

ಉಡುಪಿ: ಜಿಲ್ಲೆಯಲ್ಲಿ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಕುಸುಮ್-ಸಿ ಅನುಷ್ಠಾನಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳು ವಿನಾಕಾರಣ ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ. ಇದರಿಂದಾಗಿ ಸುಮಾರು 22 ಕೋಟಿ ರೂ. ವೆಚ್ಚದ ಕಾಮಗಾರಿಗೆ ಹಿನ್ನಡೆಯಾಗಿದೆ. ಜಿಲ್ಲೆಯ ರೈತರಿಗೂ ಯೋಜನೆಯ ಪ್ರಯೋಜನ ಸಕಾಲದಲ್ಲಿ ದೊರೆಯದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಸಿಎಂ ಡಿ.ಕೆ. ಶಿವಕುಮಾರ್ ಅವರಿಗೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ಲಿಖಿತ ದೂರು ನೀಡಿದ್ದಾರೆ.
ಉಡುಪಿಯ ಉಚ್ಚಿಲದಲ್ಲಿ ಮಹಿಳಾ ದಸರಾ (ಅ.15) ಉದ್ಘಾಟನೆಗೆ ಆಗಮಿಸಿದ್ದ ವೇಳೆ ಸಿಎಂ ಡಿಕೆಶಿ ಅವರೊಂದಿಗೆ ಈ ಯೊಜನೆಯ ಕುರಿತು ಚರ್ಚೆ ನಡೆಸಿ, ಕೂಡಲೇ ಮರಗಳ ತೆರವು ಪ್ರಕ್ರಿಯೆಗೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡುವಂತೆ ಒತ್ತಾಯಿಸಿದರು.
ಅನುದಾನ ವಾಪಸ್ ಸಾಧ್ಯತೆ
ಬೈಂದೂರು ತಾಲೂಕಿನ ಕಿರಿಮಂಜೇಶ್ವರದಲ್ಲಿ 13 ಎಕರೆ, ಬ್ರಹ್ಮಾವರ ತಾಲೂಕಿನ ಕಾವಡಿಯಲ್ಲಿ 7.5 ಎಕರೆ ಹಾಗೂ ಕಾಪು ತಾಲೂಕಿನ ಬೆಳ್ಳೆ ಗ್ರಾಮದಲ್ಲಿ 10 ಎಕರೆ ಜಾಗವನ್ನು ಸೌರ ವಿದ್ಯುತ್ ಘಟಕ ಸ್ಥಾಪನೆಗಾಗಿ ಜಾಗ ಗುರುತಿಸಲಾಗಿದೆ. ಆದರೆ, ಈ ಸ್ಥಳಗಳಲ್ಲಿರುವ ಮರಗಳ ತೆರವು ಕಾರ್ಯಕ್ಕೆ ಸಬಂಧಿಸಿದಂತೆ ಅರಣ್ಯ ಇಲಾಖೆಯ ಪ್ರಕ್ರಿಯೆ ವಿಳಂಬವಾಗುತ್ತಿದೆ. ಅದರಿಂದ ಕೇಂದ್ರ ಸರ್ಕಾರದ ಅನುದಾನವೂ ವಾಪಾಸ್ ಹೋಗುವ ಹಂತದಲ್ಲಿದೆ ಎಂದು ತಿಳಿಸಿದರು.
ಆದೇಶಕ್ಕಿಲ್ಲ ಸ್ಪಂದನೆ
ಜು.14ರಂದು ಕುಂದಾಪುರ ಶಾಸಕ ಕಿರಣಕುಮಾರ ಕೊಡ್ಗಿ ಅವರೊಂದಿಗೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ ಅವರನ್ನು ವಿಧಾನಸೌಧದಲ್ಲಿ ಖುದ್ದು ಭೇಟಿಯಾಗಿ ಚರ್ಚಿಸಿದ್ದೆವು. ಅವರು ಅರಣ್ಯಾಧಿಕಾರಿಗಳಿಗೆ ಸ್ವತ: ನಿರ್ದೇಶನ ನೀಡಿ, ಸಮಸ್ಯೆ ಪರಿಹಾರ ಮಾಡುವಂತೆ ಸಮಹೆ ನೀಡಿದ್ದರು. ರಾಜ್ಯ ಅರಣ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹಾಗೂ ಸಂಬಂಧಪಟ್ಟ ಹಿರಿಯ ಅಧಿಕಾರಿಗಳನ್ನೂ ಭೇಟಿಯಾಗಿ ಅಡೆತಡೆ ನಿವಾರಿಸುವಂತೆ ಮನವಿ ಮಾಡಲಾಗಿತ್ತು. ಅಲ್ಲದೆ, ಜಿಲ್ಲಾಧಿಕಾರಿ ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳೊಂದಿಗೆ 5ಕ್ಕೂ ಹೆಚ್ಚು ಬಾರಿ ಸಭೆ ನಡೆಸಿ ಸಮಸ್ಯೆ ಪರಿಹಾರಕ್ಕೆ ಪ್ರಯತ್ನಿಸಿದ್ದೆ. ಜಿಲ್ಲಾಧಿಕಾರಿಯ ಆದೇಶಕ್ಕೂ ಸಹ ಅರಣ್ಯ ಇಲಾಖೆ ಅಧಿಕಾರಿಗಳು ಸ್ಪಂದಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕಳೆದ ತಿಂಗಳು 19ರಂದು ಕಸ್ತೂರಿ ರಂಗನ್ ವರದಿಯ ವಿಚಾರವಾಗಿ ಹೆಬ್ರಿಗೆ ಬಂದಿದ್ದ ಸಂದರ್ಭದಲ್ಲಿಯೂ ತಮಗೆ ಮನವಿ ಸಲ್ಲಿಸಿದ್ದೆ. ಹೆಬ್ರಿಯಲ್ಲಿ ತಾವು ಹಾಗೂ ಅರಣ್ಯ ಸಚಿವ ರಾಮಲಿಂಗಾ ರೆಡ್ಡಿ ಅವರು ನೀಡಿದ ಆದೇಶವನ್ನೂ ಸಹ ಅರಣ್ಯಾಧಿಕಾರಿಗಳು ಅನುಷ್ಠಾನ ಮಾಡುತ್ತಿಲ್ಲ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಿ, ಮರಗಳ ತೆರವು ಸೇರಿದಂತೆ ಅಗತ್ಯ ಪ್ರಕ್ರಿಯೆ ತ್ವರಿತ ಪೂರ್ಣಗೊಳಿಸಿ, ಉಡುಪಿ ಜಿಲ್ಲೆಯಲ್ಲಿ ಕುಸುಮ್-ಸಿ ಯೋಜನೆ ಶೀಘ್ರ ಅನುಷ್ಠಾನವಾಗಲು ಕ್ರಮಕೈಗೊಳ್ಳಬೇಕು. ಆಡಳಿತಾತ್ಮಕ ವಿಳಂಬದಿಂದ ಕೇಂದ್ರ ಸರ್ಕಾರದ ಯೋಜನೆಗೆ ಮತ್ತಷ್ಟು ಹಿನ್ನಡೆಯಾಗದಂತೆ ಇನ್ನಾದರೂ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಲಿಖಿತ ದೂರು ನೀಡಿದರು.