ಕಾಯ್ನಲು ಶಾಲೆ ಮುಚ್ಚುವ ಆತಂಕ

ಕಾಯಂ ಶಿಕ್ಷಕರಿಲ್ಲದೆ ಸಮಸ್ಯೆ ಎದುರಿಸುತ್ತಿರುವ ಇನ್ನಾ ಕಾಯ್ನಲು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ.
ಕಾಯಂ ಶಿಕ್ಷಕರಿಲ್ಲದೆ ಸಮಸ್ಯೆ ಎದುರಿಸುತ್ತಿರುವ ಇನ್ನಾ ಕಾಯ್ನಲು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ.
Published on
ಹರಿಪ್ರಸಾದ್ ನಂದಳಿಕೆ ಕಾರ್ಕಳ
ಒಂದು ಕಾಲದಲ್ಲಿ ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯೆ ನೀಡಿದ ವಿದ್ಯಾ ದೇಗುಲದಲ್ಲಿ ಎಲ್ಲ ಸೌಕರ್ಯಗಳು, ಊರವರ ಪ್ರೀತಿ, ದಾನಿಗಳ ಉದಾರ ಸಹಾಯಹಸ್ತವಿದ್ದರೂ ಕಾಯಂ ಶಿಕ್ಷಕರ ಕೊರತೆಯಿಂದಾಗಿ ಶಾಲೆ ಮುಚ್ಚುವ ಆತಂಕ ಎದುರಾಗಿದೆ. ತಾಲೂಕಿನ ಇನ್ನಾ ಗ್ರಾಮದ ಕಾಯ್ನಲು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶೋಚನೀಯ ಸ್ಥಿತಿಯಿದು.
ಈ ಶಾಲೆಯಲ್ಲಿ ಒಂದರಿಂದ 5ರವರೆಗೆ ತರಗತಿಗಳಿವೆ. ಕಳೆದ ಹಲವು ವರ್ಷಗಳಿಂದ ಶಿಕ್ಷಕರ ಕೊರತೆಯ ಕಾರಣದಿಂದ ವಿದ್ಯಾರ್ಥಿಗಳ ಸಂಖ್ಯೆ ಕುಸಿದು ಈಗ ಪ್ರಸ್ತುತ 12 ವಿದ್ಯಾರ್ಥಿಗಳಿದ್ದಾರೆ. ಸರ್ಕಾರ ಒಂದು ಶಾಲೆಯಲ್ಲಿ ಒಬ್ಬ ವಿದ್ಯಾರ್ಥಿ ಇದ್ದರೂ ಶಿಕ್ಷಕನನ್ನು ನೀಡಬೇಕೆನ್ನುವ ನಿಯಮವಿದ್ದರೂ ಇಲ್ಲಿ ಕಾಯಂ ಶಿಕ್ಷಕರೇ ಇಲ್ಲ. ಆದರೂ ಇಲಾಖೆ ನೀಡಿದ ಇಬ್ಬರು ಅತಿಥಿ ಶಿಕ್ಷಕರು ಪ್ರಾಮಾಣಿಕವಾಗಿ ಶಿಕ್ಷಣ ನೀಡುತ್ತಿದ್ದಾರೆ.
1958ರಲ್ಲಿ ಪ್ರಾರಂಭಗೊಂಡ ಇನ್ನಾ ಕಾಯ್ನಲು ಶಾಲೆಯಲ್ಲಿ ಕಲಿತವರು ಉನ್ನತ ಸ್ಥಾನದಲ್ಲಿದ್ದಾರೆ. ದೇಶ ವಿದೇಶದಲ್ಲಿ ಉನ್ನತ ಹುದ್ದೆಯಲ್ಲಿದ್ದಾರೆ ಒಂದಷ್ಟು ಇಲ್ಲಿನ ಹಳೇ ವಿದ್ಯಾರ್ಥಿಗಳು ಉದ್ಯಮಿಗಳಾಗಿದ್ದಾರೆ. ಅವರು ಶಾಲೆಯ ಉಳಿವಿಗೆ ಭಾವನಾತ್ಮಕವಾಗಿ ಇಂದಿಗೂ ಸ್ಪಂದಿಸುತ್ತಿದ್ದಾರೆ. ಆದರೆ ವಿವಿಧ ಕಾರಣಗಳಿಂದಾಗಿ ಇತರ ಸರ್ಕಾರಿ ಕನ್ನಡ ಶಾಲೆಗಳಂತೆ ಮಕ್ಕಳ ಕೊರತೆ ಜತೆಗೆ ಶಿಕ್ಷಕರ ಕೊರತೆಯೂ ಬಾಧಿಸಿ ಶಾಲೆಗೆ ಶಾಶ್ವತ ಬೀಗ ಬೀಳುವ ದಿನಗಳು ಇನ್ನೇನೂ ದೂರ ಉಳಿದಿಲ್ಲ.

ದಾನಿಗಳ ಸಹಕಾರ

ಶಾಲೆಯ ಹಳೇ ವಿದ್ಯಾರ್ಥಿ, ಮುಂಬೈ ಉದ್ಯಮಿ ಇನ್ನಾ ಬೀಡು ರವೀಂದ್ರ ಶೆಟ್ಟಿ ಶಾಲೆಯ ಅಭಿವೃದ್ಧಿಗೆ ಹಲವು ಕೊಡುಗೆ ನೀಡಿದ್ದಾರೆ. ಸರ್ಕಾರ ಬಿಸಿಯೂಟ ಆರಂಭಿಸುವ ಹಲವು ವರ್ಷಗಳ ಮೊದಲೇ ಈ ಶಾಲೆಯಲ್ಲಿ ಮಧ್ಯಾಹ್ನದ ಊಟದ ವ್ಯವಸ್ಥೆ ಇಲ್ಲಿನ ದಾನಿಗಳು ಮಾಡಿದ್ದರು. ಮಕ್ಕಳ ಪ್ರತಿಭೆ ಗುರುತಿಸಿ ಗೌರವಿಸುವ ಕೆಲಸದ ಜತೆಗೆ ಶಾಲೆಯ ಉಳಿವಿಗಾಗಿ ಹಳೇ ವಿದ್ಯಾರ್ಥಿಗಳು ನಿರಂತರ ಶ್ರಮಿಸುತ್ತಿದ್ದಾರೆ. ಮುಂಡ್ಕೂರು ಸೊಸೈಟಿಯ ಸಿಎ ರಮೇಶ್ ಶೆಟ್ಟಿ, ಸುನೀಲ್ ಶೆಟ್ಟಿ, ಸುಧಾಕರ ಶೆಟ್ಟಿ, ಅಶೋಕ ಶೆಟ್ಟಿ, ಭಾಸ್ಕರ ಶೆಟ್ಟಿ ಸಹಿತ ದಾನಿಗಳು ಪೂರಕ ಸಹಕಾರ ನೀಡುತ್ತಿದ್ದಾರೆ. ಆದರೂ ಈ ಶಾಲೆಯನ್ನು ಮುಂದಿನ ದಿನಗಳಲ್ಲಿ ಉಳಿಸುಕೊಳ್ಳುವುದೇ ದೊಡ್ಡ ಸವಾಲಾಗಿದೆ.

ಶೂನ್ಯ ದಾಖಲಾತಿ

ಈ ಸಾಲಿನಲ್ಲಿ ಶೈಕ್ಷಣಿಕ ವರ್ಷದಲ್ಲಿ 1ನೇ ತರಗತಿಗೆ ಹೊಸ ದಾಖಲಾತಿ ನಡೆದಿಲ್ಲ. 2ನೇ ತರಗತಿಯಲ್ಲಿ 4, 3ನೇ ತರಗತಿಯಲ್ಲಿ 3, 4 ತರಗತಿಯಲ್ಲಿ 4, 5ನೇ ತರಗತಿಯಲ್ಲಿ ಒಬ್ಬ ಸೇರಿ ಒಟ್ಟು 12 ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ಇಬ್ಬರು ಅತಿಥಿ ಶಿಕ್ಷಕರೇ ಎಲ್ಲ ಜವಾಬ್ದಾರಿ ನೋಡಿಕೊಳ್ಳಬೇಕಾಗಿದೆ. ಪ್ರಸಕ್ತ ವರ್ಷದಲ್ಲಿ ದಾಖಲಾತಿ ಇಲ್ಲದ ಪರಿಣಾಮ ಹಾಗೂ ಕಾಯಂ ಶಿಕ್ಷಕರ ನೇಮಕಾತಿಯೂ ಇಲ್ಲದೆ ಮುಂದಿನ ಕೆಲವೇ ಸಮಯದಲ್ಲಿ ಈ ಶಾಲೆ ಇತಿಹಾಸದ ಪುಟ ಸೇರುವ ಎಲ್ಲ ಲಕ್ಷಣಗಳು ಗೋಚರಿಸುತ್ತಿವೆ. ಹೀಗಾಗಿ ಶಿಕ್ಷಣ ಇಲಾಖೆ ಈ ಶಾಲೆಗೆ ಕಾಯಂ ಶಿಕ್ಷಕರನ್ನು ನೀಡುವ ಮೂಲಕ ಕನ್ನಡ ಶಾಲೆ ಉಳಿಸುವಲ್ಲಿ ಶ್ರಮಿಸಬೇಕಾಗಿದೆ. ಕಳೆದ ಶೈಕ್ಷಣಿಕ ವರ್ಷದ ಕೊನೆಗೆ ಇಲ್ಲಿನ ಮುಖ್ಯ ಶಿಕ್ಷಕಿಯನ್ನು ನಂದಳಿಕೆ ಶಾಲೆಗೆ ವರ್ಗಾಯಿಸಿದ್ದು, ಇಲ್ಲಿ ಶೂನ್ಯ ಶಿಕ್ಷಕರ ಸ್ಥಿತಿ ಇದೆ. ಆದರೂ ಇಲಾಖೆ ಇಬ್ಬರು ಅತಿಥಿ ಶಿಕ್ಷಕರನ್ನು ನೀಡಿದ್ದರಿಂದ ಒಂದಿಷ್ಟು ನಿಟ್ಟುಸಿರು ಬಿಡುವಂತಾಗಿದೆ.

ಪ್ರತಿಭಾವಂತ ವಿದ್ಯಾರ್ಥಿಗಳು

ಕೇವಲ ಅಕ್ಷರಾಭ್ಯಾಸವಷ್ಟೇ ಅಲ್ಲದೆ ಈ ಶಾಲೆಯಲ್ಲಿ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ವಿಶೇಷ ಒತ್ತು ನೀಡಲಾಗುತ್ತಿದೆ. ಯಕ್ಷಗಾನ, ಸಂಗೀತ, ಕಲೆ, ನೃತ್ಯ ಸೇರಿದಂತೆ ಇಲ್ಲಿ ವಿದ್ಯಾರ್ಥಿಗಳಿಗೆ ತರಬೇತಿ ನಿರಂತರವಾಗಿದೆ. ಕಳೆದ ವರ್ಷ ಇಲ್ಲಿನ ವಿದ್ಯಾರ್ಥಿಗಳು ಪ್ರದರ್ಶಿಸಿದ್ದ ಬಡಗುತಿಟ್ಟಿನ ಯಕ್ಷಗಾನ ಹಲವು ಕಡೆ ಬೇಡಿಕೆಯ ಪ್ರದರ್ಶನ ಕಂಡಿದೆ. ಈ ಬಾರಿ ತೆಂಕುತಿಟ್ಟಿನ ಯಕ್ಷಗಾನ ತರಬೇತಿ ನಡೆಯುತ್ತಿದೆ. ದಾನಿಗಳ ನೆರವಿನಿಂದ ಮಕ್ಕಳ ಪ್ರತಿಭೆಗೆ ಪ್ರೋತ್ಸಾಹವನ್ನು ನೀಡುವ ಕೆಲಸವಾಗುತ್ತಿದೆ.

ಶಿಥಿಲ ಕಟ್ಟಡದಲ್ಲೇ ಪಾಠ

ಹಲವು ವರ್ಷಗಳ ಹಿಂದೆ ನಿರ್ಮಾಣವಾದ ಈ ಶಾಲೆಯ ಗೋಡೆ, ಛಾವಣಿ ಶಿಥಿಲವಾಗಿದೆ. ಕೆಲವು ಕಡೆ ವಿದ್ಯಾರ್ಥಿಗಳು ಓಡಾಡದಂತೆ ಬಟ್ಟೆಯ ರಿಬ್ಬನ್ ಹಗ್ಗ ಕಟ್ಟಲಾಗಿದೆ. ಈಗಾಗಲೇ ಇಲಾಖೆಗೆ ಮನವಿ ಸಲ್ಲಿಸಲಾಗಿದ್ದು, ಶೀಘ್ರ ದುರಸ್ತಿಯ ಭರವಸೆ ದೊರಕಿದೆ. ಆದರೂ ಇದೀಗ ಸಣ್ಣ ಕೋಣೆಯ ನಡುವೆ 12 ವಿದ್ಯಾರ್ಥಿಗಳ ಭವಿಷ್ಯ ರೂಪಿಸಲಾಗುತ್ತಿದೆ. ಯಾವುದೇ ಸಂದರ್ಭದಲ್ಲಿ ಈ ಶಾಲೆಯ ಒಂದೊಂದೇ ಪಾರ್ಶ್ವ ಕುಸಿಯುವ ಭೀತಿಯೂ ಎದುರಾಗಿದೆ. ಎಸ್‌ಡಿಎಂಸಿ ಅಧ್ಯಕ್ಷೆ ಮಲ್ಲಿಕಾ ಆಚಾರ್ಯ, ಇತರ ಸದಸ್ಯರು, ಹಳೇ ವಿದ್ಯಾರ್ಥಿಗಳು, ಶಿಕ್ಷಣ ಪ್ರೇಮಿಗಳು ಬೆಂಬಲ ನೀಡುತ್ತಿರುವ ಕಾಯ್ನಲು ಶಾಲೆಯನ್ನು ಕಾಣೆಯಾಗದಂತೆ ಕಾಯಬೇಕಾಗಿದೆ.

ಅದೆಷ್ಟೋ ಗ್ರಾಮದ ಜನರಿಗೆ ಅಕ್ಷರ ಕಲಿಸಿ ಉನ್ನತ ಸ್ಥಾನಕ್ಕೇರಿಸಿದ ಈ ಕಾಯ್ನಲು ಶಾಲೆ ಮುಚ್ಚಿಹೋಗವ ಕಾಲ ಸನಿಹವಾಗುತ್ತಿರುವುದು ಅತ್ಯಂತ ನೋವು ತರಿಸಿದೆ. ಸರ್ಕಾರ ಕೂಡಲೇ ಕಾಯಂ ಶಿಕ್ಷಕರನ್ನು ನಿಯೋಜಿಸುವ ಮೂಲಕ ಗ್ರಾಮೀಣ ಭಾಗದ ಈ ವಿದ್ಯಾದೇಗುಲವನ್ನು ಉಳಿಸಬೇಕು.

— ಮಲ್ಲಿಕಾ ಆಚಾರ್ಯ ಎಸ್‌ಡಿಎಂಸಿ ಅಧ್ಯಕ್ಷೆ

ಒಂದು ಅಕ್ಷರ ಕಲಿಸಿದ ಶಾಲೆ ಅಳಿದು ಹೋದರೆ ಇಡೀ ಗ್ರಾಮದ ಸಂಸ್ಕೃತಿಯೇ ಕಣ್ಮರೆಯಾದಂತೆ. ಸರ್ಕಾರ ಮತ್ತು ಶಿಕ್ಷಣ ಇಲಾಖೆ ಎಚ್ಚೆತ್ತುಕೊಂಡು ಇನ್ನಾ ಕಾಯ್ನಲು ಸರ್ಕಾರಿ ಶಾಲೆಯನ್ನು ಉಳಿಸಿ, ಬೆಳೆಸಲು ತುರ್ತು ಕ್ರಮ ಕೈಗೊಳ್ಳಬೇಕಿದೆ.

— ಇನ್ನಾ ಬೀಡು ರವೀಂದ್ರ ಶೆಟ್ಟಿ ಹಳೇ ವಿದ್ಯಾರ್ಥಿ, ಮುಂಬೈ ಉದ್ಯಮಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net