ಎಲ್​ಪಿಜಿ ಸ್ಥಗಿತ, ಮೀನಿನ ಬೆಲೆ ಕುಸಿತ!

ಮೀನಿನ ದರ ಇಳಿಕೆಯಿಂದ ಮೀನುಗಾರಿಕೆಗೆ ತೆರಳದೆ ಉಡುಪಿಯ ಮಲ್ಪೆ ಬಂದರಿನಲ್ಲಿ ಲಂಗರು ಹಾಕಿರುವ ಬೋಟ್​ಗಳು.
ಮೀನಿನ ದರ ಇಳಿಕೆಯಿಂದ ಮೀನುಗಾರಿಕೆಗೆ ತೆರಳದೆ ಉಡುಪಿಯ ಮಲ್ಪೆ ಬಂದರಿನಲ್ಲಿ ಲಂಗರು ಹಾಕಿರುವ ಬೋಟ್​ಗಳು.
Published on

* ಹೋಟೆಲ್​ ಮುಚ್ಚಿದ್ದರಿಂದ ದರ ಇಳಿಕೆ

* ಮಲ್ಪೆಯ ಮತ್ಸ್ಯೋದ್ಯಮಕ್ಕೆ ಬಿಕ್ಕಳಿಕೆ

ಪ್ರಶಾಂತ ಭಾಗ್ವತ ಉಡುಪಿ
ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಎಂಬ ನಾಣ್ಣುಡಿಯಂತೆ ಕೊಲ್ಲಿ ರಾಷ್ಟ್ರಗಳಲ್ಲಿನ ಯುದ್ಧದಿಂದಾಗಿ ಕರ್ನಾಟಕದ ಕರಾವಳಿಯ ಮತ್ಸ್ಯೋದ್ಯಮಕ್ಕೆ ಬರೆ ಎಳೆದಂತಾಗಿದೆ. ಏಷ್ಯಾದ ದೊಡ್ಡ ಬಂದರು ಖ್ಯಾತಿಯ ಮಲ್ಪೆಯಲ್ಲಿ ಮೀನು ಉದ್ಯಮ ಚಡಪಡಿಸುವಂತಾಗಿದೆ. 
ಯುದ್ಧದ ಪ್ರಭಾವದಿಂದಾಗಿ ಕಮಿರ್ಷಿಯಲ್​ ಗ್ಯಾಸ್​ ಪೂರೈಕೆ ಸ್ಥಗಿತಗೊಂಡಿದ್ದರಿಂದ ಬಹುತೇಕ ಮಾಸಾಂಹಾರಿ ಹೋಟೆಲ್​ಗಳು ಬಂದ್​ ಆಗಿವೆ. ಅಲ್ಲದೆ, ಮೀನು ರಫ್ತು ಕಾರ್ಯವೂ ನಿಂತಿದ್ದರಿಂದ ಮೀನಿನ ಬೆಲೆ ತೀವ್ರ ಕುಸಿತಗೊಂಡಿದ್ದು, ಮತ್ಸ್ಯೋದ್ಯಮ ಸಂಕಷ್ಟದಲ್ಲಿದೆ.

ಮೀನಿನ ದರ ಇಳಿಕೆ

ಮತ್ಸ್ಯೋದ್ಯಮಕ್ಕೆ 50ಕ್ಕಿಂತ ಹೆಚ್ಚು ಪ್ರತಿಶತ ಮಾಂಸಾಹಾರಿ ಹೋಟೆಲ್​ಗಳೇ ಆಸರೆಯಾಗಿವೆ. ಆದರೆ, ವಾಣಿಜ್ಯ ಸಿಲಿಂಡರ್​ಗಳ ಪೂರೈಕೆ ಸಂಪೂರ್ಣ ಸ್ಥಗಿತಗೊಂಡಿದ್ದರಿಂದ ಸಣ್ಣ-ಮಧ್ಯಮ ಪ್ರಮಾಣದ ಹೋಟೆಲ್​ಗಳು ಶೇ.65ಕ್ಕಿಂತ ಹೆಚ್ಚು ಮುಚ್ಚಲ್ಪಟ್ಟಿದೆ. ಪ್ರಮುಖ ಹೋಟೆಲ್​ಗಳೂ ಸಹ ತಮ್ಮ ಮೆನುವನ್ನೂ ಸ್ಥಗಿತ ಮಾಡಿದ್ದಾರೆ. ಹೀಗಾಗಿ ಹೋಟೆಲ್​ಗಳ ಮಾಲೀಕರು ಮೀನು ಖರೀದಿಗಾಗಿ ಮಾರುಕಟ್ಟೆಗೆ ಬರುತ್ತಿಲ್ಲ. ಇದರಿಂದಾಗಿ ಮೀನಿನ ಬೆಲೆ ಪ್ರತಿ ಕಿಲೋಗೆ 100ರಿಂದ 300 ರೂ.ಗಳಷ್ಟು ಇಳಿಕೆಯಾಗಿದ್ದು ನಿತ್ಯವೂ ಲಕ್ಷಾಂತರ ರೂ. ವಹಿವಾಟು ನಷ್ಟವಾಗುತ್ತಿದೆ.

ಮೀನುಗಾರರ ಬದುಕು ಅತಂತ್ರ

ಸದ್ಯದ ಪರಿಸ್ಥಿತಿ ಮೀನುಗಾರರ ಬದುಕನ್ನು ಅತಂತ್ರವಾಗಿಸಿದೆ. ಮೀನು ಮಾರಾಟ ಮಾಡಿಯೇ ಕುಟುಂಬ ನಿರ್ವಹಣೆ ಮಾಡುತ್ತಿರುವ ಮಹಿಳಾ ಮೀನುಗಾರರು ಕಷ್ಟ ಅನುಭವಿಸುತ್ತಿದ್ದಾರೆ. ಅನೇಕ ಹೋಟೆಲ್​ಗಳಿಗೆ ಮೀನು ಪೂರೈಸುತ್ತಿದ್ದ ಅವರಿಗೆ ವ್ಯಾಪಾರದಲ್ಲಿ ನಷ್ಟ ಆಗುತ್ತಿದೆ. ಸಮುದ್ರದಲ್ಲಿ ಪ್ರಯಾಸದಿಂದ ಮೀನು ಹಿಡಿದು ತಂದ ಮೀನುಗಾರರೂ ಬೆಲೆ ಕುಸಿತದಿಂದ ಕಂಗಾಲಾಗಿದ್ದಾರೆ. ವಿದೇಶದಲ್ಲಿನ ಯುದ್ಧದಿಂದ ಇಲ್ಲಿನ ಮೀನಗಾರರ ಬದುಕು ಅತಂತ್ರವಾಗಿದ್ದು, ಜೀವನಾಡಿಗೆ ಸವಾಲು ಎದುರಾಗಿದೆ. ಯುದ್ಧ ಯಾವಾಗ ಮುಗಿಯುತ್ತದೋ ಎಂಬ ಚಿಂತೆ ಕಾಡುತ್ತಿದೆ ಎನ್ನುತ್ತಾರೆ ಮಲ್ಪೆಯ ಮೀನುಗಾರ ಮಹಿಳೆಯರು.
"

ಮೀನುಗಾರಿಕೆಯ ವೇಳೆ ಬೋಟ್​ನಲ್ಲಿ ಸ್ಟೌವ್​ ಮೂಲಕ ಅಡುಗೆ ಮಾಡುತ್ತಿದ್ದೇವೆ. ಗ್ಯಾಸ್​ ಕೊರತೆಯಿಂದ ಮೀನುಗಾರಿಕೆಗೆ ಅಷ್ಟೊಂದು ತೊಡಕಾಗಿಲ್ಲ. ಆದರೆ, ಹಿಡಿದು ತಂದ ಮೀನುಗಳು ಹೋಟೆಲ್​ ಮುಚ್ಚಿದ್ದರಿಂದ ಸರಿಯಾಗಿ ಮಾರಾಟ ಆಗುತ್ತಿಲ್ಲ. ಮಲ್ಪೆಯಿಂದ ಕೇರಳಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಮೀನು ರಫ್ತು ಆಗುತ್ತಿತ್ತು. ಅಲ್ಲಿಯೂ ಹೋಟೆಲ್​ ಬಂದ್​ ಆಗಿದ್ದರಿಂದ ಮೀನು ಪೂರೈಕೆ ಸಂಪೂರ್ಣ ನಿಂತಿದೆ. ಯುದ್ಧ ಇನ್ನೂ ಮುಂದುವರಿದರೆ ಡೀಸೆಲ್​ಗೂ ಅಭಾವ ಆಗುವ ಸಾಧ್ಯತೆ ಇದೆ. ಡೀಸೆಲ್​ ಸಿಗದಿದ್ದರೆ ಮೀನುಗಾರಿಕೆಯೇ ಸ್ಥಗಿತಗೊಳ್ಳುತ್ತದೆ.

ಮಾರುಕಟ್ಟೆಯಲ್ಲಿ ಮೀನುಗಳ ದರಪಟ್ಟಿ

ಮೀನಿನ ಹೆಸರು                 ಹಿಂದಿನ ದರ (ಕೆಜಿ)                ಈಗಿನ ದರ (ಕೆಜಿ)
ಪಾಂಫ್ರೆಟ್​ (ಮಾಂಜಿ)         1,600                                  1,350
ಅಂಜಲ್​                         1,200                                  800
ದೊಡ್ಡ ಬಂಗುಡೆ                 300                                    160
ಚಿಕ್ಕ ಬಂಗುಡೆ                   250                                     200 
ರಾಣಿ ಮೀನು                    300                                     250
ಡಿಸ್ಕೋ ಮೀನು                 200                                    150   
ಶಿಗಡಿ                             350                                     300
"

ಮೀನಿನ ದರ ಇಳಿದಿದ್ದರಿಂದ ಅನೇಕ ಬೋಟ್​ನವರು ಕಡಲಿಗೆ ಇಳಿದಿಲ್ಲ. ಯುದ್ಧದ ಪರಿಣಾಮದಿಂದಾಗಿ ಗ್ಯಾಸ್​ನೊಂದಿಗೆ ಡೀಸೆಲ್​ ಸಮಸ್ಯೆಯೂ ಉಂಟಾಗುತ್ತಿದೆ. ಮಲ್ಪೆಯಲ್ಲಿ 4 ರಿಟೇಲ್​, 4 ಕನ್​ಸ್ಯೂಮರ್​ ಸೇರಿ ಒಟ್ಟು 8 ಡೀಸೆಲ್​ ಪಂಪ್​ಗಳಿವೆ. ಕಮಿಷನ್​ ಕಡಿಮೆ ಆಗಿದ್ದರಿಂದ 4 ಕನ್​ಸ್ಯೂಮರ್​ ಪಂಪ್​ ಭಾನುವಾರದಿಂದ ಬಂದ್​ ಆಗಿದೆ. ಈ 2 ತಿಂಗಳು ಮೀನುಗಾರಿಕೆಯ ಕೊನೆಯ ಹಂಗಾಮು. ಈ ಅವಧಿಯಲ್ಲಿ ಡೀಸೆಲ್​ ಸಿಗದಿದ್ದರೆ ಮೀನುಗಾರಿಕೆ ಅಸಾಧ್ಯ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net