ಗಾಂಧಿನಗರ ರಸ್ತೆ ಜಲಾವೃತ!

ಗಾಂಧಿ ನಗರದಲ್ಲಿ ರಸ್ತೆಯಲ್ಲೇ ಮಳೆ ನೀರು ನಿಂತು ವಾಹನ ಸವಾರರು ಹೆಚ್ಚಿನ ಸಮಸ್ಯೆ ಎದುರಿಸುತ್ತಿರುವುದು.
ಗಾಂಧಿ ನಗರದಲ್ಲಿ ರಸ್ತೆಯಲ್ಲೇ ಮಳೆ ನೀರು ನಿಂತು ವಾಹನ ಸವಾರರು ಹೆಚ್ಚಿನ ಸಮಸ್ಯೆ ಎದುರಿಸುತ್ತಿರುವುದು.
Published on
ವಿಜಯವಾಣಿ ಸುದ್ದಿಜಾಲ ಮೂಡುಬಿದಿರೆ
ಗಾಂಧಿನಗರದ ಮೂಡುಬಿದಿರೆ- ಮಂಗಳೂರು ರಸ್ತೆಯಲ್ಲಿರುವ ಕ್ಯಾಶ್ಯೂ ್ಯಾಕ್ಟರಿ ಎದುರುಗಡೆ ರಸ್ತೆಯಲ್ಲಿ ಮಳೆಗಾಲ ಆರಂಭವಾದರೆ ಸಾಕು ಸಾರ್ವಜನಿಕರ ಪರದಾಟ ತಪ್ಪುವುದಿಲ್ಲ. ಹಲವಾರು ವರ್ಷಗಳಿಂದ ಈ ಭಾಗದಲ್ಲಿ ಮಳೆ ನೀರು ಸಮರ್ಪಕವಾಗಿ ಹರಿದು ಹೋಗಲು ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದ ಕಾರಣ ರಸ್ತೆಯಲ್ಲೇ ನೀರು ನಿಲ್ಲುತ್ತಿದ್ದು, ಪಾದಚಾರಿಗಳು, ದ್ವಿಚಕ್ರ ವಾಹನ ಸವಾರರು, ಇತರ ವಾಹನ ಚಾಲಕರು ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ.

ಜೋರಾದ ಮಳೆ ಸುರಿದ ಕೆಲವೇ ನಿಮಿಷಗಳಲ್ಲಿ ರಸ್ತೆ ಜಲಾವೃತವಾಗುತ್ತದೆ. ಮಳೆ ನೀರು ಸರಾಗವಾಗಿ ಹರಿದು ಹೋಗಲು ವ್ಯವಸ್ಥೆ ಇಲ್ಲದಿರುವುದರಿಂದ ರಸ್ತೆ ಮೇಲೆ ನೀರು ನಿಂತು ಸಂಚಾರಕ್ಕೆ ಅಡಚಣೆ ಉಂಟಾಗುತ್ತಿದೆ. ರಸ್ತೆ ಎಲ್ಲಿದೆ, ಗುಂಡಿ ಎಲ್ಲಿದೆ ಎಂಬುದು ನೀರು ನಿಂತ ಸಂದರ್ಭಗಳಲ್ಲಿ ಸ್ಪಷ್ಟವಾಗಿ ಗೋಚರಿಸದ ಕಾರಣ ವಾಹನ ಸವಾರರು ಸಂಚರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಹಲವು ವರ್ಷಗಳ ಸಮಸ್ಯೆ

ಸಮಸ್ಯೆ ಹಲವು ವರ್ಷಗಳಿಂದ ಮುಂದುವರಿದಿದ್ದರೂ ಜನಪ್ರತಿನಿಧಿಗಳು, ಸ್ಥಳೀಯ ಆಡಳಿತ ಸೂಕ್ತ ಗಮನ ಹರಿಸಿಲ್ಲ ಎಂಬ ಆರೋಪವನ್ನು ಸ್ಥಳೀಯರು ವ್ಯಕ್ತಪಡಿಸಿದ್ದಾರೆ. ರಸ್ತೆಯಲ್ಲಿರುವ ಚರಂಡಿಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡದಿರುವುದು ಸಮಸ್ಯೆಯನ್ನು ಮತ್ತಷ್ಟು ಗಂಭೀರಗೊಳಿಸಿದೆ ಎಂದು ದೂರಿದ್ದಾರೆ. ಕೆಲವು ಖಾಸಗಿ ವ್ಯಕ್ತಿಗಳು ನೀರು ಹರಿಯುವ ಜಾಗ ಮುಚ್ಚಿರುವುದರಿಂದ ಮಳೆ ನೀರು ಮುಂದೆ ಸಾಗಲು ಸಾಧ್ಯವಾಗದೆ ರಸ್ತೆಯಲ್ಲೇ ನಿಲ್ಲುತ್ತಿದೆ. ಚರಂಡಿಯ ಸಹಜ ಹರಿವಿಗೆ ಉಂಟಾಗಿರುವ ಅಡ್ಡಿಯಿಂದ ಪ್ರತೀ ಮಳೆಗಾಲದಲ್ಲೂ ಇದೇ ಸಮಸ್ಯೆ ಮರುಕಳಿಸುತ್ತಿದೆ ಎನ್ನುವುದು ಸ್ಥಳೀಯರ ಅಭಿಪ್ರಾಯ.

ವಿದ್ಯಾಗಿರಿಯವರೆಗೂ ಚರಂಡಿ ಇಲ್ಲ

ಮೂಡುಬಿದಿರೆ ಗಾಂಧಿನಗರ ರಸ್ತೆಯಿಂದ ವಿದ್ಯಾಗಿರಿ ತನಕ ಸರಿಯಾದ ಚರಂಡಿ ವ್ಯವಸ್ಥೆ ಇಲ್ಲ. ಸ್ಥಳೀಯ ಹೋಟೆಲ್ ಹತ್ತಿರ ಇದೇ ಪರಿಸ್ಥಿತಿ ಇದೆ. ಅಲ್ಲಿ ಹಿಂಭಾಗದಿಂದ ಹೋಗುವ ಚರಂಡಿ ಮುಚ್ಚಿಬಿಟ್ಟಿದ್ದಾರೆ ಎಂದು ಸ್ಥಳೀಯರು ಹೇಳಿದ್ದಾರೆ. ಸಮಸ್ಯೆಗೆ ತಾತ್ಕಾಲಿಕ ಕ್ರಮಗಳಿಗಿಂತ ಶಾಶ್ವತ ಪರಿಹಾರ ಅಗತ್ಯ ಸಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು ಸ್ಥಳಕ್ಕೆ ಭೇಟಿ ನೀಡಿ ಚರಂಡಿ ವ್ಯವಸ್ಥೆಯನ್ನು ಸಮರ್ಪಕಗೊಳಿಸಬೇಕು. ನೀರಿನ ಹರಿವಿಗೆ ಉಂಟಾಗಿರುವ ಅಡ್ಡಿ ತೆರವುಗೊಳಿಸಿ ಮಳೆ ನೀರು ಸರಾಗವಾಗಿ ಹರಿದು ಹೋಗುವಂತೆ ಕ್ರಮ ಕೈಗೊಳ್ಳಬೇಕು ಎಂದು ನಾಗರಿಕರು ಒತ್ತಾಯಿಸಿದ್ದಾರೆ.

ಗಾಂಧಿನಗರದ ಈ ಭಾಗದಲ್ಲಿ ಹಲವು ವರ್ಷಗಳಿಂದ ಮಳೆಗಾಲದ ಸಂದರ್ಭದಲ್ಲಿ ಇದೇ ಸಮಸ್ಯೆ ಮರುಕಳಿಸುತ್ತಿದೆ. ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದಿರುವುದು, ಇರುವ ಚರಂಡಿಗಳ ನಿರ್ವಹಣೆ ಕೊರತೆ, ನೀರಿನ ಹರಿವಿನ ಜಾಗ ಮುಚ್ಚಿರುವುದು ಸಮಸ್ಯೆಗೆ ಕಾರಣವಾಗಿದೆ.

— ಜಗದೀಶ್ ಪೂಜಾರಿ ದ್ವಿಚಕ್ರ ವಾಹನ ಸವಾರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net