ಕುಂದಾಪುರ: ಹೊಸಾಡು ಗ್ರಾಮದ ಅರಾಟೆ ಸೇತುವೆ ಬಳಿಯಿರುವ ಪ್ರಕಾಶ್ ಆಚಾರಿ ಮಾಲೀಕತ್ವದ ಬೋಟುಗಳ ನಿರ್ಮಾಣ ಘಟಕದಲ್ಲಿ ಬುಧವಾರ ಬೆಂಕಿ ಅವಘಡ ಸಂಭವಿಸಿದ್ದು, ಅಂದಾಜು 5 ಲಕ್ಷ ರೂ. ನಷ್ಟ ಉಂಟಾಗಿದೆ.
ಮಧ್ಯಾಹ್ನ ವೇಳೆಗೆ ಹೊಸ ಬೋಟಿನ ವೆಲ್ಡಿಂಗ್ ಮಾಡುತ್ತಿದ್ದ ವೇಳೆ ಕಾಣಿಸಿಕೊಂಡ ಬೆಂಕಿಯು ಫ್ಲೈವುಡ್‌ಗೆ ತಗುಲಿ ಬೋಟಿಗೆ ವ್ಯಾಪಿಸಿದೆ. ಕೂಡಲೇ ಕುಂದಾಪುರದ ಅಗ್ನಿಶಾಮಕ ದಳಕ್ಕೆ ಕರೆ ಮಾಡಿದ್ದು, ಸ್ಥಳಕ್ಕೆ ಧಾವಿಸಿ ಬೆಂಕಿ ನಿಯಂತ್ರಣಕ್ಕೆ ತಂದಿದ್ದಾರೆ. ಇಲ್ಲದಿದ್ದರೆ ಬೆಂಕಿ ಇನ್ನಷ್ಟು ಬೋಟ್‌ಗಳಿಗೆ ಪಸರಿಸುವ ಸಾಧ್ಯತೆ ಇತ್ತು.
ಕಾರ್ಯಾಚರಣೆಯಲ್ಲಿ ಕುಂದಾಪುರದ ಸಹಾಯಕ ಅಗ್ನಿಶಾಮಕ ಅಧಿಕಾರಿ ಕೆ.ಎಲ್.ಹೊಸರಿತ್ತಿ, ಪ್ರಮುಖ ಅಗ್ನಿಶಾಮಕರಾದ ಕೇಶವ್ ಕುಲಾಲ್, ಸತೀಶ್ ಶೆಣೈ, ಸಿಬ್ಬಂದಿ ಧನುಷ್ ಗೌಡ, ಇದಿರಿಷ್ ಮೊಹಮ್ಮದ್ ಶಾಫಿ, ಚಾಲಕ ಸಚಿನ್ ಹಾಗೂ ಸ್ಥಳೀಯರು, ಘಟಕದ ಕೆಲಸಗಾರರು ಸಹಕರಿಸಿದರು.