

ಉಡುಪಿ: ಜಾನಪದ ಹಿರಿಯ ವಿದ್ವಾಂಸ ಡಾ. ಕೆ.ಚಿನ್ನಪ್ಪ ಗೌಡ ಅವರನ್ನು 2026ನೇ ಸಾಲಿನ ಕೇಶವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಪ್ರಶಸ್ತಿಯು 25 ಸಾವಿರ ರೂ. ನಗದು ಹಾಗೂ ಪ್ರಶಸ್ತಿ ಪತ್ರ ಒಳಗೊಂಡಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಕೂಡೂರು ಎಂಬಲ್ಲಿ ಜನಿಸಿದ ಚಿನ್ನಪ್ಪ, ಮದ್ರಾಸ್ ವಿವಿಯಲ್ಲಿ ಎಂಎ ಪದವಿ ಹಾಗೂ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಡಾ. ಬಿ.ಎ. ವಿವೇಕ ರೈ ಮಾರ್ಗದರ್ಶನದಲ್ಲಿ 'ಭೂತಾರಾಧನೆ ಜಾನಪದೀಯ ಅಧ್ಯಯನ' ವಿಷಯದಲ್ಲಿ ಪಿಎಚ್.ಡಿ ಗಳಿಸಿದ್ದಾರೆ.
ಉಜಿರೆಯ ಎಸ್ಡಿಎಂ ಪದವಿ ಕಾಲೇಜ್ನಲ್ಲಿ ವೃತ್ತಿ ಜೀವನ ಆರಂಭಿಸಿ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಪ್ರಾಧ್ಯಾಪಕರಾಗಿ, ವಿಭಾಗ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದಾರೆ. ಅಲ್ಲದೆ, ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಕುಲಸಚಿವರಾಗಿ, ಕಲಾನಿಕಾಯದ ಡೀನ್ ಆಗಿ, ರಿಜಿಸ್ಟ್ರಾರ್ ಆಗಿ ಸೇವೆ ಸಲ್ಲಿಸಿದ್ದಾರೆ. ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಹಾವೇರಿಯಲ್ಲಿ ಉಪಕುಲಪತಿಗಳಾಗಿ ಕಾರ್ಯನಿರ್ವಹಿಸಿದ್ದಾರೆ.
ಕನ್ನಡ ಸಾಹಿತ್ಯ, ತುಳುವ ಮೌಖಿಕ ಕಥನ ಮತ್ತು ಸಂಸ್ಕೃತಿ ಹಾಗೂ ಜಾನಪದ ಅಧ್ಯಯನದ ಕುರಿತು ವಿಶೇಷ ಪರಿಣತಿ ಹೊಂದಿದ್ದು ಇವರ ಸಾಧನೆ ಪರಿಗಣಿಸಿ ಪ್ರಶಸ್ತಿ ನೀಡಲಾಗುತ್ತಿದೆ. ನವೆಂಬರ್ ತಿಂಗಳಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ ಎಂದು ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರದ ಆಡಳಿತಾಧಿಕಾರಿ ಡಾ. ಬಿ.ಜಗದೀಶ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.