ಪೆರ್ಲ-ಸ್ವರ್ಗ ರಸ್ತೆ ಅಭಿವೃದ್ಧಿ ಹೋರಾಟಕ್ಕೆ ಸಜ್ಜು

ಕ್ರಿಯಾಸಮಿತಿ ಸಭೆಯಲ್ಲಿ ಜಿ.ಪಂ. ಸದಸ್ಯ ಸೋಮಶೇಖರ್ ಜೆ.ಎಸ್. ಮಾತನಾಡಿದರು. ಗ್ರಾಪಂ ಉಪಾಧ್ಯಕ್ಷ ಅಬೂಬಕ್ಕರ್ ಸಿದ್ದಿಕ್ ವಳಮೊಗರು, ಗ್ರಾಪಂ ಸ್ಥಾಯಿ ಸಮಿತಿ ಅಧ್ಯಕ್ಷರಾದ ವಿಜಯಾ ಕೆ., ಸದಾನಂದ ಶೆಟ್ಟಿ ಕುದ್ವ ಮೊದಲಾದವರಿದ್ದರು.
ಕ್ರಿಯಾಸಮಿತಿ ಸಭೆಯಲ್ಲಿ ಜಿ.ಪಂ. ಸದಸ್ಯ ಸೋಮಶೇಖರ್ ಜೆ.ಎಸ್. ಮಾತನಾಡಿದರು. ಗ್ರಾಪಂ ಉಪಾಧ್ಯಕ್ಷ ಅಬೂಬಕ್ಕರ್ ಸಿದ್ದಿಕ್ ವಳಮೊಗರು, ಗ್ರಾಪಂ ಸ್ಥಾಯಿ ಸಮಿತಿ ಅಧ್ಯಕ್ಷರಾದ ವಿಜಯಾ ಕೆ., ಸದಾನಂದ ಶೆಟ್ಟಿ ಕುದ್ವ ಮೊದಲಾದವರಿದ್ದರು.
Published on
ವಿಜಯವಾಣಿ ಸುದ್ದಿಜಾಲ ಕಾಸರಗೋಡು
ಎಣ್ಮಕಜೆ ಪಂಚಾಯಿತಿಯ ಪೆರ್ಲ-ಸ್ವರ್ಗ-ಪಾಣಾಜೆ ರಸ್ತೆ ಅಭಿವೃದ್ಧಿಪಡಿಸಲು ಸರ್ಕಾರ ಮುಂದಾಗಬೇಕೆಂದು ಸ್ವರ್ಗ ಸ್ವಾಮಿ ವಿವೇಕಾನಂದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಲಾದ ಜನಪ್ರತಿನಿಧಿಗಳು ಹಾಗೂ ಸರ್ವಪಕ್ಷ ಮುಖಂಡರನ್ನೊಳಗೊಂಡ ಸಭೆಯಲ್ಲಿ ಒಕ್ಕೊರಲ ಆಗ್ರಹ ಕೇಳಿಬಂತು.
ಚೆರ್ಕಳ-ಕಲ್ಲಡ್ಕ ರಾಜ್ಯ ಹೆದ್ದಾರಿಯಿಂದ ಪೆರ್ಲ-ಸ್ವರ್ಗ-ಪಾಣಾಜೆ ಮೂಲಕ ಕರ್ನಾಟಕಕ್ಕೆ ಸಂಪರ್ಕ ಕಲ್ಪಿಸುವ ಪ್ರಸಕ್ತ ರಸ್ತೆ ಅತ್ಯಂತ ಕಿರಿದಾಗಿದ್ದು, ಕಡಿದಾದ ತಿರುವುಗಳಿಂದ ಸಂಚಾರ ದುಸ್ತರವೆನಿಸಿದೆ. ರಸ್ತೆಯ ಎರಡೂ ಬದಿ ಡಾಂಬರು ಕಿತ್ತು ಹೊಂಡಗಳು ಸೃಷ್ಟಿಯಾಗಿ ವಾಹನ ಸವಾರರು ಅಪಘಾತ ಭೀತಿ ಎದುರಿಸುತ್ತಿದ್ದಾರೆ. ತಕ್ಷಣ ರಸ್ತೆ ಅಭಿವೃದ್ಧಿಗೊಳಿಸುವ ಮೂಲಕ ಜನತೆರ ಹಲವು ದಶಕಗಳ ಬೇಡಿಕೆಯನ್ನು ಈಡೇರಿಸುವಂತೆ ಒತ್ತಾಯಿಸಲಾಯಿತು.
ಎಣ್ಮಕಜೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕುಸುಮಾವತಿ ಬಿ. ಅಧ್ಯಕ್ಷತೆ ವಹಿಸಿದ್ದರು. ಕಾಸರಗೋಡು ಜಿಲ್ಲಾ ಪಂಚಾಯಿತಿ ಸದಸ್ಯ ಸೋಮಶೇಖರ್ ಜೆ.ಎಸ್. ಮುಖ್ಯ ಭಾಷಣ ಮಾಡಿ, ರಸ್ತೆಯ ಅಭಿವೃದ್ಧಿ ವಿಚಾರದಲ್ಲಿ ಪಕ್ಷ ಬೇಧ ಮರೆತು ಎಲ್ಲರೂ ಒಗ್ಗೂಡಬೇಕಾದ ಅನಿವಾರ್ಯತೆಯಿದೆ. ಸರ್ಕಾರ ಮಣಿಯದಿದ್ದಲ್ಲಿ ಬೀದಿಗಿಳಿದು ಹೋರಾಟ ನಡೆಸಲೂ ಸಜ್ಜಾಗಬೇಕು ಎಂದು ಕರೆ ನೀಡಿದರು.
ಗ್ರಾಪಂ ಸ್ಥಾಯಿ ಸಮಿತಿ ಅಧ್ಯಕ್ಷರಾದ ವಿಜಯಾ ಕೆ., ಸದಾನಂದ ಶೆಟ್ಟಿ ಕುದ್ವ, ಬ್ಲಾಕ್ ಪಂಚಾಯಿತಿ ಸದಸ್ಯೆ ವಿದ್ಯಾಕುಮಾರಿ, ಗ್ರಾಪಂ ಸದಸ್ಯೆ ನಳಿನಾಕ್ಷಿ ಸಿ.ಸಿ., ಯೋಜನಾ ಸಮಿತಿ ಉಪಾಧ್ಯಕ್ಷ ಬಿ.ಎಸ್.ಗಾಂಭೀರ್, ಕೆ.ವೈ.ಸುಬ್ರಹ್ಮಣ್ಯ ಭಟ್, ರಮಾನಂದ ಎಡಮಲೆ, ವೆಂಕಟ್ರಮಣ ಭಟ್, ಸದಾನಂದ ಬೈರಡ್ಕ, ಈಶ್ವರ ಪ್ರಸಾದ್ ಪಂಬೆತ್ತಡ್ಕ, ಕೃಷ್ಣ ಕುಮಾರ್ ನೆಕ್ಕರೆಕಾಡು, ನಾಗರಾಜ್ ಬಾಳಿಕೆ, ಶಿವಪ್ರಕಾಶ್ ಪಾಲೆಪ್ಪಾಡಿ ಅಭಿಪ್ರಾಯ ಮಂಡಿಸಿದರು.
ಕ್ರಿಯಾ ಸಮಿತಿ ಅಧ್ಯಕ್ಷರಾಗಿ ಜಿ.ಪಂ. ಸದಸ್ಯ ಸೋಮಶೇಖರ್ ಜೆ.ಎಸ್., ಸಂಚಾಲಕರಾಗಿ ವಾರ್ಡ್ ಸದಸ್ಯ ರಾಮಚಂದ್ರ ಎಂ. ಅವರನ್ನು ಆಯ್ಕೆ ಮಾಡಲಾಯಿತು. ಹತ್ತಕ್ಕೂ ಹೆಚ್ಚು ಮಂದಿಯನ್ನು ಸದಸ್ಯರನ್ನಾಗಿ ಮಾಡಲಾಯಿತು. ವಾರ್ಡ್ ಸದಸ್ಯ ರಾಮಚಂದ್ರ ಎಂ. ಸ್ವಾಗತಿಸಿದರು. ಮಾಜಿ ಸದಸ್ಯ ರವಿ ವಾಣೀನಗರ ವಂದಿಸಿದರು.

ಕೃಷಿ ಭೂಮಿಗೆ ಮಣ್ಣು ತುಂಬುವ ಭೀತಿ

ಮೊದಲೇ ಅಗಲ ಕಿರಿದಾಗಿರುವ ಈ ರಸ್ತೆಯ ಕನ್ನಟಿಕಾನ ಪ್ರದೇಶದಲ್ಲಿ ಕೆಎಸ್‌ಇಬಿ ಭೂಗತ ವಿದ್ಯುತ್ ಕೇಬಳ ಅಳವಡಿಸಲು ರಸ್ತೆ ಬದಿಯಲ್ಲಿ ಹೊಂಡ ಅಗೆದು ಮಣ್ಣನ್ನು ಹಾಗೇ ಬಿಟ್ಟಿರುವುದರಿಂದ ಮಣ್ಣು ಸಮೀಪದ ಕೃಷಿ ಭೂಮಿ ಸೇರುವ ಭೀತಿ ಎದುರಾಗಿದೆ. ಇನ್ನೊಂದೆಡೆ ರಸ್ತೆಯೂ ಹಾಳಾಗಿದೆ. ಈ ಬಗ್ಗೆ ಗಂಭೀರ ಚಿಂತನೆ ನಡೆಸಬೇಕಾಗಿದೆ ಎಂದು ಕೃಷಿಕ ಕಿಶೋರ್ ಕೋಟೆ ಸಭೆಯಲ್ಲಿ ಆತಂಕ ವ್ಯಕ್ತಪಡಿಸಿದರು. ಕೇಬಲ್ ಅಳವಡಿಕೆ ಕಾಮಗಾರಿಯಿಂದ ಕೃಷಿಕರಿಗೆ ಸಮಸ್ಯೆಯಾಗದ ಹಾಗೂ ರಸ್ತೆಗೆ ಹಾನಿಯುಂಟಾಗದಂತೆ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳುವ ಬಗ್ಗೆ ಕೆಎಸ್‌ಇಬಿ ಅಧಿಕಾರಿಗಳಿಗೆ ಮನವರಿಕೆ ಮಾಡಲಾಗುವುದು. ರಸ್ತೆ ಅಭಿವೃದ್ಧಿಗಾಗಿ ಲೋಕೋಪಯೋಗಿ ಸಚಿವರನ್ನು ಖುದ್ದು ಭೇಟಿಯಾಗುವ ಬಗ್ಗೆ ಸಮಾಲೋಚನೆ ನಡೆಸಲಾಗುವುದು ಎಂದು ಗ್ರಾಪಂ ಉಪಾಧ್ಯಕ್ಷ ಅಬೂಬಕ್ಕರ್ ಸಿದ್ದೀಕ್ ತಿಳಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net