ಪಟಾಕಿ ಗಲಾಟೆ ಪ್ರಕರಣ; ದೌರ್ಜನ್ಯ ದೂರು ತನಿಖೆ ಮುಂದುವರಿಕೆ

ಪಟಾಕಿ ಗಲಾಟೆಗೆ ಸಂಬಂದಿಸಿ ವಿದ್ಯಾರ್ಥಿಗಳನ್ನು ಠಾಣೆಗೆ ಕರೆದೊಯ್ಯುತ್ತಿರುವ ಪೊಲೀಸರು.
ಪಟಾಕಿ ಗಲಾಟೆಗೆ ಸಂಬಂದಿಸಿ ವಿದ್ಯಾರ್ಥಿಗಳನ್ನು ಠಾಣೆಗೆ ಕರೆದೊಯ್ಯುತ್ತಿರುವ ಪೊಲೀಸರು.
Published on: 

* ಉಡುಪಿ ಎಸ್ಪಿ ಹರಿರಾಮ ಶಂಕರ ಮಾಹಿತಿ

ಉಡುಪಿ: ದೀಪಾವಳಿ ದಿನದಂದು ಮಣಿಪಾಲದಲ್ಲಿ ಪ್ರತಿಷ್ಠಿತ ಖಾಸಗಿ ಕಾಲೇಜ್​ನ ಇಂಜನಿಯರಿಂಗ್​ ವಿದ್ಯಾರ್ಥಿಗಳು ಪಟಾಕಿ ಸಿಡಿಸಿದ ಘಟನೆಗೆ ಸಂಬಂಧಿಸಿ ಹಾಗೂ ಪೊಲೀಸರಿಂದ ದೌರ್ಜನ್ಯ ನಡೆದಿದೆ ಎಂದು ಮಣಿಪಾಲದ ಕೆಲವು ವಿದ್ಯಾರ್ಥಿಗಳು ಮಾಡಿರುವ ಆರೋಪದ ಹಿನ್ನೆಲೆಯಲ್ಲಿ ಪ್ರಕರಣದ ತನಿಖೆ ಮುಂದುವರಿದಿದೆ ಎಂದು ಎಸ್ಪಿ ಹರಿರಾಮ ಶಂಕರ ತಿಳಿಸಿದ್ದಾರೆ.

ಅನ್ವಯಿಸಲಾದ ವಿಭಾಗಗಳ ಅಡಿಯಲ್ಲಿ ನೇರ ತನಿಖೆ ಸಾಧ್ಯವಿಲ್ಲದ್ದರಿಂದ ನ್ಯಾಯಾಲಯದಿಂದ ಅನುಮತಿ ಪಡೆದ ನಂತರವೇ ಎಫ್​ಐಆರ್​ ದಾಖಲಿಸಲಾಗಿದೆ. ಸ್ಥಳದಲ್ಲಿನ ಸಿಸಿಟಿವಿ ದೃಶ್ಯಾವಳಿ, ಮೊಬೈಲ್​ ವಿಡಿಯೋ ದೃಶ್ಯಾವಳಿ ಆಧಾರದ ಮೇಲೆ ಹಾಗೂ ಸ್ಥಳದಲ್ಲಿದ್ದವರ ಹೇಳಿಕೆಗಳ ಆಧಾರದಲ್ಲಿ ನಿಯಮ ಉಲ್ಲಂಘಿಸಿದ ಆರೋಪಿಗಳಿಗೆ ನೋಟಿಸ್​ ನೀಡಲಾಗಿದೆ.

ಪೊಲೀಸರ ಅತಿರೇಕದ ವರ್ತನೆಗೆ ಸಂಬಂಧಿಸಿ ವಿದ್ಯಾರ್ಥಿಗಳು ಮೂರು ದಿನ ಹಿಂದೆ ನನಗೆ ದೂರು ಅರ್ಜಿ ನೀಡಿದ್ದು, ಅದರ ವಿಚಾರಣೆಯ ಜವಾಬ್ದಾರಿಯನ್ನು ಉಡುಪಿ ಡಿವೈಎಸ್ಪಿಗೆ ವಹಿಸಿಲಾಗಿದೆ. ತನಿಖೆ ಪ್ರಗತಿಯಲ್ಲಿದೆ.

ಯಾರ ಮೇಲೂ ಇನ್ನೂ ಆರೋಪ ಪಟ್ಟಿ ಸಲ್ಲಿಸಿಲ್ಲ. ಪ್ರಕರಣದ ತನಿಖಾಧಿಕಾರಿಯಾಗಿದ್ದ ಮಣಿಪಾಲ ಪಿಎಸ್​ಐ ವಿರುದ್ಧ ವಿದ್ಯಾರ್ಥಿಗಳು ಅನುಮಾನ ವ್ಯಕ್ತಪಡಿಸಿದ್ದರಿಂದ ಮಣಿಪಾಲ ಠಾಣೆಯ ಪಿಐಗೆ ತನಿಖೆಗಾಗಿ ಹಸ್ತಾಂತರಿಸಲಾಗಿದೆ ಎಂದು ಎಸ್ಪಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಿಎಂಗೆ ಇ-ಮೇಲ್​ ಮೂಲಕ ದೂರು?

ದೀಪಾವಳಿ ಸಂದರ್ಭದಲ್ಲಿ ಪಟಾಕಿ ಸಿಡಿಸಿದ ಪ್ರಕರಣದಲ್ಲಿ ಮಣಿಪಾಲ ಪೊಲೀಸರು ಅಮಾಯಕ ವಿದ್ಯಾರ್ಥಿಗಳ ಮೇಲೆ ದೌರ್ಜನ್ಯ ನಡೆಸಿದ್ದಾರೆ ಎಂದು ಆರೋಪಿಸಿ ಇದೀಗ ಇಂಜಿನಿಯರಿಂಗ್​ ವಿದ್ಯಾರ್ಥಿಗಳು ಮುಖ್ಯಮಂತ್ರಿಗಳಿಗೆ ಇ-ಮೇಲ್​ ಮೂಲಕ ದೂರು ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ. ನ.8ರಂದು ತಮ್ಮ ವಸತಿ ಸಮುಚ್ಚಯದ ಆವರಣದಲ್ಲಿ ಯಾರಿಗೂ ತೊಂದರೆಯಾಗದಂತೆ ಪಟಾಕಿ ಸಿಡಿಸಿ ದೀಪಾವಳಿ ಆಚರಿಸಿದ್ದೆವು. ಆದರೆ, ನ.10ರಂದು ಪೊಲೀಸ್​ ಸಿಬ್ಬಂದಿ ನಮ್ಮ ಮನೆಗಳಿಗೆ ನುಗ್ಗಿ, ಪರೀಕ್ಷೆಗೆ ಓದುತ್ತಿದ್ದ ವಿದ್ಯಾರ್ಥಿಗಳ ಮೇಲೆ ಎಲ್ಲರ ಎದುರೇ ಹಲ್ಲೆ ನಡೆಸಿದ್ದಾರೆ. ಪೊಲೀಸರು ಥಳಿಸುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿವೆ. ಯಾವುದೇ ಸೂಕ್ತ ಕಾರಣ ನೀಡದೆ ಠಾಣೆಗೆ ಕರೆದೊಯ್ದು ಬೆಳಗ್ಗೆ 11ರಿಂದ ರಾತ್ರಿ 8ರ ವರೆಗೆ ಕೂರಿಸಿ ಮಾನಸಿಕ, ದೈಹಿಕ ಹಿಂಸೆ ನೀಡಿದ್ದಾರೆ. ಮಣಿಪಾಲ ಠಾಣೆ ಪಿಎಸ್​ಐ ಸುಳ್ಳು ವಿವರದೊಂದಿಗೆ ನಮ್ಮ ವಿರುದ್ಧ ಎ್​ಐಆರ್​ ದಾಖಲಿಸಿದ್ದಾರೆ. ಸಾರ್ವಜನಿಕ ರಸ್ತೆಯಲ್ಲಿ ಬೇರೆಯವರು ಮಾಡಿದ ಕೃತ್ಯಕ್ಕೆ ನಮ್ಮನ್ನು ಹೊಣೆಯಾಗಿಸಿ 20 ವಿದ್ಯಾರ್ಥಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ ಎಂದು ವಿದ್ಯಾರ್ಥಿಗಳು ಇ-ಮೇಲ್​ ಮೂಲಕ ತಮ್ಮ ಆತಂಕ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.