ಕಿನ್ನಿಗೋಳಿ ಪಟ್ಟಣ ಪಂಚಾಯಿತಿಯ 18 ವಾರ್ಡ್‌ಗಳಿಂದ 4 ವಾಹನಗಳ ಮೂಲಕ ನಿರಂತರವಾಗಿ ಕಸ ಸಂಗ್ರಹಿಸಲಾಗುತ್ತಿದೆ. ಕಸದ ಸಾಗಾಟ ಮತ್ತು ನಿರ್ವಹಣೆಗಾಗಿ ಕಾಯಂ ಹಾಗೂ ಹೊರಗುತ್ತಿಗೆ ಆಧಾರದ ಮೇಲೆ ಒಟ್ಟು 25 ಸಿಬ್ಬಂದಿ ಶ್ರಮಿಸುತ್ತಿದ್ದಾರೆ. ಸಾರ್ವಜನಿಕರಿಗೆ ಹಸಿ ಕಸ ಮತ್ತು ಒಣ ಕಸವನ್ನು ಪ್ರತ್ಯೇಕವಾಗಿ ನೀಡಲು ಪ್ರತಿ ಮನೆಗೆ ಎರಡು ಬುಟ್ಟಿಗಳನ್ನು ವಿತರಿಸಲಾಗಿದೆ. ಪಂಚಾಯಿತಿಯ ಎಂಆರ್‌ಎಫ್ ಘಟಕದಲ್ಲಿ ಅತ್ಯಾಧುನಿಕ ಯಂತ್ರಗಳ ಸಹಾಯದಿಂದ ಕಸವನ್ನು ಪ್ಲಾಸ್ಟಿಕ್, ಬಟ್ಟೆ, ಕಾಗದ-ರಟ್ಟು, ತೆಳು ಪ್ಲಾಸ್ಟಿಕ್, ಬಾಟಲಿ ಸೇರಿದಂತೆ ಒಟ್ಟು 8 ವಿಧಗಳಾಗಿ ವಿಂಗಡಿಸಲಾಗುತ್ತದೆ. ಬಳಿಕ ಪ್ರೆಸಿಂಗ್ ಯಂತ್ರದ ಮೂಲಕ ಪ್ಯಾಕ್ ಮಾಡಿ ಸಾಗಿಸಲಾಗುತ್ತಿದೆ.