ಚರಿತ್ರೆ ಸರಿಪಡಿಸಿಕೊಳ್ಳಲು ನಾವೆಲ್ಲ ಒಗ್ಗಟ್ಟಾಗೋಣ

ಉಡುಪಿಯಲ್ಲಿ ಆಯೋಜಿಸಿದ್ದ ದೇಶಾಭಿಮಾನಿ ಸಮಾವೇಶವನ್ನು ಮಾವಳ್ಳಿ ಶಂಕರ್ ಉದ್ಘಾಟಿಸಿದರು. ಮಹಮ್ಮದ್ ಮೌಲಾ, ಪ್ರೊ. ಕೆ. ಫಣಿರಾಜ್, ಸುಂದರ್ ಮಾಸ್ಟರ್, ಡಾ.ಎಚ್.ಎಸ್. ಶೆಟ್ಟಿ, ಟಿ. ಮಂಜುನಾಥ್ ಗಿಳಿಯಾರು, ಕೆ.ಎಲ್. ಅಶೋಕ್ ಇತರರಿದ್ದರು.
ಉಡುಪಿಯಲ್ಲಿ ಆಯೋಜಿಸಿದ್ದ ದೇಶಾಭಿಮಾನಿ ಸಮಾವೇಶವನ್ನು ಮಾವಳ್ಳಿ ಶಂಕರ್ ಉದ್ಘಾಟಿಸಿದರು. ಮಹಮ್ಮದ್ ಮೌಲಾ, ಪ್ರೊ. ಕೆ. ಫಣಿರಾಜ್, ಸುಂದರ್ ಮಾಸ್ಟರ್, ಡಾ.ಎಚ್.ಎಸ್. ಶೆಟ್ಟಿ, ಟಿ. ಮಂಜುನಾಥ್ ಗಿಳಿಯಾರು, ಕೆ.ಎಲ್. ಅಶೋಕ್ ಇತರರಿದ್ದರು.
Published on

ದಲಿತ ಸಮುದಾಯಕ್ಕೆ ಮಾವಳ್ಳಿ ಶಂಕರ್ ಕರೆ

* ದೇಶಾಭಿಮಾನಿ ಸಮಾವೇಶ ಉದ್ಘಾಟನೆ

ಉಡುಪಿ: ದೈವದ ಹೆಸರಿನಲ್ಲಿ ನಮ್ಮ ಜನ ಮಾರುಹೋಗುತ್ತಾರೆ. ಅದನ್ನೇ ನೆಪವಾಗಿಟ್ಟುಕೊಂಡು ಧರ್ಮ, ಜಾತಿ ಹೆಸರಿನಲ್ಲಿ ಸಮುದಾಯ ಒಡೆಯುವ ಹುನ್ನಾರ ಈ ದೇಶದಲ್ಲಿ ಈ ಹಿಂದೆಯೂ ಇತ್ತು. ಇಂದಿಗೂ ಮುಂದುವರಿಯುತ್ತಿದೆ. ಅದನ್ನು ವಿರೋಧಿಸುವ ಗುಣ ತೋರ್ಪಡಿಸಿದ್ದ ನಮ್ಮ ಅನೇಕ ಹಿರಿಯರ ಹೆಸರನ್ನು ಇತಿಹಾಸದಿಂದ ತೆಗೆದುಹಾಕುವ ಕಾರ್ಯ ಕಳೆದ 14 ವರ್ಷದಿಂದ ನಿರಂತರವಾಗಿ ನಡೆದಿದೆ. ದೇಶದ ಎಲ್ಲರಿಗೂ ಸಮಾನ ಹಕ್ಕು ಲಭಿಸಲು ಡಾ.ಅಂಬೇಡ್ಕರರು ಸಂವಿಧಾನ ರಚಿಸಿದ್ದಾರೆ. ಆದರೆ, ಕೆಲವು  ಅವಿವೇಕಿಗಳು ಬಿ.ಎನ್. ರಾವ್ ಅವರು ಸಂವಿಧಾನ ಬರೆದಿದ್ದಾರೆ ಎಂದು ಹೇಳುತ್ತ ಮನು ಸಂಸ್ಕೃತಿಯನ್ನು ವಿಜ್ರಂಭಿಸಲು ಹೊರಟಿದ್ದಾರೆ. ಹೀಗಾಗಿ ನಾವೆಲ್ಲರೂ ಇಂದು ಒಗ್ಗಟ್ಟಾಗಿ ನಮ್ಮ ಚರಿತ್ರೆಯನ್ನು ಸರಿಪಡಿಸಿಕೊಳ್ಳಬೇಕಿದೆ. ಸಂವಿಧಾನದ ಉಳಿವಿಗೆ ನಾವೆಲ್ಲ ಗಟ್ಟಿಯಾಗೋಣ, ಸಮ ಸಮಾಜವನ್ನು ಕಟ್ಟೋಣ ಎಂದು ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದದ ರಾಜ್ಯ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್ ಕರೆ ನೀಡಿದರು.
ಉಡುಪಿಯ ಕ್ರಿಶ್ಚಿಯನ್ ಮೈದಾನದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ.) ಅಂಬೇಡ್ಕರ್ ವಾದ ಉಡುಪಿ ಜಿಲ್ಲೆ ಮತ್ತು ಸಹಭಾಗಿ ಸಂಘಟನೆಗಳ ಆಶ್ರಯದಲ್ಲಿ ಭಾನುವಾರ ಸಂಜೆ ಆಯೋಜಿಸಿದ್ದ ಸಂವಿಧಾನ ಶಿಲ್ಪಿ, ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ 135ನೇ ಜನ್ಮದಿನದ ನಿಮಿತ್ತ ಗುರುವಪ್ಪ ಮಾಸ್ತರ್ ವೇದಿಕೆಯಲ್ಲಿ ಹಮ್ಮಿಕೊಂಡಿದ್ದ 'ದೇಶಾಭಿಮಾನಿ ಸಮಾವೇಶ' (ನನ್ನ ಭಾರತ-ನನ್ನ ಹೆಮ್ಮೆ) ಸಾಂಸ್ಕೃತಿಕ ಜಾಥಾ ಮತ್ತು ಬಹಿರಂಗ ಸಭೆ ಉದ್ಘಾಟಿಸಿ ಮಾತನಾಡಿದರು.

'ಭೀಮ ಸಾರಥಿ' ಪ್ರಶಸ್ತಿ ಪ್ರದಾನ

ದಲಿತ ಸಮುದಾಯದವರಿಗೆ ನೂರಕ್ಕೂ ಅಧಿಕ ಮನೆಗಳನ್ನು ನಿರ್ಮಿಸಿಕೊಟ್ಟ ಸಮಾಜ ಸೇವಕ, ಎಂಎಂಸಿಎಲ್ ಸಂಸ್ಥೆಯ ಸ್ಥಾಪಕ ಡಾ. ಎಚ್.ಎಸ್. ಶೆಟ್ಟಿ ಅವರಿಗೆ 'ಭೀಮ ಸಾರಥಿ' ಪ್ರಶಸ್ತಿ ಪ್ರದಾನ ಮಾಡಲಾಯಿತು. ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಘಟನಾ ಸಂಚಾಲಕ ಸುಂದರ್ ಮಾಸ್ತರ್ ಪ್ರಶಸ್ತಿ ಪ್ರದಾನ ಮಾಡಿದರು. ಪ್ರಶಸ್ತಿಯೊಂದಿಗೆ ನೀಡಿದ 25,000 ಚೆಕ್ಕನ್ನು ಸಂಘಟನೆಗೆ ಮರಳಿಸಿದ ಡಾ. ಶೆಟ್ಟಿ, ಇದನ್ನು ದಲಿತ ಸಮುದಾಯದ ಪ್ರತಿಭಾನ್ವಿತ ವಿದ್ಯಾರ್ಥಿ ಶಿಕ್ಷಣಕ್ಕಾಗಿ ನೀಡುವಂತೆ ಸಲಹೆ ನೀಡಿದರು.
 ಪ್ರಗತಿಪರ ಹೋರಾಟಗಾರ ಕೆ.ಎಲ್. ಅಶೋಕ್ ವಿಶೇಷಾಂಕ ಬಿಡುಗಡೆ ಮಾಡಿದರು. ಭಾರತೀಯ ಕ್ರೈಸ್ತ ಒಕ್ಕೂಟದ ಪ್ರಶಾಂತ ಜತ್ತನ್ ಅವರನ್ನು ವಿಶೇಷ ಪ್ರತಿಭೆಯ ಹಿನ್ನೆಲೆಯಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಪಿಯುಸಿಯಲ್ಲಿ ಹೆಚ್ಚು ಅಂಕಗಳಿಸಿದ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಸಹಬಾಳ್ವೆ ಉಡುಪಿಯ ಸಂಚಾಲಕ ಪ್ರೊ.ಕೆ. ಫಣಿರಾಜ್ ಅಧ್ಯಕ್ಷತೆ ವಹಿಸಿದ್ದರು.
ದಲಿತ ಸಂಘರ್ಷ ಸಮಿತಿಯ ಹಿರಿಯ ಹೋರಾಟಗಾರರಾದ ಕರುಣಾಕರ ಮಾಸ್ತರ್, ವಿಠ್ಠಲದಾಸ್ ಬನ್ನಂಜೆ,  ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟದ ಇರ್ಶಾದ ನೇಜಾರು, ಮೈಸೂರು ವಿಭಾಗೀಯ ಸಂಘಟನಾ ಸಂಚಾಲಕ ಶ್ಯಾಮರಾಜ ಬಿರ್ತಿ, ಕೆಥೋಲಿಕ್ ಸಭಾ ಉಡುಪಿ ಪ್ರಾಂತ್ಯದ ಮೆಲ್ವಿನ್ ಆರಾನ್ಹಾ, ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟ ಕರ್ನಾಟಕ-ಕೇರಳ ಸಮಿತಿಯ ಅಧ್ಯಕ್ಷೆ ಸುಶೀಲಾ ನಾಡ, ಅಲ್ಪಸಂಖ್ಯಾತರ ವೇದಿಕೆ ಉಡುಪಿಯ ಚಾರ್ಲ್ಸ್ ಆಂಬ್ಲರ್, ಮಾನವ ಬಂಧುತ್ವ ವೇದಿಕೆಯ ಶಾಂತಿ ಪಿರೇರಾ, ರಾಜ್ಯ ಮಹಿಳಾ ಒಕ್ಕೂಟ ಸಂಘಟನಾ ಸಂಚಾಲಕಿ ವಸಂತಿ ಶಿವಾನಂದ, ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಮಹಿಳಾ ಒಕ್ಕೂಟದ ಗೀತಾ ಸುರೇಶ್, ಕರ್ನಾಟಕ ಮಹಿಳಾ ದೌರ್ಜನ್ಯ ವಿರೋಧಿ ವೇದಿಕೆಯ ವೇರೋನಿಕಾ ಕರ್ನೆಲಿಯೋ, ಸಿಐಟಿಯು ಉಡುಪಿಯ ಸುರೇಶ್ ಕಲ್ಲಾಗಾರ, ದಲಿತ ಹಕ್ಕುಗಳ ಸಮಿತಿಯ ಸಂಜೀವ ಬಳ್ಕೂರು, ಶ್ರೀ ನಾರಾಯಣ ಗುರು ಯುವ ವೇದಿಕೆ ಉಡುಪಿಯ ಸದಾಶಿವ ಕಟ್ಟೆಗುಡ್ಡೆ, ಸೋಲಿಡಾರಿಟಿ ಉಡುಪಿಯ ಅಯಾನ್ ಶೇಖ್,  ಸಹಬಾಳ್ವೆಯ ಯಾಸಿನ್ ಮಲ್ಪೆ, ಎಪಿಸಿಆರ್ ನ ರಾಮಕೃಷ್ಣ ಹೇರ್ಳೆ, ಹುಸೇನ್ ಕೋಡಿಬೆಂಗ್ರೆ, ಎಸ್ ಐಒ ಉಡುಪಿಯ ಅಫ್ವಾನ್ ಉಪಸ್ಥಿತರಿದ್ದರು.
ಗಾಯಕ ರವಿ ಬನ್ನಾಡಿ ಹೋರಾಟದ ಗೀತೆ ಹಾಡಿದರು. ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟದ ಅಧ್ಯಕ್ಷ ಮಹಮ್ಮದ್ ಮೌಲಾ ಸ್ವಾಗತಿಸಿದರು. ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಪ್ರಧಾನ ಸಂಚಾಲಕ ಟಿ.ಮಂಜುನಾಥ್ ಗಿಳಿಯಾರು ಪ್ರಾಸ್ತಾವಿಕವಾಗಿ ಮಾತನಾಡಿದರು. ನಾಗೇಶ್ ಕುಮಾರ್ ಉದ್ಯಾವರ ಅವರು ಸಂವಿಧಾನದ ಪೀಠಿಕೆ ಬೋಧಿಸಿದರು. ಪ್ರಶಾಂತ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ಸಾಂಸ್ಕೃತಿಕ ಜಾಥಾಕ್ಕೆ ಚಾಲನೆ

ಸಭಾ ಕಾರ್ಯಕ್ರಮಕ್ಕೂ ಮೊದಲು ಉಡುಪಿಯ ಬೋರ್ಡ್ ಹೈಸ್ಕೂಲ್ ಬಳಿ ಸಾಂಸ್ಕೃತಿಕ ಜಾಥಾ ಮತ್ತು ವಿವಿಧ ಕಲಾ ತಂಡಗಳ ಮೆರವಣಿಗೆಗೆ ಎ ಎಸ್ ಪಿ ಸುಧಾಕರ್ ನಾಯಕ್ ಚಾಲನೆ ನೀಡಿದರು. ಡಾ.ಅಂಬೇಡ್ಕರ್, ಮಹಾತ್ಮ ಗಾಂಧಿ, ಕುದ್ಮಾಲ್ ರಂಗ ರಾವ್, ಅಬು ಕಲಾಂ ಅಜಾದ್, ಮದರ್ ಥೆರೇಸಾ,  ನಾರಾಯಣಗುರು ಹಾಗೂ ಗೌತಮ ಬುದ್ಧನ ಬೃಹತ್ ಚಿತ್ರವಿರುವ ವಾಹನಗಳು, ವಿವಿಧ ಕಲಾತಂಡಗಳು ಮೆರವಣಿಗೆಯ ಸೊಬಗು ಹೆಚ್ಚಿಸಿದವು. ಜೈ ಭೀಮ್ ಘೋಷಣೆ ಮೊಳಗಿದವು.

ಉಡುಪಿ ಪರ್ಯಾಯ, ಅಮಿತ್ ಷಾ ವಿರುದ್ಧ ಟೀಕೆ

ಉದ್ಘಾಟನಾ ಭಾಷಣ ಮಾಡಿದ ಮಾವಳ್ಳಿ ಶಂಕರ್, ಉಡುಪಿ ಪರ್ಯಾಯ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಷಾ ವಿರುದ್ಧ ಟೀಕಾ ಪ್ರಹಾರ ನಡೆಸಿದರು. ಉಡುಪಿಯ ಪರ್ಯಾಯಕ್ಕೆ ಬರುವ ಪಾದಗಳಿಗಿಂತ ಹೆಚ್ಚು ಶ್ರೇಷ್ಠ ಪಾದಗಳು ಇಂದು ಉಡುಪಿಗೆ ಬಂದಿವೆ. ಉಡುಪಿಯಲ್ಲಿ ಪರ್ಯಾಯ ಯಾಕೆ ಆಗುತ್ತದೆಯೋ? ಸರ್ಕಾರ ಅದಕ್ಕೆ ಎಷ್ಟು ಕೋಟಿ ಹಣ ನೀಡುತ್ತದೆಯೋ? ಅಥವಾ ಆ ಪರ್ಯಾಯದಿಂದ ಜನರಿಗಾಗುವ ಅನುಕೂಲಗಳೇನು? ಅಧಿಕಾರ ಹಸ್ತಾಂತರ ಯಾರಿಗೆ ಆಗುತ್ತೆ ? ಯಾತಕ್ಕಾಗಿ ಆಗುತ್ತೆ ಎಂಬುದನ್ನು ನಂತರ ಯೋಚಿಸೋಣ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಈ ಜನ ಅಂಬೇಡ್ಕರ್ ಅಂಬೇಡ್ಕರ್ ಅಂಬೇಡ್ಕರ್ ಎಂದು ಭಜಿಸುವ ಬದಲು ದೇವರ ನಾಮ ಬಜಿಸಿದ್ದರೆ ಸ್ವರ್ಗಕ್ಕೆ ಹೋಗುತ್ತಿದ್ದರು ಎಂದು ಹೇಳಿದ್ದಾರೆ. ನಾನು ಅಮಿತ್ ಷಾ ಅವರಿಗೆ ಹೇಳುತ್ತೇನೆ, ನೀವೇ ದೇವರ ಹೆಸರನ್ನು ಬಗೆಬಗೆಯಾಗಿ ಸ್ಮರಿಸಿ ಅತಿ ಶೀಘ್ರವಾಗಿ ಸ್ವರ್ಗಕ್ಕೆ ಹೋಗಿ.  ನಂತರವಾದರೂ ಈ ದೇಶಕ್ಕೆ ವಿಮೋಚನೆ ಸಿಗಬಹುದು ಎಂದು ಆಕ್ರೋಶ ವ್ಯಕ್ತಪಡಿಸಿದರು. ಮಹಿಳಾ ಮೀಸಲಾತಿಯನ್ನು ನಾವು ವಿರೋಧಿಸುವುದಿಲ್ಲ. ಆದರೆ, ಅದರಲ್ಲಿ ಎಸ್ಸಿ-ಎಸ್ಟಿ ಮಹಿಳೆಯರಿಗೂ ಮೀಸಲಾತಿ ನೀಡಬೇಕೆಂದು ಆಗ್ರಹಿಸುತ್ತೇವೆ ಎಂದರು.
"

ನಮ್ಮ ಧರ್ಮದಲ್ಲಿ ಅಸ್ಪೃಶ್ಯತೆ ಮತ್ತು ಜಾತಿ ವ್ಯವಸ್ಥೆಯು ಅತ್ಯಂತ ದೊಡ್ಡ ಕಾಯಿಲೆಯಾಗಿದೆ. ನಮ್ಮ ಸಮಾಜದಲ್ಲಿ ಕ್ಯಾನ್ಸರ್ ಇದೆ. ಆದರೆ, ಸಂಪೂರ್ಣ ದೇಹದಲ್ಲಿ ಇಲ್ಲ. ದಲಿತರನ್ನು ನೆಚ್ಚಿಕೊಂಡವರು, ಒಪ್ಪಿಕೊಂಡವರು, ಅಪ್ಪಿಕೊಂಡವರು ಎಲ್ಲ ಜಾತಿ-ಧರ್ಮದಲ್ಲೂ ಇದ್ದಾರೆ. ಅವರನ್ನು ಸಹ ನಾವು ನೆನಪಿಸಿಕೊಳ್ಳಬೇಕು. ಆಗ ಮಾತ್ರ ನಮ್ಮ ಹೋರಾಟ ಸುಲಭ, ಸುಲಲಿತ ಆಗಲು ಸಾಧ್ಯ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net