ಮೃತರ ಆತ್ಮಶಾಂತಿಗಾಗಿ ಪ್ರೇತ ವಿವಾಹ

 ಮುಂಡೂರು ಗ್ರಾಮದ ಬಾರಿಕೆ ಎಂಬಲ್ಲಿ ನಡೆದ ಪ್ರೇತ ವಿವಾಹ.
ಮುಂಡೂರು ಗ್ರಾಮದ ಬಾರಿಕೆ ಎಂಬಲ್ಲಿ ನಡೆದ ಪ್ರೇತ ವಿವಾಹ.
Published on
ವಿಜಯವಾಣಿ ಸುದ್ದಿಜಾಲ ಪುತ್ತೂರು ಗ್ರಾಮಾಂತರ
ಅವಿವಾಹಿತ ಯುವಕ-ಯುವತಿಯರು ಮೃತಪಟ್ಟರೆ, ಕೆಲವರ ಆತ್ಮಕ್ಕೆ ಸದ್ಗತಿ ಸಿಗುವುದಿಲ್ಲ. ಅಂತಹ ಅತೃಪ್ತ ಆತ್ಮಗಳಿಂದಾಗಿ ಇಡೀ ಕುಟುಂಬಕ್ಕೆ ಬಾಧೆ ಎದುರಾಗುತ್ತದೆ ಎಂಬುವುದೊಂದು ನಂಬಿಕೆ. ಕುಟುಂಬ ಸದಸ್ಯರಿಗೆ ಬಾಧೆಯಾಗಿ ಕಾಡುತ್ತಿರುವ ಪ್ರೇತಾತ್ಮಗಳಿಗೆ ವಿವಾಹ ಮಾಡಿಸುವ ‘ಪ್ರೇತ ವಿವಾಹ’ ಆಚರಣೆಯೊಂದು ತುಳುನಾಡಿನಲ್ಲಿ ಇನ್ನೂ ಜೀವಂತವಾಗಿದೆ. ಪುತ್ತೂರು ತಾಲೂಕಿನ ಮುಂಡೂರು ಗ್ರಾಮದ ಬಾರಿಕೆ ಎಂಬಲ್ಲಿ ಭಾನುವಾರ ನಡೆದ ‘ಪ್ರೇತ ವಿವಾಹ’ ಸಾಕ್ಷಿಯಾಯಿತು.
ಮುಂಡೂರು ಗ್ರಾಮದ ಬಾರಿಕೆ ನಿವಾಸಿ ದಿ.ತಿಮ್ಮಪ್ಪ ಮತ್ತು ಗಿರಿಜಾ ದಂಪತಿ ಪುತ್ರ ಆನಂದ ಎಂಬುವರು ಎಳೆಯ ಪ್ರಾಯದಲ್ಲೇ ಮೃತಪಟ್ಟಿದ್ದರು. ಅದೇ ಗ್ರಾಮದ ಬದಿಯಡ್ಕ ನಿವಾಸಿ ದಿ.ಮುತ್ತಪ್ಪ ಮತ್ತು ದೇವಕಿ ದಂಪತಿ ಪುತ್ರಿ ಸರೋಜಾ ಕೂಡ ಎಳೆಯ ಪ್ರಾಯದಲ್ಲೇ ನಿಧನರಾಗಿದ್ದರು. ಸಂಬಂಧದಲ್ಲಿ ಮೃತ ಆನಂದ ಅವರಿಗೆ ಮೃತ ಸರೋಜಾ ಸೋದರ ಮಾವನಮಗಳಾಗಿದ್ದು, ಈ ಎರಡು ಪ್ರೇತಾತ್ಮಗಳನ್ನು ಒಂದುಗೂಡಿಸಿ ಪ್ರೇತ ವಿವಾಹ ನೆರವೇರಿಸಲಾಯಿತು.
ಮೃತ ಆನಂದ ಅವರ ಕುಟುಂಬದಲ್ಲಿ ಕಳೆದ ಕೆಲವು ಸಮಯದಿಂದ ಸಂತಾನಭಾಗ್ಯದ ಕೊರತೆ, ವಿವಾಹ ತಡೆ ಸೇರಿದಂತೆ ಹಲವು ರೀತಿಯ ಸಮಸೆ ಎದುರಾಗಿದ್ದವು. ಈ ಹಿನ್ನೆಲೆಯಲ್ಲಿ ಮನೆಯವರು ಜೋತಿಷಿಗಳ ಮೊರೆಹೋಗಿ ‘ಪ್ರಶ್ನಾ ಚಿಂತನೆ’ ನಡೆಸಿದಾಗ ಆನಂದ ಅವರಿಗೆ ವಿವಾಹವಾಗದಿರುವುದರಿಂದ ಆತ್ಮ ಅತೃಪ್ತವಾಗಿದೆ. ಇದರಿಂದಾಗಿ ಕುಟುಂಬಕ್ಕೆ ಇಂತಹ ಹಲವು ದೋಷಗಳು ಎದುರಾಗುತ್ತಿವೆ ಎಂಬ ವಿಚಾರ ತಿಳಿದು ಬಂದಿತ್ತು. ಅದರಂತೆ ಮೃತ ಆತ್ಮಗಳ ಸದ್ಗತಿಗಾಗಿ ಮತ್ತು ಕುಟುಂಬದ ಸುಕ್ಷೇಮಕ್ಕಾಗಿ ಪ್ರೇತಾತ್ಮಗಳ ವಿವಾಹ ನಡೆಸಿದರು. ಮುಂಡೂರು ಬಾರಿಕೆಯಲ್ಲಿ ನಡೆದ ಆನಂದ-ಸರೋಜಾ ಪ್ರೇತ ವಿವಾಹದಲ್ಲಿ ಧರ್ಮಪಾಲ ಶೇಣಿ ಅವರು ಪೌರೋಹಿತ್ಯ ವಹಿಸಿ, ಶಾಸ್ತ್ರೋಕ್ತವಾಗಿ ವಿವಾಹದ ಎಲ್ಲ ವಿಧಿವಿಧಾನ ನೆರವೇರಿಸಿದರು.

ಜೀವಂತ ಜನರಂತೇ ವಿಧಿ ವಿಧಾನ

ಹೆಣ್ಣಿನ ರೂಪದ ಗೊಂಬೆಗೆ ಸೀರೆ, ರವಿಕೆ, ಬಳೆ, ಕೊರಳಿಗೆ ಚಿನ್ನದ ಸರ, ಮಲ್ಲಿಗೆ ಹೂ ತೊಡಿಸಿ ವಧುವಿನ ಶೃಂಗಾರ ಮತ್ತು ಗಂಡು ರೂಪಕ್ಕೆ ಪೇಟ, ಅಂಗಿ, ಲುಂಗಿ, ಶಲ್ಯ, ವಾಚ್ ತೊಡಿಸಿ ವರನ ಶೃಂಗಾರ ಮಾಡಲಾಗುತ್ತದೆ. ನಂತರ ಈ ಗೊಂಬೆ ರೂಪದ ಪ್ರೇತಾತ್ಮ ವಧು-ವರರಿಗೆ ವಿವಾಹ ಧಾರೆ, ಮಾಂಗಲ್ಯ ಧಾರಣೆ, ಅಕ್ಷತೆ ಕಾರ್ಯಕ್ರಮಗಳು ಸೇರಿದಂತೆ ಎಲ್ಲ ವಿಧಿವಿಧಾನಗಳು ಜೀವಂತ ವ್ಯಕ್ತಿಗಳಿಗೆ ನಡೆಯುವ ವಿವಾಹದ ರೀತಿಯಲ್ಲೇ ಶಾಸ್ತ್ರೋಕ್ತವಾಗಿ ನಡೆಯುತ್ತದೆ. ಬಳಿಕ ಈ ಬೊಂಬೆಗಳನ್ನು ಮನೆಯೊಳಕ್ಕೆ ಕೊಂಡೊಯ್ದು ವಿವಾಹಬಂಧನಕ್ಕೊಳಗಾದ ಪ್ರೇತಾತ್ಮಗಳನ್ನು ಮನೆ ತುಂಬಿಸುವ ಕಾರ್ಯಕ್ರಮ ನಡೆಯುತ್ತದೆ. ನೆಂಟರಿಷ್ಟರಿಗೆ ಊಟದ ವ್ಯವಸ್ಥೆಯೊಂದಿಗೆ ವಿವಾಹ ಕಾರ್ಯ ಮುಕ್ತಾಯಗೊಳ್ಳುತ್ತದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net