ಉಡುಪಿ ನಗರದ ವಾಣಿಜ್ಯ ಸಂಕೀರ್ಣದಲ್ಲಿ ಅಗ್ನಿ ಅವಘಡ

ಉಡುಪಿಯ ಸಿಟಿ ಬಸ್ ನಿಲ್ದಾಣ ಸಮೀಪದಲ್ಲಿರುವ ಖಾದರ್ ಕಮರ್ಷಿಯಲ್ ಕಟ್ಟಡಕ್ಕೆ ಹೊತ್ತಿಕೊಂಡ ಬೆಂಕಿ ನಂದಿಸುತ್ತಿರುವ ಅಗ್ನಿಶಾಮಕದಳದ ಸಿಬ್ಬಂದಿ.
ಉಡುಪಿಯ ಸಿಟಿ ಬಸ್ ನಿಲ್ದಾಣ ಸಮೀಪದಲ್ಲಿರುವ ಖಾದರ್ ಕಮರ್ಷಿಯಲ್ ಕಟ್ಟಡಕ್ಕೆ ಹೊತ್ತಿಕೊಂಡ ಬೆಂಕಿ ನಂದಿಸುತ್ತಿರುವ ಅಗ್ನಿಶಾಮಕದಳದ ಸಿಬ್ಬಂದಿ.
Published on

* ಹಲವು ಅಂಗಡಿಗಳು ಬೆಂಕಿಗಾಹುತಿ

* ಘಟನೆಯಲ್ಲಿ ಆಗಿಲ್ಲ ಯಾವುದೇ ಜೀವಪಾಯ

ಉಡುಪಿ: ಉಡುಪಿ ಸಿಟಿ ಬಸ್ ನಿಲ್ದಾಣದ ಸಮೀಪದಲ್ಲಿರುವ ಖಾದರ್ ಕಮರ್ಷಿಯಲ್ ಕಟ್ಟಡದಲ್ಲಿ ಭಾನುವಾರ ಸಂಜೆ ಅಗ್ನಿ ದುರಂತ ಸಂಭವಿಸಿ ಭಾರಿ ಪ್ರಮಾಣದಲ್ಲಿ ನಷ್ಟ ಉಂಟಾಗಿದೆ.
ಕಟ್ಟಡದಲ್ಲಿದ್ದ ಮೊಬೈಲ್ ಅಂಗಡಿ ಹಾಗೂ ಹಾರ್ಡ್‌ವೇ‌ರ್ ಅಂಗಡಿಯಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದ್ದು, ಕ್ಷಣಾರ್ಧದಲ್ಲಿ ಬೆಂಕಿ ಸಂಪೂರ್ಣ ಕಟ್ಟಡ ವ್ಯಾಪಿಸಿದೆ. ಅಂಗಡಿಗಳಲ್ಲಿದ್ದ ವಸ್ತುಗಳು ಸಂಪೂರ್ಣ ಸುಟ್ಟು ಕರಕಲಾಗಿದೆ.
ಅಗ್ನಿಶಾಮಕ ದಳದ ಸಿಬ್ಬಂದಿ ಮೂರು ಜಲವಾಹನದೊಂದಿಗೆ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿದರು. ಭಾರಿ ಪ್ರಮಾಣದಲ್ಲಿ ಬೆಂಕಿ ವ್ಯಾಪಿಸಿಕೊಂಡಿದ್ದರಿಂದ ಕಾರ್ಯಾಚರಣೆಗೆ ಹರಸಾಹಸ ಪಡುವಂತಾಯಿತು. ಅಗ್ನಿ ಅವಘಡಕ್ಕೆ ನಿಖರ ಕಾರಣ ತಿಳಿದಿಲ್ಲ. ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಅವಘಡ ಸಂಭವಿಸಿದೆ ಎಂದು ಶಂಕಿಸಲಾಗಿದೆ.

ಸುರಕ್ಷತೆಗಾಗಿ ರಸ್ತೆ ಬಂದ್

ಕಟ್ಟಡಕ್ಕೆ ಬೆಂಕಿ ಆವರಿಸುತ್ತಿದ್ದಂತೆಯೇ ನಗರ ಭಾಗದಲ್ಲಿದ್ದ ಜನರು ಭಯದಿಂದ ಓಡತೊಡಗಿದರು. ಬೆಂಕಿಯ ದಟ್ಟವಾದ ಹೊಗೆ ಮುಗಿಲೆತ್ತರಕ್ಕೆ ಹೋಗುತ್ತಿರುವುದು ದೂರದಿಂದಲೂ ಗೋಚರಿಸುತ್ತಿತ್ತು. ಅದನ್ನು ಕಂಡ ನೂರಾರು ಜನರು ಬೆಂಕಿ ಅವಘಡ ಸಂಭವಿಸಿದ ಸ್ಥಳಕ್ಕೆ ದಾಂಗುಡಿ ಇಟ್ಟಿದ್ದರು. ಆದರೆ, ಅವಘಡ ಸಂಭವಿಸಿದ ರಸ್ತೆಯ ನಾಲ್ಕು ದಿಕ್ಕುಗಳಿಗೂ ಬ್ಯಾರಿಕೇಡ್ ಅಳವಡಿಸಿದ ಪೊಲೀಸರು ಯಾವುದೇ ವಾಹನ ಹಾಗೂ ಜನರು ಮುಂದೆ ಸಾಗದಂತೆ ತಡೆ ಹಿಡಿದರು.

ಅಂಗಡಿ ಮಾಲೀಕರ ಆಕ್ರೋಶ

ವಾಣಿಜ್ಯ ಕಟ್ಟಡಕ್ಕೆ ಬೆಂಕಿ ಆವರಿಸುತ್ತಿದ್ದಂತೆ ಅಗ್ನಿಶಾಮಕ ದಳಕ್ಕೆ ಕರೆ ಮಾಡಲಾಗಿತ್ತು. ಆದರೆ, ಸಕಾಲಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ವಿರುದ್ಧ ಅಂಗಡಿ ಮಾಲೀಕರು ಆಕ್ರೋಶ ವ್ಯಕ್ತಪಡಿಸಿದರು. ಬೆಂಕಿ ನಂದಿಸುವಲ್ಲಿ ಸಮಾಜ ಸೇವಕ ಕೃಷ್ಣಮೂರ್ತಿ ಆಚಾರ್ಯ ಸೇರಿದಂತೆ ಸ್ಥಳದಲ್ಲಿದ್ದ ಜನರು ಸಹಕರಿಸಿದರು. ಘಟನೆಯಲ್ಲಿ ಯಾವುದೇ ಜೀವಪಾಯ ಆಗಿಲ್ಲ.

"

ಉಡುಪಿ ನಗರದ ಹೃದಯಭಾಗವಾದ ಸಿಟಿ ಬಸ್ ನಿಲ್ದಾಣ ಸಮೀಪದಲ್ಲೇ ಸಂಭವಿಸಿದ ಅಗ್ನಿ ಅವಘಡವು ತೀವ್ರ ಚಿಂತೆಗೆ ಕಾರಣವಾಗಿದೆ. ಈ ದುರ್ಘಟನೆಯಲ್ಲಿ ವಿಶೇಷವಾಗಿ ಮೊಬೈಲ್ ಅಂಗಡಿಗಳಿಗೆ ಸಂಭವಿಸಿದ ಅಪಾರ ನಷ್ಟ ನೋವಿನ ಸಂಗತಿಯಾಗಿದೆ. ಮೊಬೈಲ್‌ ರಿಟೈಲ್‌ ವ್ಯಾಪಾರಿಗಳ ಜೀವನಾಧಾರವಾಗಿದ್ದ ಅಂಗಡಿಯೇ ಹಾನಿ ಆಗಿರುವುದು ಅತ್ಯಂತ ವಿಷಾದನೀಯ. ನಗರದ ಕಿನ್ನಿಮೂಲ್ಕಿಯಲ್ಲಿ ಅಗ್ನಿಶಾಮಕ ದಳದ ಮುಖ್ಯ ಕಚೇರಿ ಮತ್ತು ಎಲ್ಲ ವಾಹನ ಸಹಿತ ಅಗತ್ಯ ಸೌಕರ್ಯಗಳಿದೆ. ಅವಘಡ ನಡೆದ ಸ್ಥಳ ಅಲ್ಲಿಂದ 2 ಕಿ.ಮೀ. ದೂರದಲ್ಲಿದ್ದರೂ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ತಲುಪಲು 40ರಿಂದ 45 ನಿಮಿಷ ವಿಳಂಬವಾಗಿದೆ. ಇದು ಅತ್ಯಂತ ಗಂಭೀರ ನಿರ್ಲಕ್ಷ್ಯದ ಸೂಚಕವಾಗಿದೆ. ಈ ವಿಳಂಬವೇ ಬೆಂಕಿ ಅವಘಡದ ತೀವ್ರತೆ ಹೆಚ್ಚಲು ಪ್ರಮುಖ ಕಾರಣವಾಗಿದೆ. ಜಿಲ್ಲಾಡಳಿತ ಇದನ್ನು ಗಂಭೀರವಾಗಿ ಪರಿಗಣಿಸಿ, ಅಗ್ನಿಶಾಮಕ ದಳದ ಕಾರ್ಯದಲ್ಲಿ ಉಂಟಾದ ವಿಳಂಬದ ಕುರಿತು ಸಮಗ್ರ ತನಿಖೆ ನಡೆಸಿ, ಹೊಣೆಗಾರರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net