ಅಪಾಯದಂಚಿನಲ್ಲಿ ಮೀನುಗಾರಿಕಾ ರಸ್ತೆ

 ಹೆಜಮಾಡಿಯಲ್ಲಿ ಕಡಲ್ಕೊರೆತದಿಂದ ತೆಂಗು ಸಹಿತ ಗಾಳಿ ಮರಗಳು ಸಮುದ್ರ ಪಾಲಾಗಿವೆ.
ಹೆಜಮಾಡಿಯಲ್ಲಿ ಕಡಲ್ಕೊರೆತದಿಂದ ತೆಂಗು ಸಹಿತ ಗಾಳಿ ಮರಗಳು ಸಮುದ್ರ ಪಾಲಾಗಿವೆ.
Published on
ಪಡುಬಿದ್ರಿ: ಕಳೆದೆರಡು ದಿನಗಳಿಂದ ಸಮುದ್ರ ಪ್ರಕ್ಷುಬ್ಧಗೊಂಡ ಪರಿಣಾಮ ಹೆಜಮಾಡಿಯಲ್ಲಿ ಕಡಲ್ಕೊರೆತ ತೀವ್ರಗೊಂಡಿದೆ. ಅಮವಾಸ್ಯೆಕರಿಯದಿಂದ ಹೆಜಮಾಡಿ ಬಂದರು ಪ್ರದೇಶ ಸಂಪರ್ಕಿಸುವ ಮುಖ್ಯ ಮೀನುಗಾರಿಕಾ ರಸ್ತೆ ಅಪಾಯದಂಚಿನಲ್ಲಿದೆ.
ಹೆಜವಾಡಿಯ ಬಹುತೇಕ ಸಮುದ್ರ ತೀರದಲ್ಲಿ ಸಮುದ್ರ ತಡೆಗೋಡೆ ನಿರ್ಮಿಸಲಾಗಿದೆ. ಆದರೆ ಸಂಪೂರ್ಣಗೊಂಡಿಲ್ಲ. ಮಧ್ಯೆ ಮಧ್ಯೆ ತಡೆಗೋಡೆ ನಿರ್ಮಿಸಿಲ್ಲ. ಇಂತಹುದೇ ಎರಡೂ ಕಡೆ ತಡೆಗೋಡೆ ಇರುವ ಮಧ್ಯೆ ಸ್ಥಳದಲ್ಲಿ ಗುರುವಾರ ಕೊರೆತ ಉಂಟಾಗಿದ್ದು, ತೆಂಗು, ಗಾಳಿ ಮರಗಳು ಸಮುದ್ರಪಾಲಾಗಿವೆ.
ಬಂದರು ಸಂಪರ್ಕಿಸುವ ರಸ್ತೆಯ ಈ ಭಾಗದಲ್ಲಿ 50 ಲಕ್ಷ ರೂ. ವೆಚ್ಚದಲ್ಲಿ ಕಾಂಕ್ರೀಟ್ ಹಾಕಲಾಗಿದ್ದು, ಕೇವಲ 4 ಮೀ. ಸಮುದ್ರದ ಅಂತರದಲ್ಲಿ ಕೊರೆತ ಮುಂದುವರಿದಿದ್ದು, ಅದೇ ಭಾಗ ಸಮುದ್ರಪಾಲಾಗುವ ಭೀತಿ ಎದುರಾಗಿದೆ. ವಿದ್ಯುತ್ ಕಂಬವೂ ಅಪಾಯದಲ್ಲಿದೆ. ತುರ್ತು ಕಾಮಗಾರಿ ನಡೆಸದಿದ್ದಲ್ಲಿ ಮೀನುಗಾರಿಕಾ ಸಂಪರ್ಕ ರಸ್ತೆ ಸಮುದ್ರ ಪಾಲಾಗುವ ಸಾಧ್ಯತೆ ಇದೆ.
ಕಾಪು ಕಂದಾಯ ನಿರೀಕ್ಷಕ ಇಜಾಜ್ ಸಾಬೀರ್, ಗ್ರಾಮ ಆಡಳಿತಾಧಿಕಾರಿ ಶ್ರೀಕಾಂತ್, ಗ್ರಾಪಂ ಮಾಜಿ ಸದಸ್ಯ ರೋಷನ್ ಕುಮಾರ್ ಭೇಟಿ ನೀಡಿ ತಹಸೀಲ್ದಾರ್ ಹಾಗೂ ಶಾಸಕರಿಗೆ ಮಾಹಿತಿ ನೀಡಿದ್ದಾರೆ. ಶಾಸಕರು ಸೂಕ್ತ ಕ್ರಮಕ್ಕೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net