ಗಿಡ ವಿತರಣೆಗೆ ಅರಣ್ಯ ಇಲಾಖೆ ಸಜ್ಜು

 ಹೆಬ್ರಿಯ ಮಡಾಮಕ್ಕಿ ನರ್ಸರಿಯಲ್ಲಿ ಸಿದ್ಧವಾಗಿರುವ ಸಸಿಗಳು.
ಹೆಬ್ರಿಯ ಮಡಾಮಕ್ಕಿ ನರ್ಸರಿಯಲ್ಲಿ ಸಿದ್ಧವಾಗಿರುವ ಸಸಿಗಳು.
Published on
ನರೇಂದ್ರ ಎಸ್.ಮರಸಣಿಗೆ ಹೆಬ್ರಿ
ಮುಂಗಾರು ಆರಂಭವಾಗುತ್ತಿದ್ದಂತೆ ಅರಣ್ಯ ಇಲಾಖೆಯ ಕುಂದಾಪುರ ಅರಣ್ಯ ವಿಭಾಗದ 8 ವಲಯಗಳ ವತಿಯಿಂದ 50 ಸಾವಿರ ಸಸಿಗಳು ವನಮಹೋತ್ಸವದ ದಿನ ರೈತರಿಗೆ ವಿತರಿಸಲು ತಯಾರಾಗಿವೆ.
ಹೆಬ್ರಿ, ಬೈಂದೂರು, ಕುಂದಾಪುರ, ಶಂಕರನಾರಾಯಣ, ಉಡುಪಿ, ಕಾರ್ಕಳ, ಮೂಡುಬಿದಿರೆ, ವೇಣೂರು ವಲಯಗಳ ವತಿಯಿಂದ ಎಲ್ಲ ಕಡೆಯಲ್ಲಿ 6,250 ಗಿಡಗಳು ಸಿದ್ಧವಾಗಿವೆ. ಮಾವು, ಮಹಾಗನಿ, ನೇರಳೆ, ಬಾದಾಮಿ, ಹಲಸು, ಬೇವು, ರಕ್ತ ಚಂದನ, ರಾಮ ಪತ್ರೆ, ಸಂಪಿಗೆ, ಶ್ರೀಗಂಧ ಜಾತಿಯ ಮರಗಳು ರೈತರಿಗೆ ಲಭ್ಯವಿವೆ.

ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆ

ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆಯಲ್ಲಿ ರೈತರಿಗೆ 8*12 ಅಳತೆಯ ಸಸ್ಯಗಳನ್ನು 6 ರೂ., 6*9 ಅಳತೆಯ ಸಸ್ಯಗಳನ್ನು 3 ರೂ.ನಲ್ಲಿ ರಿಯಾಯಿತಿ ದರದಲ್ಲಿ ಸರ್ಕಾರ ರೈತರಿಗೆ ಹಂಚಿಕೆ ಮಾಡುತ್ತದೆ. ಸಮರ್ಪಕವಾಗಿ ಅದರ ನಿರ್ವಹಣೆ ಮಾಡಿದಲ್ಲಿ ಮೊದಲ ವರ್ಷ 35, ಎರಡನೇ ವರ್ಷಕ್ಕೆ 40, ಮೂರನೇ ವರ್ಷಕ್ಕೆ 50 ರೂ.ಗಳೊಂದಿಗೆ ಒಟ್ಟು ಒಂದು ಸಸಿಗೆ 125 ಪ್ರೋತ್ಸಾಹ ಧನ ಸಿಗುತ್ತದೆ. ಆಸಕ್ತರು ಸೂಕ್ತ ದಾಖಲೆಗಳೊಂದಿಗೆ ಅರಣ್ಯ ಇಲಾಖೆಯನ್ನು ಸಂಪರ್ಕಿಸಬಹುದು.

ಹಣ್ಣಿನ ಗಿಡಗಳು ಲಭ್ಯ

ಸಾರ್ವಜನಿಕರಿಗೆ ಹಾಗೂ ಕಾಡು ಪ್ರಾಣಗಳಿಗೆ ಆಹಾರವಾಗುವಂತಹ 30 ವಿಧದ ಸಸಿಗಳನ್ನು ತಯಾರಿ ಮಾಡಲಾಗಿದೆ. ಗಿಡಗಳಿಗೆ ಸಮರ್ಪಕವಾಗಿ ಮಣ್ಣು, ಗೊಬ್ಬರ, ಮರಳು ಬಳಸಿ ವಿವಿಧ ಬ್ಯಾಗ್‌ಗಳಲ್ಲಿ ತಯಾರಿಸಲಾಗಿದೆ ಎಂದು ಉಪ ವಲಯ ಅರಣ್ಯ ಅಧಿಕಾರಿ ಹೇಮಾ ತಿಳಿಸಿದ್ದಾರೆ.

ಕಾಡಿನಲ್ಲಿ 10 ಲಕ್ಷ ಸಸಿಗಳ ನಾಟಿ


ಕಾಡಿನಲ್ಲಿ ಪ್ರಾಣಿಗಳಿಗೆ ಆಹಾರವಾಗುವ ಹಣ್ಣುಗಳು ಸೇರಿದಂತೆ 10 ಲಕ್ಷ ಸಸಿಗಳು ನಾಟಿಗೆ ಸಿದ್ಧವಾಗಿವೆ. ಪ್ರಮುಖವಾಗಿ ತಾಳೆ, ಹೊಳೆಮಕ್ಕಿ, ದಾಲ್ಚೀನಿ, ಹೆಬ್ಬಲಸು, ದೂಪ, ಮಹಾಗನಿ, ನೆಲ್ಲಿ, ದೀಟಿ, ರೆಂಜಾಲ್, ತೇಗ, ಮತ್ತಿ, ಗುಳ್ಳುಮಾವು, ಬೋಗಿ ಸೇರಿದಂತೆ ಇನ್ನಿತರ ಸಸಿಗಳು ನಾಟಿಯಾಗುತ್ತವೆ.

ಸಾರ್ವಜನಿಕರು ಸರ್ಕಾರದ ಯೋಜನೆಗಳನ್ನು ಬಳಸಿಕೊಳ್ಳುವುದರೊಂದಿಗೆ, ಅರಣ್ಯ ಮತ್ತು ಪರಿಸರದ ಏಳಿಗೆಗೆ ಕೈಜೋಡಿಸಬೇಕು.

— ಸಿದ್ದೇಶ್ವರ ಕುಂಬಾರ್ ವಲಯ ಅರಣ್ಯಾಧಿಕಾರಿ, ಹೆಬ್ರಿ

ನಮ್ಮ ಅರಣ್ಯ ವಿಭಾಗದ ವತಿಯಿಂದ 50 ಸಾವಿರ ಸಸಿಗಳನ್ನು ರೈತರ ಬೇಡಿಕೆಗೆ ಅನುಗುಣವಾಗಿ ತಯಾರು ಮಾಡಲಾಗಿದೆ. ಸರ್ಕಾರದಿಂದ ಸಿಗುವ ಪ್ರೋತ್ಸಾಹ ಧನ ಸದುಪಯೋಗಪಡಿಸಿಕೊಳ್ಳಿ. ಅರಣ್ಯ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಬೇಕು.

— ರುಥ್ರೆನ್ ಉಪ ಅರಣ್ಯ ಸಂರಕ್ಷಣಾಧಿಕಾರಿ(ಡಿ.ಸಿ.ಎಫ್), ಕುಂದಾಪುರ ಅರಣ್ಯ ವಿಭಾಗ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net