ಸಿಪಿಎಂ ಗುರುಪುರ ವಲಯ ಸಮಿತಿ ಕುಡುಪು ಪಿಎಚ್‌ಸಿಗಳಿಗೆ ಭೇಟಿ ನೀಡಿ ವಾಸ್ತವ ಸ್ಥಿತಿಗತಿ ಕುರಿತು ಮಾಹಿತಿ ಸಂಗ್ರಹಿಸಿತು.ದ.ಕ ಜಿಲ್ಲಾ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ, ಜಿಲ್ಲಾ ಸಮಿತಿ ಮುಖಂಡರಾದ ಸದಾಶಿವ ದಾಸ್, ವಸಂತಿ ಕುಪ್ಪೆಪದವು, ಮನೋಜ್ ವಾಮಂಜೂರು ಇದ್ದರು.
Published on:
Copied
Follow Us
ಗುರುಪುರ: ಸಿಪಿಎಂ ಗುರುಪುರ ವಲಯ ಸಮಿತಿ ಗುರುಪುರ ಹೋಬಳಿಯ ನಾಲ್ಕು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರು ಮತ್ತು ಸಿಬ್ಬಂದಿ ಕೊರತೆ, ಔಷಧ ಹಾಗೂ ಮೂಲಸೌಕರ್ಯಗಳ ಅಧ್ಯಯನಕ್ಕಾಗಿ ರಚಿಸಿರುವ ಪಕ್ಷದ ನಿಯೋಗ ಮಂಗಳವಾರ ಹೋಬಳಿಯ ಕುಪ್ಪೆಪದವು, ಗಂಜಿಮಠ, ಕೊಂಪದವು ಮತ್ತು ಕುಡುಪು ಪಿಎಚ್‌ಸಿಗಳಿಗೆ ಭೇಟಿ ನೀಡಿ ವಾಸ್ತವ ಸ್ಥಿತಿಗತಿ ಕುರಿತು ಮಾಹಿತಿ ಸಂಗ್ರಹಿಸಿತು.
ಕುಡುಪು ಮತ್ತು ಗಂಜಿಮಠ ಪಿಎಚ್‌ಸಿ ಹೊರತುಪಡಿಸಿ ಉಳಿದ ಕೇಂದ್ರಗಳಲ್ಲಿ ವೈದ್ಯರ ಕೊರತೆ ಕಂಡುಬಂದಿದೆ. ಬಹು ಜನಸಂಖ್ಯೆ ಇರುವ ಕೊಂಪದವು, ಮುಚ್ಚೂರು, ಬಡಗಎಡಪದವು, ತೆಂಕಎಡಪದವು ವ್ಯಾಪ್ತಿಯ ಕೊಂಪದವು ಪಿಎಚ್‌ಸಿಯಲ್ಲಿ ಇತರ ಪಿಎಚ್‌ಸಿಗಳಲ್ಲಿ ಜವಾಬ್ದಾರಿ ಹೊಂದಿರುವ ವೈದ್ಯರು ಕಾರ್ಯ ನಿರ್ವಹಿಸುತ್ತಿದ್ದು, ವೈದ್ಯರ ಕೊರತೆ ಕಂಡುಬಂದಿದೆ.
ಕುಪ್ಪೆಪದವು ಪಿಎಚ್‌ಸಿ ವೈದ್ಯಾಧಿಕಾರಿಗೆ ಇತರ ಹೆಚ್ಚುವರಿ ಜವಾಬ್ದಾರಿಯ ಕಾರಣದಿಂದ ಇಲ್ಲಿ ವಾರದಲ್ಲಿ ಕೇವಲ 2 ದಿನ ಲಭ್ಯವಿರುತ್ತಾರೆ. ಬಹುತೇಕ ಎಲ್ಲ ಪಿಎಚ್‌ಸಿ ವೈದ್ಯರಿಗೆ ಕಾರಾಗೃಹದ ಜವಾಬ್ದಾರಿ ಸಹಿತ ಇತರ ಕೆಲಸಗಳು ಇವೆ. ಹಾಗಾಗಿ ಇಲ್ಲಿ ರೋಗಿಗಳಿಗೆ ನಿತ್ಯವೂ ವೈದ್ಯರು ಲಭ್ಯವಿಲ್ಲ. ಪಿಎಚ್‌ಸಿಯ ಅಧೀನದಲ್ಲಿರುವ ಉಪ ಆರೋಗ್ಯ ಕೇಂದ್ರಗಳಲ್ಲೂ ಸಿಬ್ಬಂದಿ ಕೊರತೆ ಎದ್ದು ಕಾಣುತ್ತಿದೆ. ಇಲ್ಲಿ ಬಹುತೇಕ ಸಿಬ್ಬಂದಿ ಗುತ್ತಿಗೆಯಾಧರಿಸಿ ಕೆಲಸ ಮಾಡುತ್ತಿದ್ದಾರೆ ಎಂದು ಸಿಪಿಎಂ ಗುರುಪುರ ಸಮಿತಿ ಹೇಳಿದೆ.
ಪಕ್ಷದ ಗುರುಪುರ ವಲಯ ಸಮಿತಿ ಗುರುಪುರ ಹೋಬಳಿ ಸರ್ಕಾರಿ ಆಸ್ಪತ್ರೆಗಳ ಬಲವರ್ಧನೆಗೆ ಹೋರಾಟ ನಡೆಸುತ್ತಿದೆ. ಈ ನಿಟ್ಟಿನಲ್ಲಿ ಪಿಎಚ್‌ಸಿಗಳ ಅಧ್ಯಯನ ಸಂದರ್ಭದಲ್ಲಿ ಸಿಪಿಎಂ ಸಮಿತಿ ಕಂಡುಕೊಂಡಿರುವ ಜ್ವಲಂತ ಸಮಸ್ಯೆಗಳು ಹಾಗೂ ಕೊರತೆಗಳ ವರದಿಯನ್ನು ಆರೋಗ್ಯ ಇಲಾಖೆ ಹಾಗೂ ಜನತೆ ಮುಂದಿಟ್ಟು ಜನಾಭಿಪ್ರಾಯ ಸಂಗ್ರಹಿಸುವ ಮೂಲಕ ಆಸ್ಪತ್ರೆಗಳ ಖಾಸಗೀಕರಣ ವಿರುದ್ಧ ಹೋರಾಟ ತೀವ್ರಗೊಳಿಸಲಾಗುವುದು ಎಂದು ಸಮಿತಿ ಕಾರ್ಯದರ್ಶಿ ಸದಾಶಿವ ದಾಸ್ ತಿಳಿಸಿದ್ದಾರೆ.
ದ.ಕ ಜಿಲ್ಲಾ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ, ವಸಂತಿ ಕುಪ್ಪೆಪದವು, ಮನೋಜ್ ವಾಮಂಜೂರು, ವಲಯ ಸಮಿತಿ ಸದಸ್ಯರಾದ ಅಶೋಕ್ ಬಂಗೇರ, ಹೊನ್ನಯ್ಯ ಅಮೀನ್, ಬಾಬು ಸಾಲ್ಯಾನ್, ಆನಂದ ಇರುವೈಲು, ಸಾಮಾಜಿಕ ಹೋರಾಟಗಾರ ಬಾವಾ ಪದ್ರೆಂಗಿ ಇದ್ದರು.