ಉತ್ತಮ ಆರೋಗ್ಯದ ತಳಹದಿಯಲ್ಲಿ ಸಾಧನೆ ಸಾಧ್ಯ: ಶಾಸಕ ಯಶ್ಪಾಲ್‌ ಸುವರ್ಣ

ವಿಶ್ವ ಹೃದಯ ದಿನದ ಅಂಗವಾಗಿ ಆದರ್ಶ ಆಸ್ಪತ್ರೆಯಲ್ಲಿ ಉಚಿತ ಹೃದಯ ತಪಾಸಣಾ ಶಿಬಿರ
health checkup
ಆದರ್ಶ ಆಸ್ಪತ್ರೆಯಲ್ಲಿ ಶಾಸಕ ಯಶ್‌ಪಾಲ್‌ ಸುವರ್ಣ ಉಚಿತ ಹೃದಯ ತಪಾಸಣಾ ಶಿಬಿರ ಉದ್ಘಾಟಿಸಿದರು.
Published on: 

ಉಡುಪಿ: ಮನುಷ್ಯನಿಗೆ ಜೀವನದಲ್ಲಿ ಸಾಧನೆ ಮಾಡಲು ಉತ್ತಮ ಆರೋಗ್ಯವೇ ಅಡಿಪಾಯ. ದೇಶದಲ್ಲಿ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಸಾರ್ವಜನಿಕರಲ್ಲಿ ಆರೋಗ್ಯ ಜಾಗೃತಿ ಮೂಡಿಸುವ ಕಾರ್ಯ ಶ್ಲಾನೀಯ ಎಂದು ಶಾಸಕ ಯಶ್​ಪಾಲ್​ ಸುವರ್ಣ ಹೇಳಿದರು.

ವಿಶ್ವ ಹೃದಯ ದಿನದ ಅಂಗವಾಗಿ ಆದರ್ಶ ಆಸ್ಪತ್ರೆಯಲ್ಲಿ ಉಚಿತ ಹೃದಯ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಉಡುಪಿ ಜಿಲ್ಲೆ ಹಲವು ಸಾಧನೆಗಳಿಗೆ ಹೆಸರಾಗಿದೆ. ವೈದ್ಯಕಿಯ ಸೇವೆಯ ಜತೆಗೆ ಈ ಅಸ್ಪತ್ರೆ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವುದು ಶ್ಲಾಘನೀಯ. ಯಾವುದೇ ರೋಗಗಳ ತಡೆಗೆ ಜಾಗೃತಿ ಅತ್ಯಂತ ಅಗತ್ಯ ಎಂದರು.

ಆದರ್ಶ ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ. ಜಿ.ಎಸ್​. ಚಂದ್ರಶೇಖರ್​ ಪ್ರಸ್ತಾವಿಕವಾಗಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಭಾರತದಲ್ಲಿ ಯುವಜನತೆಯಲ್ಲೂ ಹೃದಯಾಘಾತ ಹಾಗೂ ಹೃದಯ ಸಂಬಂಧಿ ಕಾಯಿಲೆಗಳು ಹೆಚ್ಚಾಗುತ್ತಿರುವುದು ಆತಂಕಕಾರಿ ಸಂಗತಿ. ಅಸಮರ್ಪಕ ಆಹಾರ ಪದ್ಧತಿ, ದೈಹಿಕ ಶ್ರಮದ ಕೊರತೆ ಹಾಗೂ ಮಾನಸಿಕ ಒತ್ತಡವೇ ಇದಕ್ಕೆ ಮುಖ್ಯ ಕಾರಣ ಎಂದು ತಿಳಿಸಿದರು.

ಹೃದ್ರೋಗ ತಜ್ಞ ಡಾ. ಸುಹಾಸ್​ ಜಿ.ಸಿ. ಮಾತನಾಡಿ, ಸಮತೋಲಿತ ಆಹಾರ, ನಿರಂತರ ವ್ಯಾಯಾಮ, ಅಗತ್ಯ ನಿದ್ರೆ ಮತ್ತು ವಿಶ್ರಾಂತಿ ಹೃದಯದ ಆರೋಗ್ಯ ಕಾಪಾಡಲು ನೆರವಾಗುತ್ತವೆ. ಸಾರ್ವಜನಿಕರು ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು ಎಂದರು.

ಹೃದ್ರೋಗ ತಜ್ಞರಾದ ಡಾ. ಶ್ರೀಕಾಂತ್​ಕೃಷ್ಣ, ಡಾ. ವಿಶು ಕುಮಾರ್​ ಬಿ. ಹಾಗೂ ಕಾರ್ಡಿಯೋಥೊರಾಸಿಕ್​ ಮತ್ತು ವ್ಯಾಸ್ಕುಲರ್​ ಸರ್ಜನ್​ ಡಾ. ಗುರುಪ್ರಸಾದ್​ ಡಿ. ರೈ ಮಾಹಿತಿ ನೀಡಿದರು. ಆದರ್ಶ ಆಸ್ಪತ್ರೆಯ ಸಿಇಒ ವಿಮಲಾ ಚಂದ್ರಶೇಖರ್​ ಉಪಸ್ಥಿತರಿದ್ದರು. ಅನುಶ್ರೀ ಕಾರ್ಯಕ್ರಮ ನಿರೂಪಿಸಿದರು.

ಉಚಿತ ತಪಾಸಣೆ: ಶಿಬಿರದಲ್ಲಿ ಸಾರ್ವಜನಿಕರಿಗೆ ಉಚಿತವಾಗಿ ಆರ್​ಬಿಸಿ, ಇಸಿಜಿ, ಇಕೋ, ಟಿಎಂಟಿ ಹಾಗೂ ಲಿಪಿಡ್​ ಪ್ರೊಫೈಲ್​ ಪರೀಕ್ಷೆಗಳನ್ನು ನಡೆಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net