ಹಕ್ಕೊತ್ತಾಯಕ್ಕೆ ರಸ್ತೆಗಿಳಿದ ಅನ್ನದಾತರು

 ಮೂಡುಬಿದಿರೆಯಲ್ಲಿ ಹಸು, ಹಾಲಿನೊಂದಿಗೆ ರೈತರು ಜಾಗೃತಿ ಜಾಥಾ, ಪ್ರತಿಭಟನೆ ನಡೆಸಿದರು. ರೈತ ಹೋರಾಟಗಾರ ಶಾಂತಿ ಪ್ರಸಾದ್ ಹೆಗ್ಡೆ, ರೈತ ಮುಖಂಡ ವಲೇರಿಯನ್ ಕುಟಿನ್ಹೊ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಭಂಡಾರಿ ಮೊದಲಾದವರಿದ್ದರು.
ಮೂಡುಬಿದಿರೆಯಲ್ಲಿ ಹಸು, ಹಾಲಿನೊಂದಿಗೆ ರೈತರು ಜಾಗೃತಿ ಜಾಥಾ, ಪ್ರತಿಭಟನೆ ನಡೆಸಿದರು. ರೈತ ಹೋರಾಟಗಾರ ಶಾಂತಿ ಪ್ರಸಾದ್ ಹೆಗ್ಡೆ, ರೈತ ಮುಖಂಡ ವಲೇರಿಯನ್ ಕುಟಿನ್ಹೊ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಭಂಡಾರಿ ಮೊದಲಾದವರಿದ್ದರು.
Published on
ವಿಜಯವಾಣಿ ಸುದ್ದಿಜಾಲ ಮೂಡುಬಿದಿರೆ
ರೈತರ ಹಾಗೂ ಹೈನುಗಾರರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸುವಂತೆ ಆಗ್ರಹಿಸಿ ಭಾರತೀಯ ಕಿಸಾನ್ ಸಂಘದ ನೇತೃತ್ವದಲ್ಲಿ ಮೂಡುಬಿದಿರೆಯಲ್ಲಿ ಬೃಹತ್ ರೈತ ಪ್ರತಿಭಟನಾ ಜಾಥಾ ನಡೆಯಿತು.
ಹಸು ಹಾಗೂ ಹಾಲಿನೊಂದಿಗೆ ಸಾಗಿದ ವಿನೂತನ ಪ್ರತಿಭಟನೆಯಲ್ಲಿ ನೂರಾರು ರೈತರು ಭಾಗವಹಿಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಶ್ಯಾಮಿಲಿ ಎನ್‌ಕ್ಲೇವ್ ಕಟ್ಟಡದ ಬಳಿಯಿಂದ ತಹಸೀಲ್ದಾರ್ ಕಚೇರಿಯವರೆಗೆ ಪ್ರಮುಖ ರಸ್ತೆಗಳಲ್ಲಿ ಜಾಥಾ ಸಾಗಿತು.
ಕೂಲಿಯಾಳುಗಳ ಸಮಸ್ಯೆಯಿಂದ ಹೈನುಗಾರಿಕೆ ಕಷ್ಟದ ವೃತ್ತಿಯಾಗಿದ್ದು, ನಷ್ಟದ ಹಾದಿಯಲ್ಲಿರುವುದರಿಂದ ಹಾಲಿನ ದರವನ್ನು ಪ್ರತಿ ಲೀಟರ್‌ಗೆ 100 ರೂ.ಗೆ ಹೆಚ್ಚಿಸಬೇಕು ಮತ್ತು ಸರ್ಕಾರ 15 ರೂ. ಪ್ರೋತ್ಸಾಹಧನ ನೀಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು. ಬಾಕಿಯಿರುವ ಪ್ರೋತ್ಸಾಹಧನವನ್ನು ಕೂಡಲೇ ಬಿಡುಗಡೆಗೊಳಿಸಬೇಕು ಹಾಗೂ ಕುಮ್ಕಿ ಭೂಮಿ ಹಕ್ಕನ್ನು ನೀಡಬೇಕು ಎಂದು ಆಗ್ರಹಿಸಿ ತಹಸೀಲ್ದಾರ್ ಮುಖಾಂತರ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.
ರೈತ ಹೋರಾಟಗಾರ ಶಾಂತಿಪ್ರಸಾದ್ ಹೆಗ್ಡೆ ಮಾತನಾಡಿ, ಮೂಡುಬಿದಿರೆಯಲ್ಲಿ ಕುಮ್ಕಿ ಹಕ್ಕುಗಳ ಬಗ್ಗೆ ಹಾಗೂ ನಾಡಕಚೇರಿಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ವಿರುದ್ಧ ಆಗಸ್ಟ್‌ನಲ್ಲಿ ಗ್ರಾಮ ಪಂಚಾಯಿತಿ ಮುಂದೆ ಸಾವಿರಾರು ರೈತರನ್ನು ಸೇರಿಸಿ ಬೃಹತ್ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ರೈತ ಮುಖಂಡ ವಲೇರಿಯನ್ ಕುಟಿನ್ಹೊ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಭಂಡಾರಿ, ತಾಲೂಕು ಕಾರ್ಯದರ್ಶಿ ವಸಂತ್ ಭಟ್ ಪಯ್ಯಡಿ, ಕಿಸಾನ್ ಪ್ರಮುಖರಾದ ಜಾಯ್ಲಸ್ ಡಿಸೋಜ, ಮಾರ್ಪಾಡಿ ಗ್ರಾಮ ಸಮಿತಿ ಅಧ್ಯಕ್ಷ ರಾಧಾಕೃಷ್ಣ ಶೆಟ್ಟಿ, ಕಡಂದಲೆ ಸಂಘದ ಪ್ರಧಾನ ಕಾರ್ಯದರ್ಶಿ ವೆಂಕಟೇಶ್ ಕೋಟ್ಯಾನ್, ತೆಂಕಮಿಜಾರು ಸಂಘ ಪ್ರಮುಖರಾದ ನೇಮಿರಾಜ್ ಶೆಟ್ಟಿ ಉಪಸ್ಥಿತರಿದ್ದರು. ಅಶ್ವಥ್ ಪಣಪಿಲ ಕಾರ್ಯಕ್ರಮ ನಿರೂಪಿಸಿದರು. ಪ್ರತಿಭಟನೆಯಲ್ಲಿ ಭಾರತೀಯ ಕಿಸಾನ್ ಸಂಘದ ಪದಾಧಿಕಾರಿಗಳು, ರೈತ ಮುಖಂಡರು, ಹೈನುಗಾರರು ಹಾಗೂ ವಿವಿಧ ಗ್ರಾಮಗಳ ರೈತರು ಭಾಗವಹಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net