ಕುಂಬಳೆ: ನಾಡಿನ ಅಭಿವೃದ್ಧಿಗೆ ಶೌಚಗೃಹ ಮತ್ತು ಕಟ್ಟಡಗಳನ್ನು ನಿರ್ಮಿಸದರೆ ಮಾತ್ರ ಸಾಕಾಗುವುದಿಲ್ಲ, ಅವುಗಳನ್ನು ಉತ್ತಮವಾಗಿ ನಿರ್ವಹಿಸಿ ಸ್ವಚ್ಛವಾಗಿಡುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ ಎಂದು ಸ್ಥಳೀಯಾಡಳಿತ ಇಲಾಖೆ ಸಚಿವ ಕೆ.ಎಂ.ಶಾಜಿ ಹೇಳಿದರು.
ಕುಂಬಳೆ ಗ್ರಾಮ ಪಂಚಾಯಿತಿಯ ‘ಟೇಕ್ ಎ ಬ್ರೇಕ್’ ಕಟ್ಟಡವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದ ಅವರು, ಜನಸಾಮಾನ್ಯರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದು ಸ್ಥಳೀಯಾಡಳಿತ ಇಲಾಖೆಯ ಕೆಲಸ ಎಂದರು.
ಬಾಡಿಗೆಗೆ ಗೃಹೋಪಯೋಗಿ ವಸ್ತುಗಳನ್ನು ವಿತರಿಸುವ ಹಸಿರು ಕ್ರಿಯಾಸೇನೆಯ ಉಪಕ್ರಮ ಮತ್ತು ಟ್ರಾಲಿಗಳ ವಿತರಣೆಗೆ ಸಚಿವ ಚಾಲನೆ ನೀಡಿದರು.
ಮಂಜೇಶ್ವರ ಶಾಸಕ ಎ.ಕೆ.ಎಂ.ಅಶ್ರಫ್ ಅಧ್ಯಕ್ಷತೆ ವಹಿಸಿದ್ದರು. ಸಂಸದ ರಾಜಮೋಹನ್ ಉಣ್ಣಿತ್ತಾನ್, ಕುಂಬಳೆ ಗ್ರಾಪಂ ಅಧ್ಯಕ್ಷ ವಿ.ಪಿ.ಅಬ್ದುಲ್ ಖಾದರ್, ಕಾಸರಗೋಡು ಬ್ಲಾಕ್ ಪಂಚಾಯಿತಿ ಅಧ್ಯಕ್ಷ ಅಬ್ದುಲ್ಲ ಕುಂಞಿ ಚೆರ್ಕಳ, ಕುಂಬಳೆ ಗ್ರಾಪಂ ಉಪಾಧ್ಯಕ್ಷ ಎಂ.ಬಲ್ಕೀಸ್, ಮಂಜೇಶ್ವರ ಬ್ಲಾಕ್ ಪಂಚಾಯಿತಿ ಅಧ್ಯಕ್ಷ ಸೈಪುಲ್ಲಾ ತಂಙಳ್ ಮೊದಲಾದವರು ಉಪಸ್ಥಿತರಿದ್ದರು. ಕುಂಬಳೆ ಗ್ರಾಪಂ ಅಧ್ಯಕ್ಷ ವಿ.ಪಿ.ಅಬ್ದುಲ್ ಖಾದರ್ ಸ್ವಾಗತಿಸಿದರು. ಕೆ.ಸಿದ್ಧಾರ್ಥ್ ವಂದಿಸಿದರು.