ಉಡುಪಿ: ಕ್ರೈಸ್ತ ಸಮುದಾಯದ ಪವಿತ್ರ ದಿನವಾದ ಶುಭ ಶುಕ್ರವಾರ (ಗುಡ್ ಫ್ರೈಡೆ)ವನ್ನು ಉಡುಪಿ ಜಿಲ್ಲಾದ್ಯಂತ ಸಮುದಾಯದವರು ಉಪವಾಸ, ಧ್ಯಾನ ಹಾಗೂ ಪ್ರಾರ್ಥನೆಯೊಂದಿಗೆ ಆಚರಿಸಿದರು. ಜಿಲ್ಲೆಯ ಎಲ್ಲ ಚರ್ಚ್ಗಳಲ್ಲೂ ಬೆಳಗ್ಗಿನಿಂದ ಪ್ರಾರ್ಥನೆ, ಧ್ಯಾನ, ಯೇಸುವಿನ ಶಿಲುಬೆ ಹಾದಿಯ ವಾಚನ ಜರುಗಿತು.
ಧರ್ಮಪ್ರಾಂತದ ಪ್ರಧಾನ ದೇವಾಲಯವಾದ ಕಲ್ಯಾಣಪುರ ಮಿಲಾಗ್ರಿಸ್ ಕ್ಯಾಥೆಡ್ರಲ್ನಲ್ಲಿ ಧರ್ಮಪ್ರಾಂತದ ಪ್ರೇಷಿತ ಆಡಳಿತಾಧಿಕಾರಿ ಅತಿ ವಂ. ಜೆರಾಲ್ಡ್ ಐಸಾಕ್ ಲೋಬೊ ಪ್ರಾರ್ಥನಾ ವಿಧಿ ನೆರವೇರಿಸಿದರು.
ತ್ಯಾಗದ ಸಂದೇಶ
ಈ ವೇಳೆ ಸಂದೇಶ ನೀಡಿದ ಬಿಷಪ್ ಜೆರಾಲ್ಡ್ ಲೋಬೊ, ಶತ್ರುಗಳ ವಶವಾಗಿದ್ದ ಯೇಸುಕ್ರಿಸ್ತರು ಈ ಲೋಕ ಉಳಿಸಲು ಕ್ರೂರ ಶಿಲುಬೆಯ ಮರಣಕ್ಕೆ ಒಳಗಾದರು. ಪಾಪ ಮಾಡಿದ ಪ್ರತಿ ಮನುಷ್ಯನಿಗಾಗಿ ಅವರು ಶಿಲುಬೆಯ ಹೊತ್ತು ಲೋಕ ಕಾಪಾಡಲು ತಮ್ಮ ಪ್ರಾಣವನ್ನೇ ಅರ್ಪಿಸಿದರು. ಯೇಸುಕ್ರಿಸ್ತರು ತನ್ನ ಗೆಳೆಯನಿಗಾಗಿ ಪ್ರಾಣ ಕೊಡುವ ಪ್ರೀತಿಗಿಂತ ಮಿಗಿಲಾದದ್ದು ಮತ್ತೊಂದಿಲ್ಲ ಎನ್ನುವುದನ್ನು ತೋರ್ಪಡಿಸಿದರು. ಕ್ರೂರ ಶಿಲುಬೆಯ ಮರಣಕ್ಕೆ ಒಳಗಾದ ಯೇಸುಕ್ರಿಸ್ತರು ಜಗತ್ತಿಗೆ ಪ್ರೀತಿ, ಕ್ಷಮೆ ಮತ್ತು ತ್ಯಾಗದ ಸಂದೇಶ ಸಾರಿದರು ಎಂದರು.
ಚರ್ಚ್ನ ಪ್ರಧಾನ ಧರ್ಮಗುರು ವಂ.ಫರ್ಡಿನಾಂಡ್ ಗೊನ್ಸಾಲ್ವಿಸ್, ಸಹಾಯಕ ಧರ್ಮಗುರು ವಂ.ಪ್ರದೀಪ್ ಕಾಡೋರ್ಜಾ, ಸಂಪದ ಸಂಸ್ಥೆಯ ನಿರ್ದೇಶಕ ವಂ.ರೆಜಿನಾಲ್ಡ್ ಪಿಂಟೊ, ಪಿಲಾರ್ ಸಭೆಯ ವಂ.ವಿನ್ಸೆಂಟ್ ಮಚಾದೊ ಉಪಸ್ಥಿತರಿದ್ದರು.
ಶಿಲುಬೆಯ ಮೆರವಣಿಗೆ
ಜಿಲ್ಲೆಯ ಕೆಲವು ಚರ್ಚ್ಗಳಲ್ಲಿ ಯೇಸುಕ್ರಿಸ್ತರ ಬಂಧನ, ಶಿಲುಬೆಯ ಮೇಲೆ ಮರಣವನ್ನಪ್ಪುವ ತನಕದ ಘಟನೆಗಳನ್ನು ಪ್ರಸ್ತುತ ಪಡಿಸಲಾಯಿತು. ಚರ್ಚ್ನಲ್ಲಿ ಧರ್ಮಗುರುಗಳು ರಕ್ತವರ್ಣದ ಪೂಜಾ ಬಟ್ಟೆ ಧರಿಸಿ, ಯೇಸುಕ್ರಿಸ್ತನ ಕೊನೆಯ ಗಳಿಗೆಗಳ ವೃತ್ತಾಂತ ಓದಿದರು. ಬಳಿಕ ಮೆರವಣಿಗೆಯಲ್ಲಿ ಶಿಲುಬೆ ತರಲಾಯಿತು. ಭಕ್ತರು ತಮ್ಮ 40 ದಿನಗಳ ತ್ಯಾಗದ ಉಳಿಕೆಯ ಹಣವನ್ನು ಬಡವರಿಗಾಗಿ ನೀಡಿದರು.