ಎಲ್ಲ ಶಾಲೆಗಳಲ್ಲಿ ಪ್ರಥಮ ಚಿಕಿತ್ಸೆಯ ತರಬೇತಿ ಕಡ್ಡಾಯವಾಗಲಿ
ಉಡುಪಿಯಲ್ಲಿ ಆಯೋಜಿಸಿದ್ದ ಪ್ರಥಮ ಚಿಕಿತ್ಸಾ ತರಬೇತಿ ಶಿಬಿರವನ್ನು ಬಸ್ರೂರು ರಾಜೀವ ಶೆಟ್ಟಿ ಉದ್ಘಾಟಿಸಿದರು. ಜಯಕರ ಎಸ್. ಶೆಟ್ಟಿ, ಡಾ. ಗಾಯತ್ರಿ ಎನ್., ಡಾ. ಗಣನಾಥ ಶೆಟ್ಟಿ ಎಕ್ಕಾರು, ರಾಘವೇಂದ್ರ ಪ್ರಭು, ರಮಾದೇವಿ ಇದ್ದರು.
ಉಡುಪಿ: ಶಿಕ್ಷಕರು, ವಿದ್ಯಾರ್ಥಿಗಳು ಪ್ರಥಮ ಚಿಕಿತ್ಸೆ ಮತ್ತು ಪ್ರಕೃತಿ ವಿಕೋಪದ ತರಬೇತಿ ಪಡೆದುಕೊಂಡರೆ ಸಮಾಜಮುಖಿಯಾಗಲು ಉತ್ತಮ ಅವಕಾಶ ಲಭಿಸುತ್ತದೆ. ಹೀಗಾಗಿ ಎಲ್ಲ ಶೈಕ್ಷಣಿಕ ಸಂಸ್ಥೆಗಳಲ್ಲಿ ಸರ್ಕಾರವು ಪ್ರಥಮ ಚಿಕಿತ್ಸೆಯ ತರಬೇತಿಯನ್ನು ಕಡ್ಡಾಯ ಮಾಡಬೇಕು ಎಂದು ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ರಾಜ್ಯ ಸಭಾಪತಿ ಬಸ್ರೂರು ರಾಜೀವ ಶೆಟ್ಟಿ ಒತ್ತಾಯಿಸಿದರು.
ಉಡುಪಿಯ ಅಜ್ಜರಕಾಡುನಲ್ಲಿರುವ ಜಿಲ್ಲಾ ರೆಡ್ಕ್ರಾಸ್ ಸಭಾಂಗಣದಲ್ಲಿ ಭಾರತೀಯ ರೆಡ್ಕ್ರಾಸ್ ರಾಜ್ಯ ಘಟಕ, ಉಡುಪಿ ಜಿಲ್ಲಾ ಘಟಕ ಮತ್ತು ಮಂಗಳೂರು ವಿಶ್ವವಿದ್ಯಾನಿಲಯದ ಯುವ ರೆಡ್ ಕ್ರಾಸ್ ಘಟಕದ ವತಿಯಿಂದ ರೆಡ್ಕ್ರಾಸ್ ಅಧಿಕಾರಿಗಳು ಮತ್ತು ಸ್ವಯಂಸೇವಕರಿಗಾಗಿ ಆಯೋಜಿಸಿದ್ದ ಒಂದು ದಿನದ ತರಬೇತಿ ಶಿಬಿರ ಉದ್ಘಾಟಿಸಿ ಮಾತಾನಾಡಿದರು.
ರಕ್ತದಾನಿಗಳ ಜಿಲ್ಲೆ
ಕುಂದಾಪುರ ರೆಡ್ ಕ್ರಾಸ್ನ ಸಭಾಪತಿ ಜಯಕರ ಎಸ್. ಶೆಟ್ಟಿ ಮಾತನಾಡಿ, ಉಡುಪಿ ಜಿಲ್ಲೆಯು ರಕ್ತದಾನಿಗಳ ಜಿಲ್ಲೆಯಾಗಿ ಗುರುತಿಸಲ್ಪಟ್ಟಿದೆ. ಅರ್ಹರೆಲ್ಲರೂ ರಕ್ತದಾನ ಮಾಡುವ ಮೂಲಕ ಈ ಪರಂಪರೆ ಮುಂದುವರಿಸುವ ಅಗತ್ಯತೆಯಿದೆ ಎಂದರು.
ಮಂಗಳೂರು ವಿಶ್ವವಿದ್ಯಾನಿಲಯ ಯುವ ರೆಡ್ ಕ್ರಾಸ್ನ ನೋಡಲ್ ಅಧಿಕಾರಿ ಡಾ. ಗಾಯತ್ರಿ ಎನ್., ವಿಶ್ವವಿದ್ಯಾನಿಲಯದ ಮಟ್ಟದಲ್ಲಿ ಯುವ ರೆಡ್ ಕ್ರಾಸ್ ಅನುಷ್ಠಾನದ ಕುರಿತು ಮಾತನಾಡಿದರು. ಡಾ. ಕೀರ್ತಿ, ಅಶ್ವಿನ್ ಕುಮಾರ್ ಹಾಗೂ ಡಾ. ಸುರೇಶ್ ಶೆಣೈ ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡಿದ್ದರು.
ವಿದ್ಯಾರ್ಥಿಗಳಿಗೆ ರೆಡ್ ಕ್ರಾಸ್ ಪ್ರತಿಜ್ಞಾ ವಿಧಿ ಬೋಧಿಸಲಾಯಿತು. ರೆಡ್ಕ್ರಾಸ್ನ ಆಡಳಿತ ಮಂಡಳಿಯ ಸದಸ್ಯ ಟಿ.ಚಂದ್ರಶೇಖರ್, ಮಂಗಳೂರು ವಿಶ್ವವಿದ್ಯಾನಿಲಯದ ಉಡುಪಿ ಜಿಲ್ಲಾ ವ್ಯಾಪ್ತಿಯ ರೆಡ್ ಕ್ರಾಸ್ ಅಧಿಕಾರಿಗಳು ಮತ್ತು ವಿದ್ಯಾರ್ಥಿಗಳು ತರಬೇತಿಯಲ್ಲಿ ಪಾಲ್ಗೊಂಡಿದ್ದರು.
ರೆಡ್ ಕ್ರಾಸ್ನ ಜಿಲ್ಲಾ ಕಾರ್ಯದರ್ಶಿ ಡಾ. ಗಣನಾಥ ಶೆಟ್ಟಿ ಎಕ್ಕಾರು ಸ್ವಾಗತಿಸಿದರು. ರೆಡ್ ಕ್ರಾಸ್ನ ಜಿಲ್ಲಾ ಸದಸ್ಯ ರಾಘವೇಂದ್ರ ಪ್ರಭು ಕಾರ್ಯಕ್ರಮ ನಿರೂಪಿಸಿದರು. ಖಜಾಂಚಿ ರಮಾದೇವಿ ವಂದಿಸಿದರು.