ಸಾರ್ವಜನಿಕ ರಸ್ತೆಗೆ ಬೇಲಿ ಹಾಕಿ ಸಂಚಾರ ನಿರ್ಬಂಧ

 ಪಾಲೆತ್ತಡಿ ಎಂಬಲ್ಲಿ ಸಾರ್ವಜನಿಕ ರಸ್ತೆಗೆ ಖಾಸಗಿ ವ್ಯಕ್ತಿಯೊಬ್ಬರು ಬೇಲಿ ಹಾಕಿ ಸಂಚಾರ ನಿರ್ಬಂಧಿಸಿರುವುದನ್ನು ವಿರೋಧಿಸಿ ಗ್ರಾಮಸ್ಥರು ಸ್ಥಳದಲ್ಲಿ ಜಮಾಯಿಸಿ ಆಕ್ರೋಶ ವ್ಯಕ್ತಪಡಿಸಿದರು. ಪಿಡಿಒ ಜಯರಾಜ್, ಬಾಲಕೃಷ್ಣ ಬಾಣಜಾಲು ಇತರರು ಇದ್ದರು.
ಪಾಲೆತ್ತಡಿ ಎಂಬಲ್ಲಿ ಸಾರ್ವಜನಿಕ ರಸ್ತೆಗೆ ಖಾಸಗಿ ವ್ಯಕ್ತಿಯೊಬ್ಬರು ಬೇಲಿ ಹಾಕಿ ಸಂಚಾರ ನಿರ್ಬಂಧಿಸಿರುವುದನ್ನು ವಿರೋಧಿಸಿ ಗ್ರಾಮಸ್ಥರು ಸ್ಥಳದಲ್ಲಿ ಜಮಾಯಿಸಿ ಆಕ್ರೋಶ ವ್ಯಕ್ತಪಡಿಸಿದರು. ಪಿಡಿಒ ಜಯರಾಜ್, ಬಾಲಕೃಷ್ಣ ಬಾಣಜಾಲು ಇತರರು ಇದ್ದರು.
Published on
ಉಪ್ಪಿನಂಗಡಿ: ಹಲವು ದಶಕಗಳಿಂದ ಸಾರ್ವಜನಿಕರು ಸಂಚರಿಸುತ್ತಿದ್ದ ನೆಲ್ಯಾಡಿ ಗ್ರಾ.ಪಂ. ವ್ಯಾಪ್ತಿಯ ಬೆಥನಿ-ಪಡ್ಡಡ್ಕ ಜಿ.ಪಂ. ರಸ್ತೆಗೆ ಪಾಲೆತ್ತಡಿ ಎಂಬಲ್ಲಿ ಖಾಸಗಿ ವ್ಯಕ್ತಿಯೊಬ್ಬರು ತಡೆಬೇಲಿ ಹಾಕಿ ರಸ್ತೆ ಬಂದ್ ಮಾಡಿದ್ದು, ಆಕ್ರೋಶಗೊಂಡ ಸ್ಥಳೀಯ ನಿವಾಸಿಗಳು ಪಂಚಾಯಿತಿ ಹಾಗೂ ಪೊಲೀಸ್ ಠಾಣೆ ಮುಂದೆ ಜಮಾಯಿಸಿ ಬೇಲಿ ತೆರವುಗೊಳಿಸುವಂತೆ ಒತ್ತಾಯಿಸಿದರು.
ಸ್ಥಳೀಯ ವ್ಯಕ್ತಿಯೊಬ್ಬರು ರಸ್ತೆಯ ಇಕ್ಕೆಲದಲ್ಲಿರುವ ಭೂಮಿ ಖರೀದಿಸಿದ್ದು, ಈ ಕಾರಣಕ್ಕೆ ಭೂಮಿಯ ಮಧ್ಯದಲ್ಲಿ ಹಾದು ಹೋಗುವ ರಸ್ತೆಯೂ ತನಗೆ ಸೇರುತ್ತದೆಂದು ರಸ್ತೆಗೆ ಬೇಲಿ ಹಾಕಿದ್ದಾರೆ. ಸರ್ಕಾರಿ ಅನುದಾನದಿಂದ ಅಭಿವೃದ್ಧಿಪಡಿಸಲಾದ ರಸ್ತೆಯನ್ನು ಏಕಾಏಕಿ ಬಂದ್ ಮಾಡಿ ಸಾರ್ವಜನಿಕರ ಸಂಚಾರಕ್ಕೆ ತಡೆಯೊಡ್ಡಿದ್ದಾರೆಂದು ಆರೋಪಿಸಿದ ಸ್ಥಳೀಯರು ಗುರುವಾರ ನೆಲ್ಯಾಡಿ ಗ್ರಾಪಂ, ನೆಲ್ಯಾಡಿ ಹೊರಠಾಣೆ ಮುಂದೆ ಜಮಾಯಿಸಿ ಬೇಲಿ ತೆರವಿಗೆ ಆಗ್ರಹಿಸಿದರು.
ಉಪ್ಪಿನಂಗಡಿ ಪೊಲೀಸ್ ಠಾಣೆ ಸಬ್‌ಇನ್‌ಸ್ಪೆಕ್ಟರ್ ಸುತೇಶ್ ಕೆ.ಪಿ., ನೆಲ್ಯಾಡಿ ಗ್ರಾಪಂ ಪಿಡಿಒ ಜಯರಾಜ್, ಗ್ರಾಮ ಆಡಳಿತಾಧಿಕಾರಿ ಬಸವರಾಜು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಘಟನಾ ಸ್ಥಳಕ್ಕೆ ಆಗಮಿಸಿದ ಜಾಗದ ಮಾಲೀಕರು, ಸದರಿ ರಸ್ತೆ ತನ್ನ ಪಟ್ಟಾ ಜಾಗದಲ್ಲಿ ಹಾದುಹೋಗಿದೆ. ಅಲ್ಲದೆ ರಸ್ತೆಯ ಇನ್ನೊಂದು ಬದಿಯಲ್ಲಿರುವ ಖಾಸಗಿ ಜಮೀನಿನವರೂ ನಮ್ಮ ಪಟ್ಟಾ ಜಾಗ ಒತ್ತುವರಿ ಮಾಡಿಕೊಂಡಿದ್ದಾರೆ. ಈ ಒತ್ತುವರಿ ತೆರವುಗೊಂಡಲ್ಲಿ ರಸ್ತೆಯನ್ನು ಬಿಟ್ಟುಕೊಡುವುದಾಗಿ ಹೇಳಿದರು.
ಗ್ರಾ.ಪಂ. ಪಿಡಿಒ ಜಯರಾಜ್, ಜಿ.ಪಂ. ಮಾಜಿ ಸದಸ್ಯ ಬಾಲಕೃಷ್ಣ ಬಾಣಜಾಲು, ಭೂ ನ್ಯಾಯಮಂಡಳಿ ಸದಸ್ಯ ಅಬ್ರಹಾಂ ಪಿ.ಕೆ., ನೆಲ್ಯಾಡಿ ಗ್ರಾ.ಪಂ. ಮಾಜಿ ಅಧ್ಯಕ್ಷ ಸಲಾಂ ಬಿಲಾಲ್, ಮಾಜಿ ಸದಸ್ಯ ಮೊಹಮ್ಮದ್ ಇಕ್ಬಾಲ್ ಮತ್ತಿತರರು ಜಾಗದ ಮಾಲೀಕರ ಜತೆ ಮಾತುಕತೆ ನಡೆಸಿ, ಕೊನೆಗೆ ಸಮಸ್ಯೆಯನ್ನು ಸೌಹಾರ್ದಯುತವಾಗಿ ಬಗೆಹರಿಸಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net