ಶಿಕ್ಷಣಕ್ಕೆ ಇಂದು ಅಡ್ಡಿಯಾಗದು ಬಡತನ

ಉಡುಪಿಯ ಉದ್ಯಾವರದಲ್ಲಿ ಪಿಯುಸಿ ವಿದ್ಯಾರ್ಥಿಗಳಿಗೆ ದಯಾನಂದ್​ ಡಿ. ಕಿದಿಯೂರು ಪಠ್ಯ&ಪುಸ್ತಕ ವಿತರಿಸಿದರು. ನಾಗೇಶಕುಮಾರ್​, ಚಂದ್ರಾವತಿ ಭಂಡಾರಿ, ಶರತ್​ ಕುಮಾರ್​, ಯು. ಪದ್ಮನಾಭ ಕಾಮತ್​, ಸತೀಶ್​ ಡಿ. ಸಾಲ್ಯಾನ್​, ಗಿರೀಶ್​ ಗುಡ್ಡೆಯಂಗಡಿ ಇದ್ದರು.
ಉಡುಪಿಯ ಉದ್ಯಾವರದಲ್ಲಿ ಪಿಯುಸಿ ವಿದ್ಯಾರ್ಥಿಗಳಿಗೆ ದಯಾನಂದ್​ ಡಿ. ಕಿದಿಯೂರು ಪಠ್ಯ&ಪುಸ್ತಕ ವಿತರಿಸಿದರು. ನಾಗೇಶಕುಮಾರ್​, ಚಂದ್ರಾವತಿ ಭಂಡಾರಿ, ಶರತ್​ ಕುಮಾರ್​, ಯು. ಪದ್ಮನಾಭ ಕಾಮತ್​, ಸತೀಶ್​ ಡಿ. ಸಾಲ್ಯಾನ್​, ಗಿರೀಶ್​ ಗುಡ್ಡೆಯಂಗಡಿ ಇದ್ದರು.
Published on

* ದಯಾನಂದ್​ ಡಿ. ಕಿದಿಯೂರು ಅಭಿಪ್ರಾಯ

* ಪಿಯುಸಿ ವಿದ್ಯಾರ್ಥಿಗಳಿಗೆ ಪಠ್ಯ-ಪುಸ್ತಕ ವಿತರಣೆ

ಉಡುಪಿ: ಇಂದಿನ ಸಂದರ್ಭದಲ್ಲಿ ಬಡತನ ರೇಖೆಯಲ್ಲಿರುವ ಅಥವಾ ಅದಕ್ಕಿಂತ ಕೆಳಗಿರುವ ವಿದ್ಯಾರ್ಥಿಗಳಿಗೆ ಶಿಕ್ಷಣ ಮುಂದುವರಿಸಲು ಬಡತನ ಎಂದೂ ಅಡ್ಡಿಯಾಗದು. ಸರ್ಕಾರದ ಕಾರ್ಯಕ್ರಮ, ದಾನಿಗಳ ಸಹಾಯ ಹಸ್ತ, ಸಂಘ-ಸಂಸ್ಥೆಗಳ ನೆರವು ಈ ಹಿಂದಿಗಿಂತಲೂ ಇಂದು ಸಕಾಲದಲ್ಲಿ ದೊರೆಯುತ್ತದೆ. ಅದನ್ನು ವಿದ್ಯಾರ್ಥಿಗಳು ಸದುಪಯೋಗ ಮಾಡಿಕೊಳ್ಳಬೇಕು ಎಂದು ಉಡುಪಿಯ ಸರ್ಕಾರಿ ಹೆಣ್ಣುಮಕ್ಕಳ ಪ.ಪೂ. ಕಾಲೇಜ್​ನ ನಿವೃತ್ತ ಉಪನ್ಯಾಸಕ ದಯಾನಂದ್​ ಡಿ. ಕಿದಿಯೂರು ಅಭಿಪ್ರಾಯಪಟ್ಟರು.
ಉಡುಪಿ ಉದ್ಯಾವರದ ಹಿಂದೂ ಶಾಲಾ ಸಭಾಂಗಣದಲ್ಲಿ ಸೇವಾ ಮತ್ತು ಸಾಂಸ್ಕೃತಿಕ ವೇದಿಕೆಯಾದ ಉದ್ಯಾವರ ಫ್ರೆಂಡ್ಸ್​ ಸರ್ಕಲ್​ ಆಶ್ರಯದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಯುಎಫ್​ಸಿ ಪುಸ್ತಕ ಭಂಡಾರದಿಂದ ಪಿಯುಸಿ ವಿದ್ಯಾರ್ಥಿಗಳಿಗೆ ಪಠ್ಯ&ಪುಸ್ತಕ ವಿತರಿಸಿ ಮಾತನಾಡಿದರು.
ಜಾಗ್ರತೆ ಅಗತ್ಯ
ಸಂಸ್ಥೆಯ ಗೌರವಾಧ್ಯಕ್ಷ ಉದ್ಯಾವರ ನಾಗೇಶಕುಮಾರ್​ ಮಾತನಾಡಿ, ವಾಟ್ಸಾಪ್​ನಲ್ಲಿ ಬರುವ ಎಲ್ಲ ಸುದ್ದಿಗಳನ್ನೂ ಸತ್ಯ ಎಂದು ವಿದ್ಯಾರ್ಥಿಗಳು ಭ್ರಮಿಸಬಾರದು. ನಮಗೆ ಜ್ಞಾನ ನೀಡುವುದು ಶಿಕ್ಷಣ ಸಂಸ್ಥೆಗಳೇ ವಿನಹ ವಾಟ್ಸಾಪ್​ ಅಲ್ಲ. ಈ ಬಗ್ಗೆ ಪಾಲಕರೂ ಸಹ ಜಾಗ್ರತೆ ವಹಿಸಿ ಮಕ್ಕಳಿಗೆ ತಿಳಿಸಬೇಕು. ಸಂಸ್ಥೆಯು 22 ವರ್ಷದಿಂದ ಸಾವಿರಾರು ಮಕ್ಕಳಿಗೆ ಪಠ್ಯ&ಪುಸ್ತಕ ವಿತರಿಸಿದ್ದು, ಇದು ಮುಂದುವರಿಯಲಿದೆ ಎಂದರು.
ಸಂಸ್ಥೆಯ ನಿರ್ದೇಶಕರಾದ ಚಂದ್ರಾವತಿ ಭಂಡಾರಿ, ಶರತ್​ ಕುಮಾರ್​, ಯು. ಪದ್ಮನಾಭ ಕಾಮತ್​, ಕೋಶಾಧಿಕಾರಿ ಸತೀಶ್​ ಡಿ. ಸಾಲ್ಯಾನ್​ ಉಪಸ್ಥಿತರಿದ್ದರು. ಸಂಸ್ಥೆಯ ಅಧ್ಯಕ್ಷ ಗಿರೀಶ್​ ಗುಡ್ಡೆಯಂಗಡಿ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಸುಹೇಲ್​ ರಹಮತ್ತುಲ್ಲ ವಂದಿಸಿದರು. 100ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಪಠ್ಯ-ಪುಸ್ತಕ ವಿತರಿಸಲಾಯಿತು.
"

ಮಕ್ಕಳು ಮೊಬೈಲ್​ ಗೀಳಿನಿಂದ ಹೊರಬಂದು ಓದಿನತ್ತ ಗಮನ ಕೊಡಬೇಕು. ಕೇವಲ ಅಂಕದ ಹಿಂದೆ ಬಿದ್ದು ಮಾನವೀಯತೆ ಕಲಿಯುವುದನ್ನು ಮರೆಯಬೇಡಿ. ಮಾನವೀಯತೆಯಿಂದ ಮಾತ್ರ ಕಲಿತ ಶಿಕ್ಷಣಕ್ಕೆ ಬೆಲೆ ಬರುವುದು. ಹೆತ್ತವರನ್ನು, ಗುರು-ಹಿರಿಯರನ್ನು ಗೌರವಿಸಿ. ಕೆಲಸಕ್ಕೆ ಸೇರಿ ವೇತನ ಪಡೆಯಲು ಆರಂಭಿಸಿದ ಬಳಿಕ ಇನ್ನಷ್ಟು ವಿದ್ಯಾರ್ಥಿಗಳಿಗೆ ಸಹಾಯ ಮಾಡುವ ಮೂಲಕ ಋಣ ಸಂದಾಯ ಮಾಡಬೇಕು.

— ದಯಾನಂದ್​ ಡಿ. ಕಿದಿಯೂರು. ನಿವೃತ್ತ ಉಪನ್ಯಾಸಕ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net