ಮೇ 26ರಂದು ಎಚ್​ಎಲ್​ಎ ಹೊಂದಾಣಿಕೆ ಶಿಬಿರ

ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯ ಶ್ರೀಮತಿ ಶಾರದಾ ಮಾಧವ ಪೈ ಒಪಿಡಿ.
ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯ ಶ್ರೀಮತಿ ಶಾರದಾ ಮಾಧವ ಪೈ ಒಪಿಡಿ.
Published on

* ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಆಯೋಜನೆ

* ವಿಶ್ವ ಥಲಸ್ಸೆಮಿಯಾ ದಿನ ಆಚರಣೆ

ಉಡುಪಿ: ವಿಶ್ವ ಥಲಸ್ಸೆಮಿಯಾ ದಿನದ ನಿಮಿತ್ತ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯ ಮಕ್ಕಳ ರಕ್ತ ಶಾಸ್ತ್ರ ಆಂಕೊಲಾಜಿ ವಿಭಾಗವು ಥಲಸ್ಸೆಮಿಯಾ ಮತ್ತು ಇನ್ನಿತರ ರಕ್ತ ಅಸ್ವಸ್ಥತೆಗಳಿಂದ ಬಳಲುತ್ತಿರುವ ಮಕ್ಕಳಿಗಾಗಿ ಎಚ್​ಎಲ್​ಎ (ಹ್ಯೂಮನ್​ ಲ್ಯುಕೋಸೈಟ್​ ಆಂಟಿಜೆನ್​) ಹೊಂದಾಣಿಕೆ ಉಚಿತ ಶಿಬಿರ ಆಯೋಜಿಸಿದೆ.
ಮೇ 26ರಂದು ಬೆಳಗ್ಗೆ 10ರಿಂದ ಮಧ್ಯಾಹ್ನ 3ರ ವರೆಗೆ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯ ಮಕ್ಕಳ ಹೊರರೋಗಿ ವಿಭಾಗದ ಸೆಮಿನಾರ್​ ಹಾಲ್​ನಲ್ಲಿ ಈ ಶಿಬಿರ ನಡೆಯಲಿದೆ. ಕಸ್ತೂರ್ಬಾ ಆಸ್ಪತ್ರೆ ಮಣಿಪಾಲವು ಈ ಪ್ರದೇಶದ ಮಕ್ಕಳ ಮೂಳೆ ಮಜ್ಜೆಯ ಕಸಿ ಸೇವೆಗಳ ಪ್ರಮುಖ ಕೇಂದ್ರಗಳಲ್ಲಿ ಒಂದಾಗಿದೆ. ರೋಗಿಗಳು ಮತ್ತು ಅವರ ಕುಟುಂಬ ಸದಸ್ಯರು ಸೇರಿದಂತೆ ಎಚ್​ಎಲ್​ಎ ಟೈಪಿಂಗ್​ಗೆ ಒಳಗಾಗಲು ಸಹಾಯ ಮಾಡುವ ಉದ್ದೇಶ ಹೊಂದಲಾಗಿದೆ.
ಮೂಳೆ ಮಜ್ಜೆಯ ಕಸಿ (ಬಿಎಂಟಿ) ಅಗತ್ಯವಿರುವ ಮಕ್ಕಳಿಗೆ ಸೂಕ್ತವಾದ ಮೂಳೆ ಮಜ್ಜೆಯ ದಾನಿಗಳನ್ನು ಗುರುತಿಸಲು ಬಳಸಲಾಗುವ ಅತ್ಯಗತ್ಯ ಪರೀಕ್ಷೆ ಇದಾಗಿದೆ. ಎಚ್​ಎಲ್​ಎ ಟೈಪಿಂಗ್​ ದುಬಾರಿ ತಪಾಸಣೆ ಆಗಿದ್ದು, ಅನೇಕ ಕುಟುಂಬಗಳಿಗೆ ಇದು ಪ್ರಮುಖ ಸವಾಲಾಗಿ ಪರಿಣಮಿಸುತ್ತದೆ. ಹೀಗಾಗಿ ಚಿಕಿತ್ಸೆ ಬಯಸುವ ಕುಟುಂಬಗಳಿಗೆ ಬೆಂಬಲ ನೀಡಲು ಆಸ್ಪತ್ರೆಯು ಒನ್​ ಗುಡ್​ ಸ್ಟೆಪ್​ ಫೌಂಡೇಷನ್​ನ ಬೆಂಬಲದೊಂದಿಗೆ ಸಂಪೂರ್ಣ ಉಚಿತವಾಗಿ ಈ ಸೇವೆ ನೀಡುತ್ತಿದೆ ಎಂದು ಕಸ್ತೂರ್ಬಾ ಆಸ್ಪತ್ರೆಯ ಮಕ್ಕಳ ಆಂಕೊಲಾಜಿ ವಿಭಾಗದ ಮುಖ್ಯಸ್ಥ ಡಾ. ವಾಸುದೇವ ಭಟ್​ ಕೆ. ತಿಳಿಸಿದ್ದಾರೆ.
ಈ ವಿಶೇಷ ಶಿಬಿರದಲ್ಲಿ ಎಲ್ಲ ಹೊಂದಾಣಿಕೆಯ ದಾನಿಗಳಿಂದ ಚಿಕಿತ್ಸೆಗಾಗಿ ಕಾಯುತ್ತಿರುವ ಮಗು ಮತ್ತು ಕುಟುಂಬಕ್ಕೆ ಹೊಸ ಭರವಸೆ ಲಭಿಸಲಿದೆ. ಇದೊಂದು ಉತ್ತಮ ಅವಕಾಶವಾಗಿದ್ದು, ಶಿಬಿರದಲ್ಲಿ ಭಾಗವಹಿಸಲು ಆಸ್ಪತ್ರೆಯು ಅರ್ಹ ರೋಗಿಗಳು ಮತ್ತು ಕುಟುಂಬಗಳಿಗೆ ಆಹ್ವಾನಿಸುತ್ತದೆ. ಮಾಹಿತಿಗಾಗಿ, ಮೊ.ಸಂ. 9606035387 ಸಂಪರ್ಕಿಸಬಹುದು ಎಂದು ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ್​ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 
"

ಕಸ್ತೂರ್ಬಾ ಆಸ್ಪತ್ರೆಯು ರೋಗಿಗಳ ಆರೈಕೆ ಮತ್ತು ಸಮುದಾಯ ಸೇವೆ ಎರಡನ್ನೂ ಒಟ್ಟಿಗೆ ನೆರವೇರಿಸುವ ಸಂಸ್ಥೆಯಾಗಿದೆ. ಈ ರೀತಿಯ ಉಪಕ್ರಮವು ಅತ್ಯಂತ ಕಷ್ಟಕರ ಪರಿಸ್ಥಿತಿ ಎದುರಿಸುತ್ತಿರುವ ಕುಟುಂಬಗಳಿಗೆ ನೇರವಾಗಿ ಸಹಕಾರಿಯಾಗುತ್ತದೆ. ಮಕ್ಕಳು ಮತ್ತು ಅವರ ಪಾಲಕರಿಗೆ ಸಹಾಯ ಮಾಡಲು ನಮ್ಮ ವೈದ್ಯರ ತಂಡವು ಸಮರ್ಪಣೆ ಮತ್ತು ಸಹಾನುಭೂತಿಯಿಂದ ಕರ್ತವ್ಯ ನಿರ್ವಹಿಸಲಿದ್ದಾರೆ.

— ಡಾ. ಸುಧಾಕರ್​ ಕಂಟಿಪುಡಿ. ಮಾಹೆ ಬೋಧನಾ ಆಸ್ಪತ್ರೆಗಳ ಮುಖ್ಯ ಕಾರ್ಯಾಚರಣಾ ಅಧಿಕಾರಿ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net