ಘಾಟಿ ವಿಸ್ತರಣೆಗೆ ಅರಣ್ಯ ಇಲಾಖೆ ಅಡ್ಡಿ ಇಲ್ಲ

ನೀರೆ ಕೃಷ್ಣ ಶೆಟ್ಟಿ
ನೀರೆ ಕೃಷ್ಣ ಶೆಟ್ಟಿ
Published on
ಹೆಬ್ರಿ: ಉಡುಪಿ- ಹೆಬ್ರಿ- ತೀರ್ಥಹಳ್ಳಿ ರಾಷ್ಟ್ರೀಯ ಹೆದ್ದಾರಿ 169 ಎ ಆಗುಂಬೆ ಘಾಟಿ ವಿಸ್ತರಣೆಗೆ ಅರಣ್ಯ ಇಲಾಖೆಯಿಂದ ಯಾವುದೇ ಕಾನೂನು ತೊಡಕುಗಳು ಇಲ್ಲ ಎಂದು ಕೆಪಿಸಿಸಿ ಸದಸ್ಯ ನೀರೆ ಕೃಷ್ಣ ಶೆಟ್ಟಿ ತಿಳಿಸಿದರು.
ಹೆಬ್ರಿಗೆ ಆಗಮಿಸಿದ್ದ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಅವರಿಗೆ ಗುರುವಾರ ಈ ಬಗ್ಗೆ ಮನವರಿಕೆ ಮಾಡಿ ಮಾತನಾಡಿದರು.
ಅಂದು ಬ್ರಿಟಿಷ್ ಸರ್ಕಾರವೇ ಮುಂದಾಲೋಚನೆಯಿಂದ ಆಗುಂಬೆ ಘಾಟಿಯ ವಿಸ್ತರಣೆಗಾಗಿ 40 ಮೀಟರ್ ಜಾಗವನ್ನು ಮೀಸಲಿರಿಸಿದ್ದಾರೆ. ಆ ಎಲ್ಲ ದಾಖಲೆಗಳನ್ನು ಕೇಂದ್ರದ ಯುಪಿಎ ಸರ್ಕಾರದಲ್ಲಿ ಭೂಸಾರಿಗೆ ಮತ್ತು ಹೆದ್ದಾರಿ ಸಚಿವರಾಗಿದ್ದ ಆಸ್ಕರ್ ಫರ್ನಾಂಡಿಸ್ ಮತ್ತು ಅರಣ್ಯ ಮತ್ತು ಪರಿಸರ ಸಚಿವರಾಗಿದ್ದ ಡಾ.ಎಂ.ವೀರಪ್ಪ ಮೊಯ್ಲಿಯವರು ಪರಿಶೀಲಿಸಿ ಉಡುಪಿ- ಹೆಬ್ರಿ- ತೀರ್ಥಹಳ್ಳಿ ರಾಷ್ಟ್ರೀಯ ಹೆದ್ದಾರಿ 169 ಎಗೆ ಸಾಕಷ್ಟು ಅನುದಾನ ಮೀಸಲಿಟ್ಟು ಮಂಜೂರಾತಿ ನೀಡಿದ್ದರು. ಹಾಗಾಗಿ ಆಗುಂಬೆ ಘಾಟಿ ವಿಸ್ತರಿಸಲು ಯಾವುದೇ ತೊಡಕುಗಳಿಲ್ಲ. ರಾಷ್ಟ್ರೀಯ ಹೆದ್ದಾರಿ ಮಂಜೂರಾಗಿ 13 ವರ್ಷಗಳು ಕಳೆದರೂ ಹೆದ್ದಾರಿ ಇಲಾಖೆ ಆಗುಂಬೆ ಘಾಟಿ ವಿಸ್ತರಿಸುವ ಕಾರ್ಯಕ್ಕೆ ಮನಸ್ಸು ಮಾಡುತ್ತಿಲ್ಲ ಎಂದರು.
ಆಗುಂಬೆ ಘಾಟಿಯನ್ನು 4 ಪಥದ ರಸ್ತೆಯಾಗಿ ಮಾಡಲು ಮುಕ್ತ ಅವಕಾಶವಿದೆ. ಸುರಂಗ ಮಾರ್ಗದ ಅವಶ್ಯಕತೆಯೂ ಇಲ್ಲ. ಅಂದು ಸಂಸದರಾಗಿದ್ದ ಜಯಪ್ರಕಾಶ ಹೆಗ್ಡೆ, ಶಾಸಕರಾಗಿದ್ದ ಹೆಬ್ರಿ ಗೋಪಾಲ ಭಂಡಾರಿ ಮತ್ತು ತೀರ್ಥಹಳ್ಳಿಯ ಕಿಮ್ಮನೆ ರತ್ನಾಕರ್ ಅವರೊಂದಿಗೆ ಚರ್ಚಿಸಿ ಆಸ್ಕರ್ ಫರ್ನಾಂಡಿಸ್ ಮತ್ತು ಡಾ.ಎಂ.ವೀರಪ್ಪ ಮೊಯ್ಲಿ ಅಂತಿಮಗೊಳಿಸಿದ್ದರು. ಆದ್ದರಿಂದ ಶೀಘ್ರವಾಗಿ ಆಗುಂಬೆ ಘಾಟಿಯನ್ನು ವಿಸ್ತರಿಸಿ 4 ಪಥದ ರಸ್ತೆಯನ್ನಾಗಿ ಮಾಡಲಿ ಎಂದು ಒತ್ತಾಯಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net