

ಕುಂದಾಪುರ: ಮೀನುಗಾರಿಕೆಗೆ ತೆರಳಿದ್ದ ಮರವಂತೆ ಗ್ರಾಮದ ನಾಗರಾಜ ಖಾರ್ವಿ(40) ಎಂಬುವರು ದೋಣಿಯಿಂದ ಸಮುದ್ರಕ್ಕೆ ಬಿದ್ದು ಮೃತಪಟ್ಟಿದ್ದಾರೆ.
ಆನಂದ ಖಾರ್ವಿ ಎಂಬುವರ ದೋಣಿಯಲ್ಲಿ ಮರವಂತೆ ಬಂದರಿನಿಂದ ಬುಧವಾರ ಬೆಳಗ್ಗೆ ಮೀನುಗಾರಿಕೆಗೆ ತೆರಳಿದ್ದರು. ಬಂದರಿನಿಂದ ಸುಮಾರು 200 ಮೀ. ದೂರದಲ್ಲಿದ್ದಾಗ ಒಮ್ಮೆಲೇ ಜೋರಾಗಿ ಗಾಳಿ ಬೀಸಿದ್ದು, ದೋಣಿಯಲ್ಲಿದ್ದ ನಾಗರಾಜ ಖಾರ್ವಿ ಆಯತಪ್ಪಿ ಸಮುದ್ರಕ್ಕೆ ಬಿದ್ದಿದ್ದಾರೆ.
ಕೂಡಲೇ ದೋಣಿಯಲ್ಲಿದ್ದವರು ಅವರನ್ನು ಮೇಲಕ್ಕೆತ್ತಿ ಕುಂದಾಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದರು. ಆದರೆ ನಾಗರಾಜ ಖಾರ್ವಿ ಅದಾಗಲೇ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.