ಗರಿಗೆದರಿದ ಮಟ್ಟುಗುಳ್ಳ ನಾಟಿ

 ಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಟ್ಟು ಗ್ರಾಮದಲ್ಲಿ ಬೆಳೆಯಲಾಗುವ ಮಟ್ಟುಗುಳ್ಳ ಕೃಷಿ.
ಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಟ್ಟು ಗ್ರಾಮದಲ್ಲಿ ಬೆಳೆಯಲಾಗುವ ಮಟ್ಟುಗುಳ್ಳ ಕೃಷಿ.
Published on
ಹರಿಪ್ರಸಾದ್ ನಂದಳಿಕೆ ಕಾರ್ಕಳ
ಉಡುಪಿ ಜಿಲ್ಲೆಯ ಕೃಷಿ ಪರಂಪರೆಯಲ್ಲಿ ವಿಶಿಷ್ಟ ಸ್ಥಾನ ಹಾಗೂ ಅನನ್ಯ ಇತಿಹಾಸ ಹೊಂದಿರುವ, ಭೌಗೋಳಿಕ ಸೂಚ್ಯಂಕ(ಜಿಐ) ಮಾನ್ಯತೆ ಪಡೆದ ಮಟ್ಟುಗುಳ್ಳ ಬೆಳೆಯಲು ಮಟ್ಟು ಗ್ರಾಮದ ಕೃಷಿಕರು ಮತ್ತೆ ಸಿದ್ಧತೆ ಆರಂಭಿಸಿದ್ದಾರೆ.
ಮುಂಗಾರು ಕೃಷಿ ಚಟುವಟಿಕೆಗಳು ಮುಕ್ತಾಯದ ಹಂತ ತಲುಪುತ್ತಿದ್ದಂತೆ, ಸೆಪ್ಟೆಂಬರ್ ಮೊದಲ ವಾರದಿಂದಲೇ ಈ ಪ್ರದೇಶದಲ್ಲಿ ಮಟ್ಟುಗುಳ್ಳ ನಾಟಿ ಕಾರ್ಯ ಗರಿಗೆದರಿದೆ. ಜಿಲ್ಲೆಯ ಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಟ್ಟು ಗ್ರಾಮದಲ್ಲಿ ಬೆಳೆಯಲಾಗುವ ಮಟ್ಟುಗುಳ್ಳ ಬೆಳೆಸಲು ಮಟ್ಟು ಗ್ರಾಮದ ಕೃಷಿಕರು ಮಳೆಬಿಸಿಲಿನ ನಡುವೆ ಮತ್ತೆ ಸಜ್ಜಾಗಿದ್ದಾರೆ.

ಐತಿಹಾಸಿಕ ಹಿನ್ನೆಲೆ

ಮಟ್ಟು ಗ್ರಾಮ ಮತ್ತು ಅದರ ಸುತ್ತಮುತ್ತಲಿನ ಸಮುದ್ರ ತೀರದ ಮರಳು ಮಿಶ್ರಿತ ಫಲವತ್ತಾದ ಮಣ್ಣಿನಲ್ಲಿ ಬೆಳೆಯುವ ಈ ತರಕಾರಿಗೆ ಸಾಟಿಯಿಲ್ಲದ ರುಚಿ ಹಾಗೂ ಪರಿಮಳವಿದೆ. ಸಮೀಪದ ನದಿ ಮತ್ತು ಸಮುದ್ರದ ಪರಿಸರ, ವಿಶಿಷ್ಟ ಮಣ್ಣಿನ ಗುಣ ಹಾಗೂ ಸ್ಥಳೀಯ ಕೃಷಿ ಪದ್ಧತಿ ಸಂಯೋಜನೆಯೇ ಇದರ ವಿಶೇಷತೆಗೆ ಕಾರಣ. ಮಟ್ಟು ಗ್ರಾಮವನ್ನು ಹೊರತುಪಡಿಸಿ ಬೇರೆಡೆ ಇದೇ ತಳಿಯನ್ನು ಬೆಳೆದರೂ ಮೂಲ ಸ್ವಾದ ಪಡೆಯಲು ಸಾಧ್ಯವಿಲ್ಲ ಎಂಬುದು ರೈತರ ಅನುಭವದ ಮಾತು.

ಕೃಷಿ ಪರಂಪರೆಯಲ್ಲಿ ವಿಶೇಷ ಸ್ಥಾನ

ಉಡುಪಿ ಜಿಲ್ಲೆಯ ಕೃಷಿ ಪರಂಪರೆಯಲ್ಲಿ ವಿಶೇಷ ಸ್ಥಾನ ಪಡೆದಿರುವ ಮಟ್ಟುಗುಳ್ಳ ಮಟ್ಟು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೆಳೆಯುವ ವಿಶಿಷ್ಟ ಬದನೆಕಾಯಿ ತಳಿಯಾಗಿದೆ. ತನ್ನದೇ ಆದ ಆಕಾರ, ಬಣ್ಣ, ರುಚಿ ಮತ್ತು ಗುಣಮಟ್ಟದಿಂದಾಗಿ ಮಟ್ಟುಗುಳ್ಳ ಜನಪ್ರಿಯತೆಗೆ ಪಾತ್ರವಾಗಿದೆ. ಈ ವಿಶಿಷ್ಟ ತರಕಾರಿಗೆ ಭೌಗೋಳಿಕ ಸೂಚ್ಯಂಕ(ಜಿಐ) ಮಾನ್ಯತೆಯೂ ದೊರಕಿದ್ದು, ಮಟ್ಟುಗುಳ್ಳ ಪ್ರಸ್ತುತ ಕರಾವಳಿಯ ಬಹುಬೇಡಿಕೆಯ ತರಕಾರಿಯಾಗಿ ಹೊರಹೊಮ್ಮಿದೆ.

ಮೊದಲ ಫಸಲು ಕೃಷ್ಣನಿಗೆ

ಉಡುಪಿ ಶ್ರೀಕೃಷ್ಣ ಮಠದ ಪರ್ಯಾಯೋತ್ಸವದೊಂದಿಗೆ ಮಟ್ಟುಗುಳ್ಳಕ್ಕಿರುವ ಸಂಬಂಧ ಅವಿನಾಭಾವ. ವಾದಿರಾಜ ಸ್ವಾಮೀಜಿಗಳ ಆಶೀರ್ವಾದದಿಂದ ಈ ಬೀಜ ಕೃಷಿಕರಿಗೆ ದೊರೆತಿರುವುದು ಐತಿಹಾಸಿಕ ಹಿನ್ನೆಲೆ. ಇಲ್ಲಿನ ರೈತರು ಪ್ರಥಮ ಫಸಲನ್ನು ಶ್ರೀಕೃಷ್ಣನಿಗೆ ಸಮರ್ಪಿಸುವ ಸಂಪ್ರದಾಯ ಇಂದಿಗೂ ಮುಂದುವರಿಸಿಕೊಂಡು ಬಂದಿದ್ದಾರೆ. ಮಠದ ಅನ್ನಸಂತರ್ಪಣೆಯಲ್ಲಿ ಮಟ್ಟುಗುಳ್ಳದಿಂದ ತಯಾರಿಸಿದ ಅಡುಗೆಗಳಿಗೆ ಅಗ್ರಸ್ಥಾನವಿದೆ. ಭತ್ತದ ಕೃಷಿ ಮುಗಿದ ಬಳಿಕ ಮಟ್ಟು ಗ್ರಾಮದ ಅನೇಕ ರೈತರು ನೂರಾರು ಎಕರೆ ಪ್ರದೇಶದಲ್ಲಿ ಬಿತ್ತನೆಗೆ ಸಿದ್ಧತೆ ನಡೆಸುತ್ತಿದ್ದು, ಮುಂದಿನ ಡಿಸೆಂಬರ್, ಜನವರಿ ಅವಧಿಯಲ್ಲಿ ಗುಳ್ಳ ಬೆಳೆಯ ಕೊಯ್ಲು ಆರಂಭವಾಗುವ ನಿರೀಕ್ಷೆಯಿದೆ. ಮಾರುಕಟ್ಟೆಯಲ್ಲಿ ಮಟ್ಟುಗುಳ್ಳಕ್ಕೆ ಉತ್ತಮ ಬೇಡಿಕೆ ಇರುವುದರಿಂದ ಇದು ಕೇವಲ ಸಾಂಪ್ರದಾಯಿಕ ತರಕಾರಿಯಾಗಿ ಉಳಿಯದೆ ಪ್ರಮುಖ ವಾಣಿಜ್ಯ ಬೆಳೆಯಾಗಿ ರೂಪುಗೊಂಡಿದೆ.

ಆಧುನಿಕ ತಂತ್ರಜ್ಞಾನ, ಸುಧಾರಿತ ಕೃಷಿ ಪದ್ಧತಿ

ಕಾಲಕ್ಕೆ ತಕ್ಕಂತೆ ಕೃಷಿಕರು ಸಾಂಪ್ರದಾಯಿಕ ಪದ್ಧತಿ ಜತೆಗೆ ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುತ್ತಿರುವುದು ಈ ಬಾರಿಯ ವಿಶೇಷ. ಆಧುನಿಕ ಮಲ್ಚಿಂಗ್ ತಂತ್ರಜ್ಞಾನ ಬಳಕೆಯಿಂದ ಕಳೆ ನಿಯಂತ್ರಣ ಸುಲಭವಾಗಿದ್ದು, ತೇವಾಂಶ ಕಾಪಾಡಿಕೊಳ್ಳಲು ಹಾಗೂ ಉತ್ಪಾದನೆ ಹೆಚ್ಚಿಸಲು ಸಹಕಾರಿಯಾಗಿದೆ. ಪ್ರೋ-ಟ್ರೇ ಮೂಲಕ ಆರೋಗ್ಯಕರ ಸಸಿಗಳನ್ನು ಬೆಳೆಸಿ ನಾಟಿ ಮಾಡಲಾಗುತ್ತಿದೆ. ನೀರಿನ ಸಮರ್ಪಕ ಬಳಕೆ ಹಾಗೂ ಕಾರ್ಮಿಕರ ನಿರ್ವಹಣಾ ವೆಚ್ಚ ತಗ್ಗಿಸಲು ಸುಧಾರಿತ ನೀರಾವರಿ ಪದ್ಧತಿ ರೂಢಿಸಿಕೊಳ್ಳಲಾಗುತ್ತಿದೆ.

ಮಾರುಕಟ್ಟೆ ವ್ಯವಸ್ಥೆ, ಸಂಘಟಿತ ಪ್ರಯತ್ನ

ರೈತರು ಪ್ರತ್ಯೇಕವಾಗಿರದೆ ಗುಳ್ಳ ಬೆಳೆಗಾರರ ಸಂಘದ ಮೂಲಕ ಒಗ್ಗೂಡಿ ಕೆಲಸ ಮಾಡುತ್ತಿದ್ದಾರೆ. ಉತ್ಪನ್ನದ ಗುಣಮಟ್ಟ ಕಾಯ್ದುಕೊಳ್ಳುವುದು, ವೈಜ್ಞಾನಿಕವಾಗಿ ವಿಂಗಡಣೆ ಮಾಡುವುದು, ಪ್ಯಾಕಿಂಗ್ ಹಾಗೂ ಕ್ಯೂಆರ್ ಕೋಡ್/ಸ್ಟಿಕ್ಕರ್ ಅಳವಡಿಸಿ ಮಾರುಕಟ್ಟೆಗೆ ಕಳುಹಿಸುವ ವ್ಯವಸ್ಥೆ ಮಾಡಲಾಗಿದೆ. ಸ್ಥಳೀಯ ಮಾರುಕಟ್ಟೆಯಷ್ಟೇ ಅಲ್ಲದೆ ದೇಶೀಯ ಹಾಗೂ ವಿದೇಶಿ ಮಾರುಕಟ್ಟೆಗಳಿಗೂ ಮಟ್ಟುಗುಳ್ಳವನ್ನು ತಲುಪಿಸಲು ಸಂಘಟಿತ ಪ್ರಯತ್ನಗಳು ಮುಂದುವರಿದಿವೆ. ಮಳೆ-ಬಿಸಿಲಿನ ಹವಾಮಾನದ ನಡುವೆಯೂ ಕೃಷಿಕರ ಪರಿಶ್ರಮದಿಂದ ರೂಪುಗೊಳ್ಳುವ ಮಟ್ಟುಗುಳ್ಳ, ಈ ಬಾರಿಯೂ ಕರಾವಳಿಯ ಗ್ರಾಹಕರ ಬಾಯಲ್ಲಿ ನೀರೂರಿಸುವುದರೊಂದಿಗೆ ರೈತರ ಆರ್ಥಿಕತೆಗೆ ಭದ್ರತೆ ಒದಗಿಸಲು ಸಜ್ಜಾಗಿದೆ.
"

ಮರಳು ಮಿಶ್ರಿತ ಫಲವತ್ತಾದ ಮಣ್ಣಿನಲ್ಲಿ ಬೆಳೆಯುವ ಮಟ್ಟುಗುಳ್ಳಕ್ಕೆ ವಿಶಿಷ್ಟ ಸ್ಥಾನವಿದೆ. ನದಿ, ಸಮುದ್ರದ ಪರಿಸರ, ಮಣ್ಣಿನ ಗುಣ ಹಾಗೂ ಸ್ಥಳೀಯ ಕೃಷಿ ಪದ್ಧತಿಯ ಸಂಯೋಜನೆಯೇ ಮಟ್ಟು ಗುಳ್ಳದ ವೈಶಿಷ್ಟೃಕ್ಕೆ ಕಾರಣವಾಗಿದೆ. ಮಟ್ಟು ಗ್ರಾಮ ಹೊರತುಪಡಿಸಿ ಬೇರೆ ಪ್ರದೇಶಗಳಲ್ಲಿ ಇದೇ ತಳಿಯನ್ನು ಬೆಳೆಯಲು ಪ್ರಯತ್ನಿಸಿದರೂ ಮಟ್ಟುಗುಳ್ಳದ ಮೂಲ ಸ್ವಾದ ಮತ್ತು ಗುಣಮಟ್ಟವನ್ನು ಸಂಪೂರ್ಣವಾಗಿ ಪಡೆಯಲು ಸಾಧ್ಯವಾಗದು.

ಮಟ್ಟುಗುಳ್ಳ ರೈತರ ಸಂಘದ ಮೂಲಕ ಉತ್ಪನ್ನವನ್ನು ಸಂಘಟಿತವಾಗಿ ದೇಶೀಯ ಹಾಗೂ ವಿದೇಶಿ ಮಾರುಕಟ್ಟೆಗಳಿಗೆ ತಲುಪಿಸುವ ಪ್ರಯತ್ನಗಳು ನಡೆಯುತ್ತಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net