ಉಡುಪಿಯ ಕಟಪಾಡಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಪಲ್ಟಿಯಾದ ಗ್ಯಾಸ್ ಟ್ಯಾಂಕರ್ಗೆ ನೀರು ಹಾರಿಸುತ್ತಿರುವ ಅಗ್ನಿಶಾಮಕ ದಳದ ಸಿಬ್ಬಂದಿ.
Published on:
Copied
Follow Us
* ವಾಹನ ಸಂಚಾರಕ್ಕೆ ಬದಲಿ ಮಾರ್ಗ ವ್ಯವಸ್ಥೆ
ಉಡುಪಿ: ಮಂಗಳೂರು ಉಡುಪಿ ಮಾರ್ಗದ ರಾಷ್ಟ್ರೀಯ ಹೆದ್ದಾರಿ ಕಟಪಾಡಿಯಲ್ಲಿ ಸೋಮವಾರ ಬೆಳಗ್ಗೆ ಗ್ಯಾಸ್ ಟ್ಯಾಂಕರ್ ಪಲ್ಟಿಯಾಗಿದ್ದು, ಅನಿಲ ಸೋರಿಕೆ ಆಗಿದೆ. ಹಿಂದುಸ್ಥಾನ್ ಪೆಟ್ರೋಲಿಯಂ ಕಂಪನಿಗೆ ಸೇರಿದ ಗ್ಯಾಸ್ ಟ್ಯಾಂಕರ್ ಇದಾಗಿದ್ದು, ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿ ರಸ್ತೆಯ ಮಧ್ಯದಲ್ಲಿ ಬಿದ್ದಿತ್ತು. ಕೆಲಕಾಲ ಆತಂಕದ ವಾತಾವರಣ ಉಂಟಾಗಿತ್ತು.
ಟ್ಯಾಂಕರ್ನಿಂದ ಗ್ಯಾಸ್ ಸೋರಿಕೆ ಆಗುತ್ತಿರುವುದರಿಂದ ಈ ಮಾರ್ಗದಲ್ಲಿ ರಾತ್ರಿ 8ರ ವರೆಗೆ ಯಾವುದೇ ಪ್ರಕಾರದ ವಾಹನ ಸಂಚಾರ ಮಾಡದಂತೆ ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಆದೇಶ ಹೊರಡಿಸಿದ್ದರು. ಅಲ್ಲದೆ, ವಾಹನಗಳ ಸುಗಮ ಸಂಚಾರಕ್ಕಾಗಿ ಬದಲಿ ಮಾರ್ಗ ಅಳವಡಿಸಲಾಗಿತ್ತು.
ಸುತ್ತುಬಳಸಿ ಪ್ರಯಾಣ
ಮಂಗಳೂರಿನಿಂದ ಉಡುಪಿತ್ತ ಸಾಗುವ ವಾಹನಗಳು ಕಾಪುವಿನಿಂದ ಶಿರ್ವಾ, ಮೂಡುಬೆಳ್ಳೆ ಮಣಿಪುರ ಮಾರ್ಗವಾಗಿ ಮಣಿಪಾಲಕ್ಕೆ ತೆರಳಿ ಅಲ್ಲಿಂದ ಉಡುಪಿಗೆ ಅಥವಾ ಪಡುಬಿದ್ರೆ, ಬೆಳ್ಮಣ್, ಶಿರ್ವಾ ಮಾರ್ಗವಾಗಿ ಮಣಿಪಾಲಕ್ಕೆ ತೆರಳಿ ಅಲ್ಲಿಂದ ಉಡುಪಿಗೆ ತೆರಳಿದವು.
ಉಡುಪಿಯಿಂದ ಮಂಗಳೂರಿಗೆ ಹೋಗುವ ವಾಹನಗಳು ಮಣಿಪಾಲದಿಂದ ಮಣಿಪುರ, ಮೂಡುಬೆಳ್ಳೆ, ಶಿರ್ವಾ ಮಾರ್ಗವಾಗಿ ಕಾಪು ತಲುಪಿ ಅಲ್ಲಿಂದ ಮಂಗಳೂರಿನತ್ತ ಹಾಗೂ ಮಣಿಪಾಲದಿಂದ ಶಿರ್ವಾ, ಬೆಳ್ಮಣ್ ಮಾರ್ಗವಾಗಿ ಪಡುಬಿದ್ರಿ ತಲುಪಿ ಅಲ್ಲಿಂದ ಮಂಗಳೂರು ಕಡೆಗೆ ವಾಹನಗಳು ಸುತ್ತುಬಳಸಿ ಸಂಚರಿಸಿದವು.
ಗ್ಯಾಸ್ ಟ್ಯಾಂಕರ್ ಪಲ್ಟಿಯಾಗಿ ಅನಿಲ ಸೋರಿಕೆ ಆಗುತ್ತಿರುವ ಮಾಹಿತಿ ಲಭಿಸುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಉಡುಪಿಯ ಅಗ್ನಿಶಾಮಕ ದಳದ ಸಿಬ್ಬಂದಿ, ಟ್ಯಾಂಕರ್ಗೆ ನಿರಂತರ ಜಲಫಿರಂಗಿ ಮೂಲಕ ಅಗ್ನಿ ಅವಘಡ ಆಗದಂತೆ ಮುನ್ನೆಚ್ಚರಿಕೆಯ ಕಾರ್ಯಾಚರಣೆ ನಡೆಸಿದರು.