

ಉಡುಪಿ: ಕಿನ್ನಿಮುಲ್ಕಿ ಕನ್ನರ್ಪಾಡಿಯಲ್ಲಿ ಶ್ರೀ ಜಯದುರ್ಗಾಪರಮೇಶ್ವರಿ ದೇವಸ್ಥಾನದ ಗೋಪುರದ ಬಲಭಾಗದ ಅಂಬಲಪಾಡಿ ಸರ್ವೀಸ್ ರಸ್ತೆಯ ಬದಿಯಲ್ಲಿ ಕಸದ ರಾಶಿ ಬಿದ್ದಿದ್ದು, ಪರಿಸರದಲ್ಲಿ ದುರ್ನಾತ ಹರಡಿದೆ.
ಈ ಮಾರ್ಗದಲ್ಲಿ ಸಾಗುವ ಸಾರ್ವಜನಿಕರು ಹಾಗೂ ದೇವಸ್ಥಾನಕ್ಕೆ ಆಗಮಿಸುವ ಭಕ್ತರು ಈ ಕಸದ ರಾಶಿ ನೋಡುತ್ತ, ವಾಸನೆಯಿಂದ ಮೂಗುಮುಚ್ಚಿಕೊಂಡು ಓಡಾಡುವಂತಾಗಿದೆ.
ಪರಿಸರಕ್ಕೆ ಹಾನಿ
ಪ್ಲಾಸ್ಟಿಕ್ ಕವರ್ಗಳಲ್ಲಿ ಹಸಿ ಕಸವನ್ನೂ ತುಂಬಿ ದೇವಸ್ಥಾನದ ಪರಿಸರದಲ್ಲೂ ಎಸೆಯಲಾಗುತ್ತಿದೆ. ಅವು ಕೊಳೆತು ನಾರುತ್ತಿದ್ದು ನೊಣ, ಸೊಳ್ಳೆ ಹಾಗೂ ಕ್ರಿಮಿಕೀಟಗಳ ಉತ್ಪತ್ತಿ ತಾಣದಂತಾಗಿದೆ. ದೊಡ್ಡ ದೊಡ್ಡ ಪ್ಲಾಸ್ಟಿಕ್ ಚೀಲಗಳಲ್ಲಿಯೂ ಸಹ ಮನೆಗಳ ತ್ಯಾಜ್ಯ ಹಾಗೂ ಕಸ ತುಂಬಿ ಎಸೆದುಹೋಗುತ್ತಿದ್ದಾರೆ. ಅದರಿಂದ ಈ ಭಾಗದ ಅಂದವೂ ಹಾಳಾಗಿದ್ದು, ಪರಿಸರ ಮಾಲಿನ್ಯಕ್ಕೆ ಕಾರಣವಾಗಿದೆ. ಸಾಂಕ್ರಾಮಿಕ ರೋಗಗಳು ಹರಡಲು ಇಲ್ಲಿನ ವಾತಾವರಣ ಕೈಜೋಡಿಸುವಂತಿದೆ.