

ಉಡುಪಿ: ಬಾರ್ಕೂರು ಬಿಲ್ಲವ ಸೇವಾ ಸಂಘ (ರಿ.)ದ ಮಹಾಸಭೆಯಲ್ಲಿ ಚರ್ಚಿಸಿದಂತೆ ಹಾಗೂ ಸಂದ ಸದಸ್ಯರ ಒಪ್ಪಿಗೆ ಇಲ್ಲದೆ ಬಾಬು ಶಿವ ಪೂಜಾರಿ ಎಂಬವರು ಕಟ್ಟಡ ಕಟ್ಟುವ ವಿಚಾರದಲ್ಲಿ ವಂಚಿಸಿದ್ದಾರೆ. 50ಕ್ಕೂ ಅಧಿಕ ಜನರ ನಕಲಿ ಸಹಿ ಬಳಿಸಿ, ಅವರ ಭಾವಚಿತ್ರ ಅಳವಡಿಸಿ ಸುಳ್ಳು ದಾಖಲೆ ಸೃಷ್ಟಿಸಿದ್ದಾರೆ. ಈ ವಿಚಾರವಾಗಿ ದೂರು ನೀಡಿದರೂ ಪೊಲೀಸರು ಪ್ರಕರಣ ದಾಖಲಿಸಿಕೊಳ್ಳುತ್ತಿಲ್ಲ ಎಂದು ಮಾಹಿತಿ ಹಕ್ಕು ಕಾರ್ಯಕರ್ತ ಶಂಕರ ಶಾಂತಿ ಆರೋಪಿಸಿದರು.
ಉಡುಪಿಯ ಪತ್ರಿಕಾ ಭವನದಲ್ಲಿ ಸಂಘದ ಕೆಲ ಸದಸ್ಯರು ಹಾಗೂ ಬಿಲ್ಲವ ಸಮುದಾಯದ ಬಾಂಧವರ ಪರವಾಗಿ ಗುರುವಾರ (ಅ.29) ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸೂಕ್ತ ತನಿಖೆ ನಡೆಸಿ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದರು.
ಕುಟುಂಬದ ಅಧಿಕಾರಕ್ಕೆ ಯತ್ನ
ಆಗಸ್ಟ್ 8ರಂದು ಬಾರ್ಕೂರು ಬಿಲ್ಲವ ಸೇವಾ ಸಂಘದ ಮಹಾಸಭೆ ನಡೆದು ಅನೇಕ ವಿಷಯ ಚರ್ಚೆ ಆಗಿದೆ. ಈ ಸಂದರ್ಭದಲ್ಲಿ ಬಾಬು ಪೂಜಾರಿ ಅವರು 80 ಲಕ್ಷ ರೂ. ವೆಚ್ಚದಲ್ಲಿ ಸಂಘಕ್ಕೆ ಗ್ರಂಥಾಲಯ ಕಟ್ಟಡ ಕಟ್ಟಿಕೊಡುವುದಾಗಿ ತಿಳಿಸಿ ಅನುಮೋದನೆಗೆ ಸಭೆಯಲ್ಲಿ ಇಟ್ಟಿದ್ದರು. ಅಲ್ಲದೆ, 50 ವರ್ಷಗಳ ಕಾಲ ಈ ಕಟ್ಟಡದ ಅಧಿಕಾರವು ಅವರ ಕುಟುಂಬದವರದ್ದೇ ಆಗಿರಲಿದ್ದು, ಇದನ್ನು ಪ್ರಶ್ನಿಸುವ ಅಧಿಕಾರ ಸಮುದಾಯದವರಿಗೆ ಅಥವಾ ಬೇರೆ ಯಾರಿಗೂ ಇರುವುದಿಲ್ಲ ಎಂಬ ಷರತ್ತು ಹಾಕಿದ್ದಾರೆ. ಇದನ್ನು ಸಂಘದ ಯಾವ ಸದಸ್ಯರೂ ಸಹ ಒಪ್ಪಿಕೊಂಡಿಲ್ಲ ಎಂದು ತಿಳಿಸಿದರು.
ಸಂಘದ ಚಟುವಟಿಕೆಗೆ ತೊಡಕು
ಇನ್ನೋರ್ವ ಮಾಹಿತಿ ಹಕ್ಕು ಕಾರ್ಯಕರ್ತ ವಿಜಯ ಪೂಜಾರಿ ಮಾತನಾಡಿ, ಬಾಬು ಪೂಜಾರಿ ಅವರು ಸಂಘದ ಮುಂಭಾಗದಲ್ಲಿರುವ ಮಂದಿರದ ಮುಂದೆ 2,400 ಚದರ್ ಅಡಿಯ ಕಟ್ಟಡ ನಿರ್ಮಿಸಿದರೆ ಮಂದಿರ ಕಾಣದಾಗುತ್ತದೆ. ಅಲ್ಲದೆ, ಸಂಘದ ಸಭೆ, ಸಮಾರಂಭ, ಪಾರ್ಕಿಂಗ್ ಹಾಗೂ ಇನ್ನಿತರ ಕಾರ್ಯಚಟುವಟಿಕೆಗಳಿಗೆ ತೊಂದರೆಯಾಗುತ್ತದೆ. ಅಲ್ಲದೆ, ಬಾಬು ಅವರು ಕಟ್ಟಡದ ವಿಚಾರವಾಗಿ ವಿಧಿಸಿರುವ ಷರತ್ತನು ಯಾವ ಸದಸ್ಯರೂ ಒಪ್ಪಿರಲಿಲ್ಲ. ಅಲ್ಲದೆ, ಸಂಘದ ಅಧ್ಯಕ್ಷರ ಸ್ಥಾನಕ್ಕೆ ಹಲವರು ಉಮೇದುದಾರರು ಇದ್ದುದರಿಂದ ಆ ಸಭೆಯಲ್ಲಿ ಗದ್ದಲ ನಡೆದಿತ್ತು. ಹೀಗಾಗಿ ಸಂಘದ ಅಧ್ಯಕ್ಷ ಸವೋರ್ತ್ತಮ ಪೂಜಾರಿ, ಗಣೇಶ ಪೂಜಾರಿ ಅವರು ಚುನಾವಣೆಯ ಮೂಲಕವೇ ಆಡಳಿತ ಮಂಡಳಿ ಆಯ್ಕೆ ಮಾಡಲಾಗುವುದು ಎಂದು ತಿಳಿಸಿ ಸಭೆಯಿಂದ ಹೊರನಡೆದಿದ್ದರು ಎಂದು ತಿಳಿಸಿದರು.
ಯಾವ ಸದ್ಯಸರ ಒಪ್ಪಿಗೆ ಇಲ್ಲದ್ದನ್ನು ತಿಳಿದ ಹಾಗೂ ನಕಲಿ ದಾಖಲೆ ಸೃಷ್ಟಿಸಿದ್ದು ಈಗ ಎಲ್ಲರಿಗೂ ತಿಳಿದಿದ್ದರಿಂದ ಬಾಬು ಅವರು ಡಿಎಆರ್ ಅವರಲ್ಲಿ ಆಡಳಿತ ಮಂಡಳಿಯನ್ನು ಬರಕಾಸ್ತು ಮಾಡುವಂತೆ ಒತ್ತಾಯಿಸಿದ್ದಾಗಿ ತಿಳಿದುಬಂದಿದೆ. ಸಂಘದ ಹಿತದೃಷ್ಟಿಯಿಂದ ಸೂಕ್ತ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಸದಸ್ಯ ಸುಬ್ರಹ್ಮಣ್ಯ, ಮಹಿಳಾ ಬಳಗದ ಮಾಜಿ ಅಧ್ಯಕ್ಷೆ ಜ್ಯೋತಿ ಪೂಜಾರಿ, ಸಂಘದ ಮಾಜಿ ಕಾರ್ಯದರ್ಶಿ ಗೌರಿ ವಿ. ಪೂಜಾರಿ, ಉದ್ಯಮಿ ರಕ್ಷಿತ ಪೂಜಾರಿ ಇದ್ದರು.