

ಉಡುಪಿ: ದೆಹಲಿಯ ಶ್ರೀಕೃಷ್ಣ ಭಕ್ತರೊಬ್ಬರು ಸುಮಾರು 2 ಕೋಟಿ ರೂ. ವೆಚ್ಚದಲ್ಲಿ ಸಿದ್ಧಪಡಿಸಿರುವ ಹೊನ್ನಿನ ಭಗವದ್ಗೀತಾ ಹೊತ್ತಗೆ ಜ. 8ರಂದು ಸಾಯಂಕಾಲ 5 ಗಂಟೆಗೆ ಕೃಷ್ಣಸನ್ನಿಧಿಯಲ್ಲಿ ಲೋಕಾರ್ಪಣೆಗೊಳ್ಳಲಿದೆ.
ಭಗವದ್ಗೀತೆಯ 18 ಅಧ್ಯಾಯಗಳ 700 ಶ್ಲೋಕಗಳನ್ನು ಚಿನ್ನದ ಹಾಳೆಯಲ್ಲಿ ಅಂದವಾಗಿ ಮುದ್ರಿಸಲಾಗಿದ್ದು, ಹೊತ್ತಗೆಯನ್ನು ಚಿನ್ನದ ರಥದಲ್ಲಿಟ್ಟು ರಥಬೀದಿಯಲ್ಲಿ ಮೆರವಣಿಗೆ ಮೂಲಕ ಕೃಷ್ಣನ ಸನ್ನಿಧಿಗೆ ತರಲಾಗುವುದು. ನಂತರ ರಾಜಾಂಗಣದಲ್ಲಿ ಪರ್ಯಾಯ ಪುತ್ತಿಗೆ ಶ್ರೀ ಸುಗುಣೇಂದ್ರತಿರ್ಥ ಶ್ರೀಪಾದರು ಮತ್ತು ಕಿರಿಯ ಶ್ರೀ ಸುಶ್ರೀಂದ್ರತಿರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ ಲೋಕಾರ್ಪಣೆ ಕಾರ್ಯಕ್ರಮ ಆಯೋಜಿಸಲಾಗಿದೆ.
ಅಯೋಧ್ಯೆ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್, ಟ್ರಸ್ಟ್ ವಿಶ್ವಸ್ಥ ಡಾ.ಅನಿಲ್ ಮಿಶ್ರಾ, ಪಂಢರಾಪುರ ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ಗಹನೀನಾಥ ಜ್ಞಾನೇಶ್ವರ ಮಹಾರಾಜ್ ಔಶೇಕರ್, ಅಳಂದ ಶ್ರೀ ಜ್ಞಾನೇಶ್ವರ ಮಹಾರಾಜ್ ಪೀಠದ ಪ್ರಧಾನ ಅರ್ಚಕ ಗಿರೀಶ್ ತುಕ್ರಿ ಅಭ್ಯಾಗತರಾಗಿ ಆಗಮಿಸುವರು ಎಂದು ಪರ್ಯಾಯ ಮಠದ ದಿವಾನ ನಾಗರಾಜ ಆಚಾರ್ಯ ಮತ್ತು ಅಂತಾರಾಷ್ಟ್ರೀಯ ಕಾರ್ಯದರ್ಶಿ ಪ್ರಸನ್ನ ಆಚಾರ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.