ಉಳ್ಳಾಲ ಬ್ಯಾನರ್‌ಗಳಿಂದ ಮುಕ್ತ

 ಪ್ಲೆಕ್ಸ್ ಮುಕ್ತ ಉಳ್ಳಾಲ ಜಂಕ್ಷನ್.
ಪ್ಲೆಕ್ಸ್ ಮುಕ್ತ ಉಳ್ಳಾಲ ಜಂಕ್ಷನ್.
Published on
ಅನ್ಸಾರ್ ಇನೋಳಿ ಉಳ್ಳಾಲ
ಎಲ್ಲೆಲ್ಲೂ ಬೇಕಾಬಿಟ್ಟಿ ರಾಜಕೀಯ ಹಾಗೂ ವ್ಯವಹಾರಿಕ ಫ್ಲೆಕ್ಸ್‌ಗಳು ಮತ್ತು ರಸ್ತೆಯುದ್ದಕ್ಕೂ ಬ್ಯಾನರ್‌ಗಳ ಸಾಲುಗಳಿಂದ ಸದಾ ಕಲುಷಿತಗೊಂಡಿರುತ್ತಿದ್ದ ಉಳ್ಳಾಲ ತಾಲೂಕು ಇದೇ ಮೊದಲ ಬಾರಿ ಫ್ಲೆಕ್ಸ್ ಮತ್ತು ಬ್ಯಾನರ್‌ಗಳಿಂದ ಮುಕ್ತವಾಗಿದ್ದು, ಪರಿಸರ ಪ್ರೇಮಿಗಳಲ್ಲಿ ಸಂತಸ ಮೂಡಿಸಿದೆ...
ಉಳ್ಳಾಲ ತಾಲೂಕು ವ್ಯಾಪ್ತಿಯಲ್ಲಿ ವರ್ಷವಿಡೀ ಫ್ಲೆಕ್ಸ್ ಮತ್ತು ಬ್ಯಾನರ್‌ಗಳದ್ದೇ ಹಾವಳಿ ಹೆಚ್ಚಾಗಿತ್ತು. ಪ್ರಮುಖ ರಸ್ತೆಗಳ ಇಕ್ಕೆಲಗಳಲ್ಲಿ ಫ್ಲೆಕ್ಸ್‌ಗಳು ಅಬ್ಬರಿಸಿದರೆ, ರಸ್ತೆಯ ಮಧ್ಯಭಾಗವನ್ನು ಸಾಲು ಸಾಲು ಬ್ಯಾನರ್‌ಗಳು ಆಕ್ರಮಿಸಿಕೊಳ್ಳುತ್ತಿದ್ದವು.
ಸಾರ್ವಜನಿಕ ಸ್ಥಳಗಳಲ್ಲಿ ಯಾವುದೇ ಕಾರ್ಯಕ್ರಮಗಳಿಗಾಗಿ ಫ್ಲೆಕ್ಸ್ ಅಥವಾ ಬ್ಯಾನರ್ ಅಳವಡಿಸುವುದಾದರೆ ಸ್ಥಳೀಯಾಡಳಿತದಿಂದ ಕಡ್ಡಾಯವಾಗಿ ಅನುಮತಿ ಪಡೆದು, ಶುಲ್ಕ ಪಾವತಿಸಿ ಪರವಾನಿಗೆ ಸಂಖ್ಯೆಯನ್ನು ನಮೂದಿಸಬೇಕು ಎಂಬ ಸ್ಪಷ್ಟ ನಿಯಮವಿದೆ. ಅಲ್ಲದೆ, ಮಣ್ಣಿನಲ್ಲಿ ಕರಗದ ಪ್ಲಾಸ್ಟಿಕ್ ಬಳಕೆಯೂ ನಿಷೇಧಿಸಲ್ಪಟ್ಟಿದೆ. ಆದರೆ, ಈ ನಿಯಮಗಳೆಲ್ಲವೂ ಕೇವಲ ಕಾಗದದಲ್ಲಷ್ಟೇ ಉಳಿದಿದ್ದು, ಅನುಷ್ಠಾನಕ್ಕೆ ಬರುವಲ್ಲಿ ವಿಫಲವಾಗಿತ್ತು. ಜನಪ್ರತಿನಿಧಿಗಳು ಮತ್ತು ರಾಜಕಾರಣಿಗಳ ಒತ್ತಡ ಹಾಗೂ ನಿರ್ಲಕ್ಷ್ಯವೇ ಇದಕ್ಕೆ ಪ್ರಮುಖ ಕಾರಣ ಎಂಬ ಆರೋಪ ವ್ಯಾಪಕವಾಗಿತ್ತು.
ಬೃಹತ್ ಗಾತ್ರದ ಬ್ಯಾನರ್‌ಗಳು ಧರೆಗುರುಳಿ ಜೀವಹಾನಿ ಸಂಭವಿಸಿರುವ ಹಾಗೂ ಆಸ್ತಿ-ಪಾಸ್ತಿ ನಷ್ಟವಾಗಿರುವ ನಿದರ್ಶನಗಳು ನಮ್ಮ ಮುಂದಿವೆ. ಈ ಗಂಭೀರತೆಯನ್ನು ಅರಿತು, ಜಿಲ್ಲಾಧಿಕಾರಿಯವರ ಕಟ್ಟುನಿಟ್ಟಿನ ಸೂಚನೆಯಂತೆ ಉಳ್ಳಾಲ ವ್ಯಾಪ್ತಿಯ ನಗರಸಭೆ, ಪುರಸಭೆ ಹಾಗೂ ಸ್ಥಳೀಯಾಡಳಿತಗಳು ಎಚ್ಚೆತ್ತುಕೊಂಡಿದ್ದು, ರಸ್ತೆಬದಿಯಲ್ಲಿದ್ದ ಅನಧಿಕೃತ ಬ್ಯಾನರ್ ಮತ್ತು ಫ್ಲೆಕ್ಸ್‌ಗಳನ್ನು ಸಂಪೂರ್ಣವಾಗಿ ತೆರವುಗೊಳಿಸಿವೆ. ಪರಿಣಾಮವಾಗಿ ರಾಜರಸ್ತೆಗಳು ಹಾಗೂ ಜಂಕ್ಷನ್‌ಗಳು ಸ್ವಚ್ಛವಾಗಿ, ಸುಂದರವಾಗಿ ಕಂಗೊಳಿಸುತ್ತಿವೆ.

ರಾಜಕಾರಣಿಗಳದ್ದೇ ಸಿಂಹಪಾಲು

ಅನಧಿಕೃತವಾಗಿ ಫ್ಲೆಕ್ಸ್ ಹಾಗೂ ಬ್ಯಾನರ್‌ಗಳನ್ನು ಅಳವಡಿಸುವಲ್ಲಿ ರಾಜಕಾರಣಿಗಳು ಮತ್ತು ಜನಪ್ರತಿನಿಧಿಗಳೇ ಮುಂಚೂಣಿಯಲ್ಲಿದ್ದಾರೆ. ಸರ್ಕಾರಿ ಹಾಗೂ ರಾಜಕೀಯ ಕಾರ್ಯಕ್ರಮಗಳ ಹೆಸರಿನಲ್ಲಿ ರಸ್ತೆಗಳ ಪ್ರತಿ ಮೂಲೆ ಹಾಗೂ ಜಂಕ್ಷನ್‌ಗಳಲ್ಲಿ ಪೈಪೋಟಿಗೆ ಬಿದ್ದಂತೆ ಬ್ಯಾನರ್‌ಗಳನ್ನು ಹಾಕಲಾಗುತ್ತದೆ. ಕೇವಲ ಅರ್ಧ ಗಂಟೆಯ ಕಾರ್ಯಕ್ರಮಗಳಿಗೂ ಹಾಕಲಾಗುವ ಈ ಬ್ಯಾನರ್‌ಗಳು ವಾರಗಟ್ಟಲೆ ಹಾಗೆಯೇ ಉಳಿಯುತ್ತವೆ.

ಅನುಮತಿ ಪಡೆಯದೆ ಹಾಗೂ ಕಾರ್ಯಕ್ರಮ ಮುಗಿದರೂ ಅಳವಡಿಸಲಾಗಿದ್ದ ಬ್ಯಾನರ್, ಫ್ಲೆಕ್ಸ್‌ಗಳನ್ನು ತೆರವುಗೊಳಿಸಲಾಗಿದೆ. ಮುಂದಕ್ಕೆ ಯಾವುದರಲ್ಲಿ ಪರವಾನಗಿ ಸಂಖ್ಯೆ ಇರುವುದಿಲ್ಲವೋ ಅವುಗಳನ್ನು ಮುಲಾಜಿಲ್ಲದೆ ತೆರವುಗೊಳಿಸಲಾಗುವುದು.

ಜಿಲ್ಲಾಧಿಕಾರಿ ಆದೇಶದಂತೆ ಫ್ಲೆಕ್ಸ್, ಬ್ಯಾನರ್ ತೆರವುಗೊಳಿಸುವಂತೆ ಎಲ್ಲ ಗ್ರಾಮ ಪಂಚಾಯಿತಿಗಳಿಗೆ ಸೂಚನೆ ನೀಡಲಾಗಿದೆ. ಅಲ್ಲದೆ ಅನಧಿಕೃತವಾಗಿ ಅಳವಡಿಸಿದರೆ ತೆರವುಗೊಳಿಸಲು ಸೂಚಿಸಲಾಗಿದೆ. ಉಳಿದಿರುವ ಬ್ಯಾನರ್‌ಗಳಿಗೆ ಅನುಮತಿ ಪಡೆಯಲಾಗಿದೆಯೇ ಎನ್ನುವ ಬಗ್ಗೆ ಪರಿಶೀಲನೆ ನಡೆಸಲಾಗುವುದು.

ರಸ್ತೆಬದಿಯ ಬ್ಯಾನರ್, ಫ್ಲೆಕ್ಸ್ ತೆರವುಗೊಳಿಸಿರುವುದರಿಂದ ಸೌಂದರ್ಯದ ಜತೆ ಕ್ಷೇತ್ರದ ಗೌರವವೂ ಹೆಚ್ಚಾಗಿದೆ. ಮುಂದಿನ ದಿನಗಳಲ್ಲೂ ಇದನ್ನು ಉಳಿಸುವ ಅವಶ್ಯಕತೆಯಿದೆ. ಏಕಬಳಕೆ ಪ್ಲಾಸ್ಟಿಕ್ ಉತ್ಪಾದನೆ ನಿಷೇಧಿಸುವ ಬಗ್ಗೆ ಆರೋಗ್ಯ ಸಚಿವರು ನೀಡಿರುವ ಭರವಸೆ ಈಡೇರಿಸಿದರೆ ಶೇ.50ರಷ್ಟು ಪ್ಲಾಸ್ಟಿಕ್ ತ್ಯಾಜ್ಯ ಕಡಿಮೆಯಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net