ನಾಲ್ವರು ಕುಖ್ಯಾತ ಅಂತಾರಾಜ್ಯ ಕಳ್ಳರ ಬಂಧನ

 ಅಬ್ದುಲ್ ಸಾಯಿಲ್ ಜೆ, ಮೊಹಮ್ಮದ್ ಆಶಿಕ್,  ಮೊಹಮ್ಮದ್ ಸಿರಾಜ್, ಶಕ್ತಿವೇಲು, ಓಮ್ನಿ ಕಾರು, ಕೆಟಿಎಂ ಬೈಕ್
ಅಬ್ದುಲ್ ಸಾಯಿಲ್ ಜೆ, ಮೊಹಮ್ಮದ್ ಆಶಿಕ್, ಮೊಹಮ್ಮದ್ ಸಿರಾಜ್, ಶಕ್ತಿವೇಲು, ಓಮ್ನಿ ಕಾರು, ಕೆಟಿಎಂ ಬೈಕ್
Published on

ಪುತ್ತೂರು ಗ್ರಾಮಾಂತರ: ಎರಡು ತಿಂಗಳ ಹಿಂದೆ ಮಾಡ್ನೂರು ಗ್ರಾಮದ ಕಾವು ಹಾಲಿನ ಸೊಸೈಟಿ ಬಳಿ ಮಾರುತಿ ಓಮ್ನಿ ಕಾರು ಕಳವು ಪ್ರಕರಣಕ್ಕೆ ಸಂಬಂಧಿಸಿ ಸಂಪ್ಯ ಠಾಣೆ ಪೊಲೀಸರು ನಾಲ್ವರು ಕುಖ್ಯಾತ ಅಂತಾರಾಜ್ಯ ಕಳ್ಳರನ್ನು ಬಂಧಿಸಿದ್ದಾರೆ.

ಕಾಸರಗೋಡು ನಿವಾಸಿಗಳಾದ ಅಬ್ದುಲ್ ಸಾಯಿಲ್ ಜೆ.(25), ಮೊಹಮ್ಮದ್ ಆಸೀಕ್(25), ಮೊಹಮ್ಮದ್ ಸಿರಾಜ್(28) ಹಾಗೂ ತಮಿಳುನಾಡಿನ ಕರೂರು ನಿವಾಸಿ ಶಕ್ತಿವೇಲು ಜಿ.(24) ಬಂಧಿತರು. ಆರೋಪಿಗಳನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನ ವಿಧಿಸಿದೆ.

ಪ್ರಕರಣದ ವಿವರ

ಒಳಮೊಗ್ರು ಗ್ರಾಮದ ಕುಂಬ್ರದಲ್ಲಿ ಬಾವಿ ರಿಂಗ್ ತಯಾರಿಕಾ ಘಟಕದ ಮಾಲೀಕ, ಕೇರಳ ಮೂಲದ ಪ್ರಮೋದ್ ಎಸ್. ಎಂಬುವರ ಓಮ್ನಿ ಕಾರನ್ನು ಚಾಲಕ ಬಶೀರ್ ಕೆಲಸದ ನಿಮಿತ್ತ ಜೂ.19ರಂದು ತೆಗೆದುಕೊಂಡು ಹೋಗಿದ್ದನು. ಕಾವು ಹಾಲಿನ ಸೊಸೈಟಿ ಬಳಿ ನಿಲ್ಲಿಸಿ ಕೀಯನ್ನು ಸೀಟಿನ ಮೇಲಿನ ಸನ್‌ಶೇಡ್‌ನ ಒಳಗಿಟ್ಟು ಹೋಗಿದ್ದನು. ಮರುದಿನ ಬೆಳಗ್ಗೆ ಕಾರು ಕಳವಾಗಿತ್ತು. ಈ ಕುರಿತು ಕಾರಿನ ಮಾಲೀಕ ಪ್ರಮೋದ್ ನೀಡಿದ ದೂರಿನಂತೆ ಸಂಪ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪೊಲೀಸರು ಆರೋಪಿಗಳಿಂದ 2.50 ಲಕ್ಷ ರೂ. ಮೌಲ್ಯದ ಓಮ್ನಿ ಕಾರು ಹಾಗೂ ಕಳ್ಳತನಕ್ಕೆ ಉಪಯೋಗಿಸಿದ ಕೆಟಿಎಂ ಬೈಕ್ ವಶಪಡಿಸಿಕೊಂಡಿದ್ದಾರೆ. ಕಳವು ಮಾಡಿದ ಕಾರನ್ನು ಆರೋಪಿಗಳು ಕೇರಳಕ್ಕೆ ಕೊಂಡೊಯ್ದು ಬಳಿಕ ತಮಿಳುನಾಡಿಗೆ ಮಾರಾಟ ಮಾಡಿ ಅಲ್ಲಿ ಆಂಬುಲೆನ್ಸ್ ಆಗಿ ಪರಿವರ್ತಿಸಿರುವುದು ವಿಚಾರಣೆಯಿಂದ ತಿಳಿದು ಬಂದಿದೆ. ಆರೋಪಿಗಳ ಮೇಲೆ ಬದಿಯಡ್ಕ, ಕಾಸರಗೋಡಿನ ವಿದ್ಯಾನಗರ ಠಾಣೆಗಳಲ್ಲಿ ಈಗಾಗಲೇ ಕಳ್ಳತನ ಪ್ರಕರಣ ದಾಖಲಾಗಿರುವ ಮಾಹಿತಿ ಲಭಿಸಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net