ಪುತ್ತೂರು ಗ್ರಾಮಾಂತರ : ಗಾಂಜಾ ಪ್ರಕರಣ ಪತ್ತೆ ಮಾಡಲು ಪೊಲೀಸ್ ಎಂದು ಹೇಳಿಕೊಂಡು ಬಂದ ಅಪರಿಚಿತನೊಬ್ಬ ಆರೋಪಿಗಳಿಂದ ವಶಪಡಿಸಿಕೊಳ್ಳಲಾದ ಐಫೋನ್ ನೀಡುವುದಾಗಿ ನಂಬಿಸಿ ಒಳಮೊಗ್ರು ಗ್ರಾಮದ ಕುಂಬ್ರದ ಜೂಸ್ ಮತ್ತು ಚಾಟ್ಸ್ ಅಂಗಡಿಯಲ್ಲಿ ಕೆಲಸಕ್ಕಿರುವ ಯುವತಿಯನ್ನು ನಂಬಿಸಿ 3,500 ರೂ.ಪಡೆದು ವಂಚಿಸಿದ್ದಾನೆ.
ಭಾನುವಾರ ಅಂಗಡಿಗೆ ಬಂದಿದ್ದ ಅಪರಿಚಿತ, ತಾನು ಪೊಲೀಸ್ ಎಂದು ಯುವತಿಯಲ್ಲಿ ಪರಿಚಯಿಸಿಕೊಂಡಿದ್ದಾನೆ. ಬಳಿಕ ಗಾಂಜಾ ದಂಧೆಕೋರರನ್ನು ಹಿಡಿಯಲು ಬಂದಿದ್ದೇವೆ ಎಂದು ಹೇಳಿ ವಿಶ್ವಾಸ ಗಳಿಸಿದ್ದಾನೆ. ಆರೋಪಿಗಳಿಂದ ವಶಪಡಿಸಿಕೊಳ್ಳಲಾದ ಐಫೋನ್ ಇದೆ. ನಿಮಗೂ ಬೇಕಾ? ಎಂದು ಕೇಳಿ, ತುರ್ತಾಗಿ 3,500 ರೂ.ಕೊಟ್ಟರೆ ಐಫೋನ್ ಕೊಡುವುದಾಗಿ ಹೇಳಿದ್ದಾನೆ.
ನಂಬಿದ ಯುವತಿ ಹಣ ನೀಡಿದ್ದಾಳೆ. ಜೀಪಿನಲ್ಲಿರುವ ಐಫೋನ್ ತೆಗೆದುಕೊಂಡು ಬರುತ್ತೇನೆ ಎಂದು ತೆರಳಿದ ಆತ ವಾಪಸ್ ಬಂದಿಲ್ಲ. ನಂತರ ಯುವತಿಗೆ ತಾನು ಮೋಸ ಹೋಗಿರುವುದು ಅರಿವಾಗಿದೆ. ಕೆಲದಿನಗಳ ಹಿಂದೆಯಷ್ಟೇ ಕುಂಬ್ರದ ಗಾಣಿಗ ಆಯಿಲ್ ಮಿಲ್‌ಗೆ ಬಂದ ಅಪರಿಚಿತನೊಬ್ಬ ಅಂಗಡಿ ಮಾಲಕಿಗೆ ವಂಚಿಸಿದ ಘಟನೆ ನಡೆದಿತ್ತು.