ರಾಷ್ಟ್ರೀಯ ಹೆದ್ದಾರಿ ಪಕ್ಕ ಕಸದ ರಾಶಿ

ರಾಷ್ಟ್ರೀಯ ಹೆದ್ದಾರಿ ಪಕ್ಕ ಕಸದ ರಾಶಿ
ರಾಷ್ಟ್ರೀಯ ಹೆದ್ದಾರಿ ಪಕ್ಕ ಕಸದ ರಾಶಿ
Published on
ವಿಜಯವಾಣಿ ಸುದ್ದಿಜಾಲ ಮೂಲ್ಕಿ
ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಕಾರ್ನಾಡು ಬೈಪಾಸ್ ಮತ್ತು ಮೂಲ್ಕಿ ಪೇಟೆ ನಡುವಿನ ಕೊಕ್ಕರಕಲ್ ಬಳಿ ಕಸದ ಟ್ಯಾಂಕ್‌ನಲ್ಲಿ ತ್ಯಾಜ್ಯ ವಸ್ತುಗಳನ್ನು ಹಾಕಲಾಗಿದ್ದು ಪ್ಲಾಷ್ಟಿಕ್ ಚೀಲಗಳು ಮಳೆ ನೀರಿನಲ್ಲಿ ತೊಯ್ದು ವಾಸನೆ ಬರಲಾರಂಭಿಸಿ ದಾರಿಹೋಕರಿಗೆ ಸಮಸ್ಯೆಯಾಗಿದೆ.
ರಾಷ್ಟ್ರೀಯ ಹೆದ್ದಾರಿಯಲ್ಲಿ ಪಾದಾಚಾರಿಗಳು ಹೋಗುವ ಪ್ರದೇಶವನ್ನು ಈ ಕಸ ತ್ಯಾಜ್ಯಗಳು ಆಕ್ರಮಿಸಿದ್ದು ಕೊಳಕನ್ನು ತುಳಿದು ಹೋಗುವ ಅನಿವಾರ್ಯ ಪರಿಸ್ಥಿತಿ ಉಂಟಾಗಿದೆ.

ನಾಯಿ ಕಾಟ

ಈ ಪ್ರದೇಶದಲ್ಲಿ ಬೀದಿನಾಯಿಗಳು ಹಲವಾರಿದ್ದು ಅವುಗಳು ಆಹಾರದ ಆಸೆಗೆ ತ್ಯಾಜ್ಯಗಳನ್ನು ಚೆಲ್ಲಾಡುವುದರಿಂದ ನಡೆದು ಹೋಗುವವರು ಮತ್ತು ದ್ವಿಚಕ್ರ ವಾಹನ ಚಾಲಕರಿಗೆ ಸಮಸ್ಯೆಯಾಗಿದೆ.

ನೆರೆ ನೀರು ತುಂಬುವ ಸ್ಥಳ

ಮಳೆಗಾಲದಲ್ಲಿ ಅತಿ ಮಳೆಯಾದ ಸಂದರ್ಭ ಇಲ್ಲಿ ನೀರು ನಿಲ್ಲುವುದು ವಾಡಿಕೆಯಾಗಿದ್ದು ಈ ನೆರೆ ನೀರಿನೊಂದಿಗೆ ಹರಿದ ತ್ಯಾಜ್ಯ ತುಂಬಿದ ಪ್ಲಾಷ್ಟಿಕ್ ಚೀಲಗಳು ಕೃತಕ ನೆರೆ ಉಂಟುಮಾಡುವ ಭೀತಿ ಇದೆ.
ಈ ಪ್ರದೇಶದಲ್ಲಿ ಮನೆಗಳಿಲ್ಲ. ಹತ್ತಿರದ ಸುಖಾನಂದ ನಗರ, ಹರಿಹರ ನಗರ, ಪಡುಹಿತ್ಲು ಮುಂತಾದ ಕಡೆ ಪಂಚಾಯಿತಿ ವತಿಯಿಂದ ಕಸ ಶೇಖರಣಾ ವಾಹನ ಎರಡು ದಿನಗಳಿಗೊಮ್ಮೆ ಬರುತ್ತಿದೆ. ಈ ಪ್ರದೇಶದಲ್ಲಿ ಕಸ ತ್ಯಾಜ್ಯಗಳನ್ನು ಹೆದ್ದಾರಿ ಪ್ರಯಾಣಿಕರು ಎಸೆಯುತ್ತಿದ್ದಾರೆಯೇ ಅಥವಾ ಅಂಗಡಿ ಮುಂಗಟ್ಟುಗಳ ಜನ ತಂದು ಸುರಿಯುತ್ತಾರೆಯೇ ಎನ್ನುವುದು ಇಲ್ಲಿನ ಯಾರಿಗೂ ತಿಳಿದಿಲ್ಲ. ಈ ಬಗ್ಗೆ ಪಂಚಾಯಿತಿ ಪ್ರತಿನಿಧಿಗಳು ಗಮನಹರಿಸವೇಕು ಎನ್ನುವುದು ಸ್ಥಳೀಯರ ಆಗ್ರಹವಾಗಿದೆ.

ಬಸ್ಸು ಹಿಡಿಯಲು ಇದೇ ದಾರಿಯಲ್ಲಿ ಹೋಗುವಾಗ ನಾಯಿ ಕಾಟ ಸಾಮಾನ್ಯ. ಕೆಲವೊಮ್ಮೆ ತ್ಯಾಜ್ಯಗಳನ್ನು ತುಳಿದುಹೋಗುವ ಪರಿಸ್ಥಿತಿ ಬರುತ್ತಿದೆ.

— ಶ್ರೀಕಾಂತ, ಪ್ರಯಾಣಿಕ

ಈ ಪ್ರದೇಶದಲ್ಲಿ ಕಸ ಹಾಕುತ್ತಿರುವ ಬಗ್ಗೆ ಮಾಹಿತಿ ಇಲ್ಲ, ಶೀಘ್ರ ಕ್ರಮ ಕೈಗೊಳ್ಳಲಾಗುವುದು.

— ಮಧುಕರ್, ಮುಖ್ಯಾಧಿಕಾರಿ ಮೂಲ್ಕಿ ನಗರ ಪಂಚಾಯಿತಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net