

ವಿಜಯವಾಣಿ ಸುದ್ದಿಜಾಲ ಬೈಂದೂರು
ನಕಲಿ ದಾಖಲೆಗಳನ್ನು ಸೃಷ್ಟಿಸಿ ಬ್ಯಾಂಕ್ಗೆ ಸಲ್ಲಿಸುವ ಮೂಲಕ ಕಾರು ಖರೀದಿ ಹಾಗೂ ಆಸ್ತಿ ಅಡಮಾನ ಸಾಲ ಪಡೆದು ಎಂಸಿಸಿ ಬ್ಯಾಂಕ್ಗೆ ಬರೋಬ್ಬರಿ 98.99 ಲಕ್ಷ ರೂ.ವಂಚಿಸಿರುವ ಆರೋಪದಡಿ ಬೈಂದೂರು ಪೊಲೀಸ್ ಠಾಣೆಯಲ್ಲಿ ಮೂರು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.
ಎಂಸಿಸಿ ಬ್ಯಾಂಕ್ನ ಬೈಂದೂರು ಯಡ್ತರೆ ಶಾಖೆಯಲ್ಲಿ ನಡೆದಿರುವ ಈ ವಂಚನೆಗಳಲ್ಲಿ ಆರೋಪಿಗಳು ನಕಲಿ ದಾಖಲೆಗಳನ್ನು ಆಸಲಿ ಎಂದು ನಂಬಿಸಿ ಬ್ಯಾಂಕ್ನಿಂದ ಲಕ್ಷಾಂತರ ರೂ. ಸಾಲ ಪಡೆದಿರುವುದು ಬೆಳಕಿಗೆ ಬಂದಿದೆ.
ಮೊದಲ ಪ್ರಕರಣದಲ್ಲಿ ಶಿರೂರಿನ ಜುಹಾ ಮಂಜಿಲ್ ನಿವಾಸಿ ಸಮೀರನ್ ಶೇಖ್ ಎಂಬಾತ ತನ್ನ ಜಾಮೀನುದಾರ ಅಸ್ನಾ ಶೇಖ್ ಅವರೊಂದಿಗೆ 2020ರ ಜುಲೈ 11ರಂದು ಬ್ಯಾಂಕ್ಗೆ ಹಾಜರಾಗಿ ಹೊಸ ಕಾರು ಖರೀದಿಸುವುದಾಗಿ ಸಾಲಕ್ಕೆ ಅರ್ಜಿ ಸಲ್ಲಿಸಿದ್ದ. ನಂದಿ ಟೊಯೋಟಾ ಕಾರ್ಸ್ನ ಜೂನ್ 29ರ ಕೊಟೇಶನ್ ಸಲ್ಲಿಸಿ 27.50 ಲಕ್ಷ ರೂ. ಸಾಲ ಪಡೆದಿದ್ದ. ಬಳಿಕ ಎಂ-20-ಝಡ್ಝಡ್-9876 ನೋಂದಣಿ ಸಂಖ್ಯೆಯ ವಾಹನವನ್ನು ಪರಿಶೀಲನೆಗೆ ಹಾಜರುಪಡಿಸಿ ಆರ್ಸಿ, ಖರೀದಿ ಬಿಲ್, ವಿಮೆ ಹಾಗೂ ಬಿ-ಎಕ್ಸ್ಟ್ರಾಕ್ಸ್ ದಾಖಲೆಗಳನ್ನು ಸಲ್ಲಿಸಿದ್ದ. ಎರಡು ತಿಂಗಳ ಸಾಲದ ಕಂತನ್ನೂ ಪಾವತಿಸಿದ್ದ. ಆದರೆ ಬ್ಯಾಂಕ್ ಅಧಿಕಾರಿಗಳು ದಾಖಲೆಗಳ ನೈಜತೆ ಪರಿಶೀಲಿಸಿದಾಗ ಅವೆಲ್ಲವೂ ನಕಲಿ ಎಂಬುದು ಪತ್ತೆಯಾಗಿದೆ.
ಎರಡನೇ ಪ್ರಕರಣದಲ್ಲಿ ಗಂಗೊಳ್ಳಿಯ ಖಾರ್ವಿಕೇರಿ ನಿವಾಸಿ ಮಹಮದ್ ಹುಸೈನ್ ಅಜುಮುದ್ದೀನ್ ಎಂಬಾತ ತೆಕ್ಕಟ್ಟೆಯ ಜನತಾ ಕಾಲನಿ ನಿವಾಸಿ ಸಾನಾಬಿ ಅವರನ್ನು ಜಾಮೀನುದಾರರನ್ನಾಗಿ ಮಾಡಿಕೊಂಡು 2026ರ ಸೆ.22ರಂದು ಬ್ಯಾಂಕ್ಗೆ ಹಾಜರಾಗಿದ್ದ. ಹೊಸ ಕಾರು ಖರೀದಿಸುವುದಾಗಿ ನಂದಿ ಟೊಯೋಟಾ ಕಾರ್ಸ್ನ ಸೆ.21ರ ಕೊಟೇಶನ್ ಸಲ್ಲಿಸಿ 33.49 ಲಕ್ಷ ರೂ. ಸಾಲಕ್ಕೆ ಅರ್ಜಿ ಸಲ್ಲಿಸಿದ್ದ. ಸೆ.28ರಂದು ಸಾಲ ಮಂಜೂರಾಗಿದ್ದು, ಬಳಿಕ ಕೆಎ-04-ಎಂಎಚ್-4174 ನೋಂದಣಿ ಸಂಖ್ಯೆಯ ವಾಹನದ ವಿಮಾ ಪಾಲಿಸಿಯನ್ನು ಬ್ಯಾಂಕ್ಗೆ ಸಲ್ಲಿಸಿದ್ದು, ಒಂದು ಕಂತನ್ನು ಮರುಪಾವತಿಸಿದ್ದ. ಆದರೆ ದಾಖಲೆಗಳ ಪರಿಶೀಲನೆಗಾಗಿ ಆರ್ಟಿಒ ಕಚೇರಿಯನ್ನು ಸಂಪರ್ಕಿಸಿದಾಗ ವಿಮಾ ಪಾಲಿಸಿಯಲ್ಲಿ ನಮೂದಿಸಿದ್ದ ವಾಹನದ ನೋಂದಣಿ ಸಂಖ್ಯೆ ನಕಲಿ ಎಂಬುದು ತಿಳಿದುಬಂದಿದೆ.
ಮೂರು ಪ್ರಕರಣಗಳಲ್ಲಿ ಒಟ್ಟು 98.99 ಲಕ್ಷ ರೂ. ಸಾಲವನ್ನು ನಕಲಿ ದಾಖಲೆಗಳ ಮೂಲಕ ಪಡೆದು ಬ್ಯಾಂಕ್ಗೆ ವಂಚಿಸಿರುವ ಆರೋಪ ಕೇಳಿಬಂದಿದ್ದು, ಉಡುಪಿ ಎಂಸಿಸಿ ಬ್ಯಾಂಕ್ನ ಮುಖ್ಯ ವ್ಯವಸ್ಥಾಪಕ ಹಾಗೂ ವಸೂಲಾತಿ ಅಧಿಕಾರಿ ಸಂದೀಪ್ ಕ್ವಾಡ್ರಸ್ ಅವರು ನೀಡಿದ ದೂರಿನ ಮೇರೆಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿವೆ.
ಮೂರನೇ ಪ್ರಕರಣದಲ್ಲಿ ಸಿದ್ದಾಪುರ ಗ್ರಾಮದ ಹೊಸಂಗಡಿ ನಿವಾಸಿ ಮಹಮದ್ ಸಲೀಂ ಎಂಬಾತ ಹೆಣ್ಣೆಬೈಲು ನಿವಾಸಿ ಆಲ್ ಶಕೀರಾ ಅವರನ್ನು ಜಾಮೀನುದಾರರನ್ನಾಗಿ ಮಾಡಿಕೊಂಡು 2020ರ ಜುಲೈ 15ರಂದು ಬ್ಯಾಂಕ್ ಹಾಜರಾಗಿದ್ದ. ಹೊಸ ಕಾರು ಖರೀದಿಸುವುದಾಗಿ ನಂದಿ ಟೊಯೋಟಾ ಕಾರ್ಸ್ನ ಜುಲೈ 14ರ ಕೊಟೇಶನ್ ಸಲ್ಲಿಸಿ 26 ಲಕ್ಷ ರೂ. ಸಾಲ ಪಡೆದಿದ್ದ. ಬಳಿಕ ಕೆಎ-20-ಎಎ-8888 ನೋಂದಣಿ ಸಂಖ್ಯೆಯ ವಾಹನವನ್ನು ಪರಿಶೀಲನೆಗೆ ಹಾಜರುಪಡಿಸಿ ಆರ್ಸಿ, ಖರೀದಿ ಬಿಲ್, ವಿಮೆ ಹಾಗೂ ಬಿ. ಎಕ್ಸ್ಟ್ರಾಕ್ಸ್ ದಾಖಲೆಗಳನ್ನು ಸಲ್ಲಿಸಿದ್ದು, ಎರಡು ತಿಂಗಳ ಕಂತನ್ನೂ ಪಾವತಿಸಿದ್ದ. ಆದರೆ ಬ್ಯಾಂಕ್ ಅಧಿಕಾರಿಗಳು ದಾಖಲೆಗಳನ್ನು ಪರಿಶೀಲಿಸಿದಾಗ ಅವೆಲ್ಲವೂ ನಕಲಿ ಎಂಬುದು ಪತ್ತೆಯಾಗಿದೆ. ಇದಲ್ಲದೆ, ಮಹಮದ್ ಸಲೀಂ ತನ್ನ ಹೆಸರಿನಲ್ಲಿರುವ ಹೊಸಂಗಡಿ ಗ್ರಾಮದ 45 ಸೆಂಟ್ಸ್ ಜಮೀನನ್ನು ಅಡಮಾನವಿಟ್ಟು 12 ಲಕ್ಷ ರೂ. ಸಾಲ ಪಡೆದಿದ್ದ. ಈ ಸಾಲ ಪಡೆಯುವ ಸಂದರ್ಭದಲ್ಲಿ ಆತ ಸಲ್ಲಿಸಿದ್ದ ದಾಖಲೆಗಳು ನಕಲಿ ಎಂಬುದು ಬ್ಯಾಂಕ್ ಅಧಿಕಾರಿಗಳ ಪರಿಶೀಲನೆಯಲ್ಲಿ ಬೆಳಕಿಗೆ ಬಂದಿದೆ.