ಮದ್ಯಮಾರಾಟ ಮಳಿಗೆಗಳಲ್ಲಿ ಬೆಂಕಿ ನಿರೋಧಕ ಅಳವಡಿಕೆ ಕಡ್ಡಾಯ

 ಅಬಕಾರಿ ಡೆಪ್ಯೂಟಿ ಕಮಿಷನರ್​ ಟಿ.ಎಂ. ಶ್ರೀನಿವಾಸ್​ ಕಾರ್ಯಾಗಾರದಲ್ಲಿ ಮಾತನಾಡಿದರು.
ಅಬಕಾರಿ ಡೆಪ್ಯೂಟಿ ಕಮಿಷನರ್​ ಟಿ.ಎಂ. ಶ್ರೀನಿವಾಸ್​ ಕಾರ್ಯಾಗಾರದಲ್ಲಿ ಮಾತನಾಡಿದರು.
Published on
ಉಡುಪಿ: ಮದ್ಯಮಾರಾಟ ಮಳಿಗೆಗಳು, ಬಾರ್​ ಆ್ಯಂಡ್​ ರೆಸ್ಟೋರೆಂಟ್​ಗಳಲ್ಲಿ ಬೆಂಕಿ ನಂದಿಸುವ ಸಾಧನ ಹಾಗೂ ಬೆಂಕಿ ಅಲರಾಮ್​ ವ್ಯವಸ್ಥೆ ಮಾಡಿಕೊಳ್ಳಬೇಕು. ನೌಕರರಿಗೆ ಅಗ್ನಿ ಅವಡಗಳು ಸಂಭವಿಸಿದಂತೆ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ತರಬೇತಿ ನೀಡಬೇಕು ಎಂದು ಅಬಕಾರಿ ಡೆಪ್ಯೂಟಿ ಕಮಿಷನರ್​ ಟಿ.ಎಂ. ಶ್ರೀನಿವಾಸ್​ ತಿಳಿಸಿದರು.
ಅಬಕಾರಿ ಇಲಾಖೆಯ ವತಿಯಿಂದ ಜಿಲ್ಲೆಯ ಸನ್ನದುದಾರರು ಹಾಗೂ ಬಾರ್​ ಮಾಲಕರಿಗೆ ಅಗ್ನಿ ಅವಡ ಮುನ್ನೆಚ್ಚರಿಕೆ ಹಾಗೂ ಸುರಕ್ಷತಾ ಕ್ರಮಗಳ ಬಗ್ಗೆ ನಡೆದ ಕಾರ್ಯಾಗಾರದಲ್ಲಿ ಮಾತನಾಡಿದರು.
ಬೆಂಕಿ ನಂದಿಸುವ ಉಪಕರಣಗಳನ್ನು ನಿಯಮಿತವಾಗಿ ಮರುಪೂರಣ ಮಾಡಿಸಿ ಸದಾ ಸಿದ್ಧ ಸ್ಥಿತಿಯಲ್ಲಿಡಬೇಕು. ನಿಯಮ ಉಲ್ಲಂಘಿಸಿದರೆ ಸನ್ನದುದಾರರೇ ನೇರ ಹೊಣೆಗಾರರಾಗುತ್ತಾರೆ. ಮೈಸೂರು ದುರಂತದ ಬಳಿಕ ಹಿರಿಯ ಅಧಿಕಾರಿಗಳ ಸೂಚನೆಯಂತೆ ಗ್ರಾಹಕರ ಜಾಗೃತಿ ಮತ್ತು ಸುರಕ್ಷತೆಯ ದೃಷ್ಟಿಯಿಂದ ಈ ಕಾರ್ಯಾಗಾರ ನಡೆಸಲಾಗಿದೆ. ಮೂರನೇ ಅಥವಾ ನಾಲ್ಕನೇ ಮಹಡಿಗಳಲ್ಲಿ ಅಕ್ರಮವಾಗಿ ಮದ್ಯ ಸರಬರಾಜು ಮಾಡುವ ಬಾರ್​ಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದರು.
ಸನ್ನದುಗಳಲ್ಲಿ ವಿದ್ಯುತ್​ ಸಂಪರ್ಕ ಸರಿಯಾಗಿ ನಿರ್ವಹಣೆ ಮಾಡುತ್ತಿರಬೇಕು. ತುರ್ತು ನಿರ್ಗಮನ ದ್ವಾರಗಳನ್ನು ಯಾವುದೇ ಅಡೆತಡೆಗಳು ಇಲ್ಲದಂತೆ ಇರಿಸಬೇಕು. ಅಡುಗೆ ಮನೆಯಲ್ಲಿ ಸರಿಯಾಗಿ ಗಾಳಿ ಸಂಚಾರ ವ್ಯವಸ್ಥೆ ಕಲ್ಪಿಸಿರಬೇಕು. ಅಗ್ನಿಶಾಮಕ ಇಲಾಖೆಯ ದೂರವಾಣಿ ಸಂಖ್ಯೆಯನ್ನು ಗ್ರಾಹಕರಿಗೆ ಕಾಣುವಂತೆ ಪ್ರದರ್ಶಿಸಬೇಕು ಎಂದು ಮಾಹಿತಿ ನೀಡಿದರು.
ಮಾಲೀಕರಿಗೆ ಸೂಚನೆ
ಬೆಳಗ್ಗೆ ಬೇಗನೆ ಬಾರ್​ ತೆರೆಯುವುದು ಮತ್ತು ರಾತ್ರಿ ತಡವಾಗಿ ಮುಚ್ಚುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬಂದಿದ್ದವು. ಕೆಲವು ಕಡೆ ಬೆಳಗ್ಗೆಯೇ ಮದ್ಯ ನೀಡುವುದರಿಂದ ಜನರು ಫುಟ್​ಪಾತ್​ಗಳಲ್ಲೇ ಮಲಗಿರುವ ಉದಾಹರಣೆಗಳೂ ಇವೆ. ಈ ಹಿನ್ನೆಲೆಯಲ್ಲಿ ಪ್ರತಿಯೊಂದು ಸನ್ನದಿಗೆ ನಿಗದಿಪಡಿಸಿರುವ ಸಮಯವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ತಿಳಿಸಿದರು.
500ಕ್ಕೂ ಹೆಚ್ಚು ಪ್ರಕರಣಗಳ ದಾಖಲು
ಉಡುಪಿ ಜಿಲ್ಲೆಯಲ್ಲಿ ಪ್ರಸ್ತುತ ಸುಮಾರು 475 ರಿಂದ 480 ಸನ್ನದುಗಳಿವೆ. ಸಮಯ ಉಲ್ಲಂಘನೆ ಹಾಗೂ ನಿಯಮಗಳ ಗಾಳಿಗೆ ತೂರಿದ ಪ್ರಕರಣಗಳಿಗೆ ಸಂಬಂಧಿಸಿದಂತೆ ಕಳೆದ ವರ್ಷ ಜುಲೈನಿಂದ ಜೂನ್​ ಅವಧಿಯೊಳಗೆ ಜಿಲ್ಲೆಯಲ್ಲಿ ಸುಮಾರು 400 ರಿಂದ 500 ಪ್ರಕರಣಗಳನ್ನು ದಾಖಲಿಸಿ, ದಂಡ ವಿಧಿಸಲಾಗಿದೆ. ಪದೇ ಪದೇ ತಪ್ಪು ಮಾಡುವ ಸನ್ನದುಗಳನ್ನು ಅಮಾನತು ಮಾಡಲಾಗುವುದು. ದಂಡದ ಮೊತ್ತವನ್ನು ಪೂರ್ತಿಯಾಗಿ ಪಾವತಿಸದಿದ್ದರೆ ಅಂತಹ ಸನ್ನದುಗಳ ನವೀಕರಣಕ್ಕೆ ಶಿಫಾರಸು ಮಾಡಲಾಗುವುದಿಲ್ಲ ಎಂದು ಎಚ್ಚರಿಸಿದರು.
ಒಂದು ವರ್ಷದಲ್ಲಿ ಇಲಾಖೆಯಿಂದ ಕೇವಲ ಒಂದು ಹೊಸ ಸನ್ನದು ಅನುಮತಿ ನೀಡಲಾಗಿದೆ. ಹೈವೇ ಬದಿಗಳಲ್ಲಿ ಹೊಸದಾಗಿ ಬಾರ್​ ಆರಂಭಿಸಲು ಪಿ.ಡಬ್ಲ್ಯೂ.ಡಿ ನಿಯಮಗಳು ಹಾಗೂ ಜನಸಂಖ್ಯೆಯ ಮಾನದಂಡಗಳನ್ನು ಕಟ್ಟುನಿಟ್ಟಾಗಿ ಪರಿಶೀಲಿಸಲಾಗುತ್ತದೆ. ರೆಸಾರ್ಟ್​ ಹಾಗೂ ಕೆಲವು ಹೋಟೆಲ್​ಗಳು ಅಬಕಾರಿ ಇಲಾಖೆಯ ವ್ಯಾಪ್ತಿಗೆ ಬರುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಅಗ್ನಿಶಾಮಕ ಅಧಿಕಾರಿ ವಿನಾಯಕ ಉ.ಕಲ್ಗುಟಕರ್​ ನೇತೃತ್ವದಲ್ಲಿ ಅಗ್ನಿ ಅವಡ ಸಂಭವಿಸಿದಾಗ ತೆಗೆದುಕೊಳ್ಳ ಬೇಕಾದ ಸುರಕ್ಷತಾ ಕ್ರಮಗಳ ಬಗ್ಗೆ ಪ್ರಾತ್ಯಕ್ಷಿಕೆ ನೀಡಲಾಯಿತು. ಅಬಕಾರಿ ಅಧೀಕ್ಷಕ ಅಶೋಕ್​, ಉಪಾಧೀಕ್ಷಕ ಗುರುಮೂರ್ತಿ ಪಾಳೇಕಾರ್​, ಇನ್ಸ್​ಪೆಕ್ಟರ್​ಗಳಾದ ಜ್ಯೋತಿ, ಪ್ರಕಾಶ್​, ವಿನಾರಾಯಣ್​, ರಮೇಶ್​ ಮೊದಲಾದವರು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net