ತ್ಯಾಜ್ಯರಾಶಿಗೆ ದಂಡದ ಬಿಸಿ!

 ಕುಂಜಾಲು ರಸ್ತೆ ಬಳಿಯ ಕಟ್ಟಡವೊಂದರ ಬಳಿ ಕಸದ ರಾಶಿ ಮತ್ತು ರಸ್ತೆಯ ಮೇಲೆ ಇರುವ ನಾಮಫಲಕದ ಕಂಬಗಳನ್ನು ತೆರವು ವಾಡಿರುವುದು.
ಕುಂಜಾಲು ರಸ್ತೆ ಬಳಿಯ ಕಟ್ಟಡವೊಂದರ ಬಳಿ ಕಸದ ರಾಶಿ ಮತ್ತು ರಸ್ತೆಯ ಮೇಲೆ ಇರುವ ನಾಮಫಲಕದ ಕಂಬಗಳನ್ನು ತೆರವು ವಾಡಿರುವುದು.
Published on
ಬಂಡೀಮಠ ಶಿವರಾಮ ಆಚಾರ್ಯ ಬ್ರಹ್ಮಾವರ
ಮಳೆಗಾಲ ಪೂರ್ವ ತಯಾರಿಯಾಗಿ ರಸ್ತೆ ಮತ್ತು ಸಾರ್ವಜನಿಕ ಸ್ಥಳದಲ್ಲಿರುವ ಪ್ಲಾಸ್ಟಿಕ್ ಸೇರಿದಂತೆ ತ್ಯಾಜ್ಯವನ್ನು ಸ್ವಚ್ಛ ವಾಡುವಂತೆ ಮತ್ತು ದಂಡ ವಿಧಿಸುವಂತೆ ಉಡುಪಿ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್ ಆದೇಶ ಹೊರಡಿಸಿದ್ದು, ಇದರ ಬೆನ್ನಲ್ಲೇ ಜಿಲ್ಲೆಯ 874 ಕಡೆಗಳಲ್ಲಿ ಸ್ವಚ್ಛತೆ ನಡೆಸಲಾಗಿದೆ. ಬರೋಬ್ಬರಿ 48,131 ಕೆ.ಜಿ. ಪ್ಲಾಸ್ಟಿಕ್ ಮತ್ತು ಒಣ ತ್ಯಾಜ್ಯ ಸಂಗ್ರಹಿಸಲಾಗಿದೆ.
ತಾಲೂಕಿನ ನಗರ ಭಾಗಗಳಾದ ವಾರಂಬಳ್ಳಿ, ಚಾಂತಾರು ಮತ್ತು ಹಂದಾಡಿ ಗ್ರಾಮ ಪಂಚಾಯಿತಿ ಆದೇಶ ಬಂದ ದಿನದಿಂದ ನಗರದ ಎಲ್ಲ ಭಾಗಗಳಲ್ಲಿ ಸ್ವಚ್ಛತೆಗೆ ಗಮನಹರಿಸಿದ್ದು, ತ್ಯಾಜ್ಯ ಎಸೆಯುವವರನ್ನು ಪತ್ತೆ ಹಚ್ಚಿ ದಂಡ ವಿಧಿಸುತ್ತಿರುವ ಕಾರಣ ಬಹುತೇಕ ರಸ್ತೆ ಬದಿಗಳು ಸ್ವಚ್ಛಗೊಂಡಿವೆ.
ದಂಡ ತೆತ್ತವರಲ್ಲಿ ಬ್ರಹ್ಮಾವರದ ಶಿಕ್ಷಣ ಸಂಸ್ಥೆಯೊಂದರ ಶಿಕ್ಷಕರು, ವೈದ್ಯರು, ವಿದ್ಯಾವಂತರೇ ಹೆಚ್ಚು ಕಂಡು ಬಂದಿದ್ದಾರೆ. ಈ ಪಟ್ಟಿಯಲ್ಲಿ ಆಟೋ ಚಾಲಕರು, ಬೈಕ್ ಸವಾರರು, ಸಾರ್ವಜನಿಕರು ಹೊರತಾಗಿಲ್ಲ. ನಗರ ಮಧ್ಯ ಭಾಗದ 2 ಕಡೆಗಳಲ್ಲಿ ಸಿಟಿ ಸೆಂಟರ್‌ನಿಂದ ತಾಲೂಕು ಸೌಧ ಮತ್ತು ಅಂಚೆ ಕಚೇರಿಯಿಂದ ಸಂತೆ ವಾರುಕಟ್ಟೆ ತನಕ ರಾಷ್ಟ್ರೀಯ ಹೆದ್ದಾರಿ 66 ಕಾಲುದಾರಿಯ ಅಲ್ಲಲ್ಲಿ ಕಸ ತುಂಬಿಕೊಂಡಿದೆ.
ಬ್ರಹ್ಮಾವರದಲ್ಲಿ ಉಡುಪಿ ಸಹಾಯಕ ಕಾರ್ಯಪಾಲಕ ಅಭಿಯಂತ ಶ್ರೀನಾಥ್, ಬ್ರಹ್ಮಾವರ ತಾಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ಮಹೇಶ್, ಉಡುಪಿ ಗ್ರಾಮ ಕುಡಿಯುವ ನೀರು ನೈರ್ಮಲ್ಯವಿಭಾಗದ ಸುಬ್ರಹ್ಮಣ್ಯ ಮತ್ತು ಉಡುಪಿ ಉಪ ವಿಭಾಗದ ಮೊಹಮ್ಮದ್ ಸಾಲಿಂ 4 ತಂಡಗಳ ನೇತೃತ್ವ ವಹಿಸಿದ್ದಾರೆ.

ದಾಖಲೆ ಬರೆದ ವಾರಂಬಳ್ಳಿ ಗ್ರಾ.ಪಂ.


ತ್ಯಾಜ್ಯ ಎಸೆದ ವಸ್ತುಗಳ ವಿಳಾಸದ ಜಾಡನ್ನು ಹಿಡಿದು, ಕಸದ ರಾಶಿಯಲ್ಲಿ ಪತ್ತೆಯಾದ ವಿಳಾಸದ ವ್ಯಕ್ತಿಗಳನ್ನು ವಿಚಾರಿಸಿ 5000 ರೂ. ದಂಡ ಹಾಕಲಾಗಿದೆ. ಇದರಲ್ಲಿ ಜಿಲ್ಲೆಯಲ್ಲಿ ಗ್ರಾಮ ಪಂಚಾಯಿತಿಯೊಂದು ಹೆಚ್ಚು ದಂಡ ಹಾಕಿರುವುದರಲ್ಲಿ ವಾರಂಬಳ್ಳಿ ಗ್ರಾಮ ಪಂಚಾಯಿತಿ ಗುರುತಿಸಿಕೊಂಡಿದೆ.

ಜೆಸಿಬಿ ಯಂತ್ರ ಬಳಸಿ ಸ್ವಚ್ಛತೆ

ನಿರ್ಮಲಾ ಹೈಸ್ಕೂಲ್ ಬಳಿಯಲ್ಲಿ ಕಸದ ಕೊಂಪೆಯಾಗಿರುವುದನ್ನು ಜೆಸಿಬಿ ಯಂತ್ರದ ಮೂಲಕ ಸ್ವಚ್ಛಗೊಳಿಸಿರುವುದು, ಕುಂಜಾಲು ರಸ್ತೆ ಬಳಿಯ ಕಟ್ಟಡವೊಂದರ ಬಳಿ ಕಸದ ರಾಶಿ ಮತ್ತು ರಸ್ತೆ ಮೇಲೆ ಇರುವ ನಾಮಫಲಕದ ಕಂಬಗಳನ್ನು ತೆರವು ವಾಡಲಾಗಿದೆ. ಗ್ರಾಮೀಣ ಭಾಗವಾಗ ನೀಲಾವರ, ಆರೂರು, ಕುಂಜಾಲು, ಹನೆಹಳ್ಳಿ, ನಡೂರು, ಕಾಡೂರು, ಬಾರಕೂರು, ಹಾರಾಡಿ, ಬೈಕಾಡಿ, ಉಪ್ಪೂರು ಸೇರಿದಂತೆ ಬಹುತೇಕ ಗ್ರಾಮ ಪಂಚಾಯಿತಿ ಸ್ವಚ್ಛತಾ ಕರ್ಮಿಗಳೊಂದಿಗೆ ಕಚೇರಿ ಸಿಬ್ಬಂದಿ ಕೂಡ ಸ್ವಚ್ಛತೆಯಲ್ಲಿ ತೊಡಗಿದ್ದು, ಆದೇಶ ಪಾಲನೆ ಮತ್ತು ಸ್ವಚ್ಛತೆಗೆ ಮಹತ್ವ ನೀಡಿದ್ದಾರೆ.

ಜಿ.ಪಂ. ಸಿಇಒ ಆದೇಶದಂತೆ ಈಗಾಗಲೇ ತಾಲೂಕು ಹಂತದಲ್ಲಿ ಸಂಚಾರಿ ಮೇಲ್ವಿಚಾರಣಾ ತಂಡ ನಿಯೋಜಿಸಲಾಗಿದೆ. ಪ್ರತಿಯೊಂದು ಗ್ರಾ.ಪಂ.ನಲ್ಲಿ ತ್ಯಾಜ್ಯ ನಿರ್ವಹಣೆ ಮತ್ತು ಸ್ವಚ್ಛತಾ ಕಾರ್ಯಚಟುವಟಿಕೆಗಳನ್ನು ಅನುಷ್ಠಾನ ವಾಡಿದ ಕಾರಣ ಯಶಸ್ಸು ಕಾಣಲು ಮತ್ತು ಜಾಗೃತಿ ಮೂಡುವಂತಾಗಿದೆ.

— ಎಚ್.ವಿ.ಇಬ್ರಾಹಿಂಪುರ ಬ್ರಹ್ಮಾವರ ತಾಪಂ ಕಾರ್ಯನಿರ್ವಹಣಾಧಿಕಾರಿ

ಬ್ರಹ್ಮಾವರ ನಗರ ಭಾಗ 3 ಗ್ರಾ.ಪಂ.ಗಳನ್ನು ಒಳಗೊಂಡಿದೆ. ಇದರಲ್ಲಿ ವಾರಂಬಳ್ಳಿ ಗ್ರಾ.ಪಂ.ನಲ್ಲಿ ನಾವು ಉನ್ನತ ಅಧಿಕಾರಿಗಳು ನೀಡಿದ ಆದೇಶದನ್ವಯ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದೇವೆ. ಸಿಬ್ಬಂದಿಯೊಂದಿಗೆ ಕಾರ್ಯಾಚರಣೆ ವಾಡಿದ ಕಾರಣ ಜನಜಾಗೃತಿ ಮತ್ತು ದಂಡ ವಸೂಲಿ ವಾಡಲು ಸಾಧ್ಯವಾಗಿದೆ.

— ಆದರ್ಶ ಶೆಟ್ಟಿ ವಾರಂಬಳ್ಳಿ ಪಿಡಿಒ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net