸ್ಪಷ್ಟವಾಗದ ಕಾರಣ ಪರಿಶೀಲಿಸಲು ಹೆಜಮಾಡಿ ಟೋಲ್ ಸಿಬ್ಬಂದಿಯನ್ನು ಸಂಪರ್ಕಿಸಿ ಮಾಹಿತಿ ಪಡೆದಾಗ ಆತ ಕಾರವಾರದಲ್ಲಿರುವ ಬಗ್ಗೆ ತಿಳಿದು ಬಂದಿದ್ದು ವಾಪಸ್ ಬರುವಂತೆ ಪೊಲೀಸರು ಸೂಚನೆ ನೀಡಿದ್ದಾರೆ.