ಉಡುಪಿ ಧರ್ಮಪ್ರಾಂತ್ಯದ ಶ್ರೇಷ್ಠ ಗುರುವಾಗಿ ಫ್ರಾನ್ಸಿಸ್​ ಝೇವಿಯರ್​ ಲೂವಿಸ್​ ನೇಮಕ

ಮಲ್ಪೆಯ ಬಿಷಪ್​ ಹೌಸ್​ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಫ್ರಾನ್ಸಿಸ್​ ಝೇವಿಯರ್​ ಲೂವಿಸ್​ ಅವರು ಶ್ರೇಷ್ಠ ಗುರು ಹುದ್ದೆ ಸ್ವೀಕರಿಸಿದರು. ಡಾ. ಲೆಸ್ಲಿ ಕ್ಲಿಫರ್ಡ್​ ಡಿಸೋಜಾ ಅವರು ಪ್ರಮಾಣ ವಚನ ಬೋಧಿಸಿದರು.
ಮಲ್ಪೆಯ ಬಿಷಪ್​ ಹೌಸ್​ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಫ್ರಾನ್ಸಿಸ್​ ಝೇವಿಯರ್​ ಲೂವಿಸ್​ ಅವರು ಶ್ರೇಷ್ಠ ಗುರು ಹುದ್ದೆ ಸ್ವೀಕರಿಸಿದರು. ಡಾ. ಲೆಸ್ಲಿ ಕ್ಲಿಫರ್ಡ್​ ಡಿಸೋಜಾ ಅವರು ಪ್ರಮಾಣ ವಚನ ಬೋಧಿಸಿದರು.
Published on

ಬಿಷಪ್​ ಹೌಸ್​ನಲ್ಲಿ ಪ್ರಾರ್ಥನಾ ಸಭೆ, ಪ್ರಮಾಣ ವಚನ

* ಡಾ. ಲೆಸ್ಲಿ ಕ್ಲಿಫರ್ಡ್​ ಡಿಸೋಜಾ ಅಧ್ಯಕ್ಷತೆ   

ಉಡುಪಿ: ಧರ್ಮಪ್ರಾಂತ್ಯದ ನೂತನ ವಿಕಾರ್​ ಜನರಲ್​ (ಶ್ರೇಷ್ಠ ಗುರು)ಆಗಿ ವಂ. ಫ್ರಾನ್ಸಿಸ್​ ಝೇವಿಯರ್​ ಲೂವಿಸ್​ ಅವರನ್ನು ನೇಮಕಗೊಳಿಸಿ ಧರ್ಮಪ್ರಾಂತ್ಯದ ಅಧ್ಯಕ್ಷ ಅತಿ ವಂ. ಡಾ. ಲೆಸ್ಲಿ ಕ್ಲಿಫರ್ಡ್​ ಡಿಸೋಜಾ ಆದೇಶ ಹೊರಡಿಸಿದ್ದಾರೆ. ವಂ. ಫ್ರಾನ್ಸಿಸ್​ ಝೇವಿಯರ್​ ಲೂವಿಸ್​ ಅವರು ಪ್ರಸ್ತುತ ಕಲತ್ತೂರು ಚರ್ಚ್​ನ ಧರ್ಮಗುರುವಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಬಿಷಪ್​ ಹೌಸ್​ನಲ್ಲಿ ಶನಿವಾರ (ಮೇ 2) ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಫ್ರಾನ್ಸಿಸ್​ ಝೇವಿಯರ್​ ಲೂವಿಸ್​ ಅವರು ಹುದ್ದೆ ಸ್ವೀಕರಿಸಿದರು. ಡಾ. ಲೆಸ್ಲಿ ಕ್ಲಿಫರ್ಡ್​ ಡಿಸೋಜಾ ಅವರು ಪ್ರಾರ್ಥನಾ ಸಭೆ ಹಾಗೂ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. 
ಉಡುಪಿ ಧರ್ಮಪ್ರಾಂತ್ಯದ ಚಾನ್ಸಲರ್​ ವಂ. ಸ್ಟೀಫನ್​ ಡಿಸೋಜಾ, ಕಾಲೇಜ್​ ಆಫ್​ ಕನ್ಸಲ್ಟರ್ಸ್​ ಸದಸ್ಯರು, ವಂ. ಜಿತೇಶ್​ ಕ್ಯಾಸ್ಟೆಲಿನೋ ಮತ್ತು ಪ್ರೊಕ್ಯುರೇಟರ್​ ಮಾರ್ಸೆಲ್​ ಡಿಸೋಜಾ ಉಪಸ್ಥಿತರಿದ್ದರು.

ಯಾಜಕ ವೃತ್ತಿಯ ಕರೆ

ಫ್ರಾನ್ಸಿಸ್​ ಝೇವಿಯರ್​ ಲೂವಿಸ್​ ಶಿರ್ವ ಸಮೀಪದ ಪೆರ್ನಾಲ್​ ಚರ್ಚ್​ನವರಾಗಿದ್ದು ದಿ. ಜಾನ್​ ಲೂವಿಸ್​ ಮತ್ತು ತೆರೆಸಾ ಲೂವಿಸ್​ ದಂಪತಿ ಪುತ್ರರಾಗಿದ್ದಾರೆ. ಅವರಿಗೆ ಇಬ್ಬರು ಹಿರಿಯ ಸಹೋದರರು ಹಾಗೂ ಒಬ್ಬ ಕಿರಿಯ ಸಹೋದರಿ ಇದ್ದಾರೆ. ಯಾಜಕ ವೃತ್ತಿಯ ಕರೆ ಸ್ವೀಕರಿಸಿ, 1976ರ ಜೂ.30ರಂದು ಮಂಗಳೂರು ಧರ್ಮಪ್ರಾಂತ್ಯದ ಸೆಮಿನರಿ ಸೇರಿ, 1987ರ ಏ.28ರಂದು ಯಾಜಕರಾಗಿ ಅಭಿಷೇಕಗೊಂಡರು.

ವಿವಿಧೆಡೆ ಸೇವೆ

39 ವರ್ಷಗಳ ಸಮರ್ಪಿತ ಯಾಜಕ ಸೇವೆಯಲ್ಲಿ ಫ್ರಾನ್ಸಿಸ್​ ಅವರು ಧರ್ಮಪ್ರಾಂತ್ಯದ ವಿವಿಧ ಧಾರ್ಮಿಕ ಮತ್ತು ಆಡಳಿತಾತ್ಮಕ ಕ್ಷೇತ್ರಗಳಲ್ಲಿ ಶ್ಲಾಘನೀಯ ಸೇವೆ ಸಲ್ಲಿಸಿದ್ದಾರೆ. 1987ರಿಂದ 1997ರ ವರೆಗೆ ಬೀದರ್​ ಮಿಷನ್​ನಲ್ಲಿ ಮಿಷನರಿ ಧರ್ಮಗುರುಗಳಾಗಿ ಕಾರ್ಯನಿರ್ವಹಿಸಿದರು. ಬೀದರ್​, ಭಾಲ್ಕಿ, ಜಲಸಂಗಿ ಹುಮನಾಬಾದ್​ ಹಾಗೂ ಬಸವ ಕಲ್ಯಾಣ ಪ್ರದೇಶಗಳಲ್ಲಿ ಸೇವೆ ಸಲ್ಲಿಸಿದರು. ನಂತರ 1997ರಿಂದ 2004ರ ವರೆಗೆ ಮಂಗಳೂರು ಬಜಾಲ್​ನ ಹೋಲಿ ಸ್ಪಿರಿಟ್​ ಚರ್ಚ್​ನಲ್ಲಿ ಧರ್ಮಗುರುವಾಗಿ ಕಾರ್ಯನಿರ್ವಹಿಸಿದರು.

ಸಾರ್ವಜನಿಕ ಸಂಪರ್ಕಾಧಿಕಾರಿ

2004ರಿಂದ 2006ರ ವರೆಗೆ ಕೆನಾರಾ ಕಮ್ಯುನಿಕೇಷನ್​ ಸೆಂಟರ್​ ಹಾಗೂ ವೋಕೇಷನ್​ ಸರ್ವಿಸ್​ ಸೆಂಟರ್​ ನಿರ್ದೇಶಕರಾಗಿ, 2006ರಿಂದ 2008ರ ವರೆಗೆ ಸಂಡೇಶ&ಕರ್ನಾಟಕ ಪ್ರಾದೇಶಿಕ ಸಂವಹನ ಕೇಂದ್ರದ ನಿರ್ದೇಶಕರಾಗಿ ಹಾಗೂ 2004ರಿಂದ 2008ರ ವರೆಗೆ ಮಂಗಳೂರು ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕಾಧಿಕಾರಿಯಾಗಿ ಮಹತ್ವದ ಕೊಡುಗೆ ನೀಡಿದ್ದಾರೆ. 2008ರಿಂದ 2016ರ ವರೆಗೆ ಮಣಿಪಾಲದ ಕೆಸ್ಟ್​ ಚರ್ಚ್​ನಲ್ಲಿ, 2016ರಿಂದ 2022ರ ವರೆಗೆ ಮುದರಂಗಡಿ ಸೇಂಟ್​ ಫ್ರಾನ್ಸಿಸ್​ ಝೇವಿಯರ್​ ಚರ್ಚ್​ನಲ್ಲಿ ಧರ್ಮಗುರುವಾಗಿ ಸೇವೆ ಸಲ್ಲಿಸಿದರು. 2022ರಿಂದ 2026ರ ವರೆಗೆ ಕಲತ್ತೂರು ಅವರ್​ ಲೇಡಿ ಆಫ್​ ಪರ್ಪೆಚುವಲ್​ ಸೆಕ್ಯೂರ್​ ಚರ್ಚ್​ನಲ್ಲಿ ಸೇವೆ ಸಲ್ಲಿಸಿದರು.
ಇವರನ್ನು 2026ರ ಮೇ 18ರಿಂದ ಜಾರಿಗೆ ಬರುವಂತೆ ಕಲ್ಯಾಣಪುರದ ಮಿಲಾಗ್ರಿಸ್​ ಪ್ರಧಾನಾಲಯದ ರೆಕ್ಟರ್​ ಹಾಗೂ ಧರ್ಮಗುರುವಾಗಿ ಹಾಗೂ ಕಲ್ಯಾಣಪುರ ವಲಯ ಪ್ರಧಾನ ಧರ್ಮಗುರುವಾಗಿ ಕೂಡ ನೇಮಕ ಮಾಡಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net