ಪಾಲಕ್ಕಾಡ್ ವಿಭಾಗಕ್ಕೆ ನಷ್ಟದ ಭೀತಿ

 ಮಂಜೇಶ್ವರ ರೈಲ್ವೆ ನಿಲ್ದಾಣ.
ಮಂಜೇಶ್ವರ ರೈಲ್ವೆ ನಿಲ್ದಾಣ.
Published on

ವಿಜಯವಾಣಿ ಸುದ್ದಿಜಾಲ ಮಂಜೇಶ್ವರ

ಪಾಲಕ್ಕಾಡ್ ರೈಲ್ವೆ ವಿಭಾಗದಿಂದ ಮಂಗಳೂರನ್ನು ಬೇರ್ಪಡಿಸಿ ನೈಋತ್ಯ ರೈಲ್ವೆ(ಮೈಸೂರು ವಿಭಾಗ) ಅಡಿಯಲ್ಲಿ ತರುವ ರೈಲ್ವೆ ಮಂಡಳಿ ನಿರ್ಧಾರ ಬಿಕ್ಕಟ್ಟನ್ನು ಸೃಷ್ಟಿಸುವ ಭೀತಿ ಎದುರಾಗಿದೆ. ಅ.1ರಿಂದ ಮಂಗಳೂರು ಪ್ರದೇಶವನ್ನು ಸಂಪೂರ್ಣವಾಗಿ ಬೇರ್ಪಡುವುದರೊಂದಿಗೆ ಪಾಲಕ್ಕಾಡ್ ವಿಭಾಗದ ಪ್ರಮುಖ ಆದಾಯದ ಮೂಲಗಳಲ್ಲಿ ಒಂದಾದ ಮತ್ತು ನಿರ್ಣಾಯಕ ಮೂಲಸೌಕರ್ಯ ನಷ್ಟಗೊಳ್ಳಲಿದೆ.
ಮಂಗಳೂರು ಸೆಂಟ್ರಲ್ ಮತ್ತು ಜಂಕ್ಷನ್‌ನಲ್ಲಿರುವ ಮೂಲಸೌಕರ್ಯ ಇನ್ನು ಮುಂದೆ ವಿಭಾಗದ ನಿಯಂತ್ರಣದಲ್ಲಿರುವುದಿಲ್ಲ. ಹೊಸ ರೈಲು ಸೇವೆ, ರೇಕ್ ನಿಲ್ಲಿಸುವುದು ಮತ್ತು ನಿರ್ವಹಣೆಗೆ ಸೌಲಭ್ಯಗಳ ವಿಷಯದಲ್ಲಿ ಇದು ವಿಭಾಗಕ್ಕೆ ಗಂಭೀರ ಸವಾಲನ್ನು ಒಡ್ಡಲಿದೆ.
ಪ್ರಸ್ತುತ ವಿಭಾಗ ಪಾಲಕ್ಕಾಡ್ ಪೇಟೆಯಲ್ಲಿ ಕೇವಲ ಒಂದು ಪೀಟ್ ಲೈನ್ ಹೊಂದಿದೆ. ಶೋರ್ನೂರ್ ಮತ್ತು ಕೋಯಿಕ್ಕೋಡ್‌ನಲ್ಲಿರುವ ಸ್ಟೇಬ್ಲಿಂಗ್ ಲೈನ್‌ಗಳು ಪೂರ್ಣ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸುತ್ತಿವೆ. ರೈಲ್ವೆ ಮಂಡಳಿ ಕೇರಳಕ್ಕೆ ಹೊಸ ರೈಲುಗಳನ್ನು ಅನುಮತಿಸಲು ಸಿದ್ಧವಾಗಿದ್ದರೂ ಅವುಗಳ ಸೇವೆ ಕೊನೆಗೊಳಿಸಲು ಅಥವಾ ರೇಕ್‌ಗಳನ್ನು ನಿಲ್ಲಿಸಲು ಸ್ಥಳವಿಲ್ಲದಿರುವುದು ಉತ್ತರ ಕೇರಳದ ರೈಲ್ವೆ ಅಭಿವೃದ್ಧಿಗೆ ಪ್ರಮುಖ ಹಿನ್ನಡೆಯಾಗಲಿದೆ.

ಪಾಲಕ್ಕಾಡ್ ವಿಭಾಗದ ಇತಿಹಾಸ

ಪಾಲಕ್ಕಾಡ್ ವಿಭಾಗ ಸ್ವಾತಂತ್ರೃ ನಂತರದ ಭಾರತದ ಅತ್ಯಂತ ಹಳೇ ರೈಲ್ವೆ ವಿಭಾಗಗಳಲ್ಲಿ ಒಂದಾಗಿದೆ. ಇದು ಕೇರಳ ರಾಜ್ಯ ರಚನೆಗೆ ಮೂರು ತಿಂಗಳ ಮೊದಲು 1956 ಆ.31ರಂದು ರಚನೆಯಾಯಿತು. 1,247 ಕಿ.ಮೀ. ಹಳಿ ಉದ್ದ ಹೊಂದಿದೆ. 1970 ಅ.2ರಂದು ತಿರುವನಂತಪುರಂ ವಿಭಾಗ ಮತ್ತು 2007 ನ.1ರಂದು ಸೇಲಂ ವಿಭಾಗ ರಚನೆಯಾದಾಗ ಪಾಲಕ್ಕಾಡ್ ದೊಡ್ಡ ಹಿನ್ನಡೆ ಎದುರಿಸಿತು. ಈಗ ಅ.1ರಿಂದ ಮಂಗಳೂರು ಪ್ರದೇಶದಲ್ಲಿ ಇನ್ನೂ 43 ಕಿ.ಮೀ. ರೈಲ್ವೆ ಹಳಿ ಕಳೆದುಹೋಗಲಿದೆ.

ಆರ್ಥಿಕ ಕುಸಿತ

ಪಾಲಕ್ಕಾಡ್ ವಿಭಾಗ ಮಂಗಳೂರು ಬಂದರಿನಿಂದ ಬರುವ ಸರಕು ಸಾಗಣೆಯ 90 ಪ್ರತಿಶತದಷ್ಟು ಆದಾಯ ಮಂಗಳೂರು ಪ್ರದೇಶದಿಂದ ಪಡೆಯುತ್ತಿತ್ತು. ಈ ವಿಭಾಗದೊಂದಿಗೆ ಅದರ ವಾರ್ಷಿಕ ಆದಾಯದ ಅರ್ಧದಷ್ಟು ನಷ್ಟವಾಗುತ್ತದೆ. ಜತೆಗೆ 100ಕ್ಕೂ ಹೆಚ್ಚು ಉದ್ಯೋಗಿಗಳ ಸೇವೆಗಳನ್ನು ನೈಋತ್ಯ ರೈಲ್ವೆಗೆ ವರ್ಗಾಯಿಸಲಾಗುತ್ತದೆ. ರೈಲ್ವೆಯ ಇತ್ತೀಚಿನ ನೀತಿಗಳಲ್ಲಿ ಆದಾಯ ಮತ್ತು ಸರಕು ಸಾಗಣೆಗೆ ಹೆಚ್ಚಿನ ಆದ್ಯತೆ ನೀಡುವ ವಿಧಾನ ಅಳವಡಿಸಿಕೊಳ್ಳಲಾಗಿದೆ. ಆದ್ದರಿಂದ ಭವಿಷ್ಯದಲ್ಲಿ ಪಾಲಕ್ಕಾಡ್ ವಿಭಾಗ ವಿಸರ್ಜಿಸಿ ಅದರ ಆರ್ಥಿಕ ದೌರ್ಬಲ್ಯದಿಂದಾಗಿ ತಿರುವನಂತಪುರಂ ವಿಭಾಗದೊಂದಿಗೆ ವಿಲೀನಗೊಳಿಸಬಹುದು ಎಂಬ ಗಂಭೀರ ಕಳವಳ ರೈಲ್ವೆ ವಲಯಗಳಲ್ಲಿದೆ.

ಮಂಜೇಶ್ವರ, ಕುಂಬಳೆಯನ್ನು ಪರಿಗಣಿಸಬೇಕು

ಬಿಕ್ಕಟ್ಟನ್ನು ನಿವಾರಿಸಲು ಕಾಸರಗೋಡಿನ ಕುಂಬಳೆ ಮತ್ತು ಮಂಜೇಶ್ವರದಂಥ ನಿಲ್ದಾಣಗಳನ್ನು ಹೆಚ್ಚು ಪ್ರಮುಖ ರೈಲ್ವೆ ಕೇಂದ್ರಗಳಾಗಿ ಅಭಿವೃದ್ಧಿಪಡಿಸಬೇಕೆಂದು ರೈಲು ಪ್ರಯಾಣ ಸಂಸ್ಥೆಗಳು ಒತ್ತಾಯಿಸುತ್ತಿವೆ. ಮಂಜೇಶ್ವರ ರೈಲ್ವೆ ಪ್ರಯಾಣಿಕರ ಸಂಘದ ಅಧ್ಯಕ್ಷ ಕೆ.ಕೆ.ಇಬ್ರಾಹಿಂ ಮಂಜೇಶ್ವರವನ್ನು ಸಣ್ಣ ಟರ್ಮಿನಲ್ ಆಗಿ ಅಭಿವೃದ್ಧಿಪಡಿಸಲು ಸಾಕಷ್ಟು ಸ್ಥಳಾವಕಾಶವಿದೆ. ಬಳಕೆಯಾಗದ ಬಿಎಸ್‌ಎನ್‌ಎಲ್ ಕ್ವಾರ್ಟರ್ಸ್ ಅನ್ನು ನೌಕರರ ವಸತಿಗಾಗಿ ತಾತ್ಕಾಲಿಕವಾಗಿ ಬಳಸಬಹುದು ಎಂದು ಸಲಹೆ ನೀಡಿದ್ದಾರೆ.

ಕೊಚ್ಚುವೇಲಿ ಮಾದರಿ ಅಭಿವೃದ್ಧಿ

ಕುಂಬಳೆ ರೈಲ್ವೆ ನಿಲ್ದಾಣದ ಪಕ್ಕದಲ್ಲಿ ರೈಲ್ವೆಗೆ 30 ಎಕರೆಗಳಿಗಿಂತ ಹೆಚ್ಚು ಭೂಮಿ ಇದೆ. ಕಾಸರಗೋಡು ನಿಲ್ದಾಣದ ಸ್ಥಳಾವಕಾಶದ ಕೊರತೆ ನಿವಾರಿಸಲು ಕುಂಬಳೆಯನ್ನು ಕೊಚ್ಚುವೇಲಿ ಮಾದರಿಯಲ್ಲಿ ಸೆಟಲೈಟ್ ನಿಲ್ದಾಣವಾಗಿ ಅಭಿವೃದ್ಧಿಪಡಿಸಬಹುದು ಎಂದು ಕಾಸರಗೋಡು ಜಿಲ್ಲಾ ರೈಲ್ವೆ ಪ್ರಯಾಣಿಕರ ಸಂಘ ಅಧ್ಯಕ್ಷ ಆರ್.ಪ್ರಶಾಂತ್ ಮತ್ತು ಸಂಚಾಲಕ ನಿಸಾರ್ ಪೆರುವಾಡ್ ಹೇಳುತ್ತಾರೆ.

ಪಾಲಕ್ಕಾಡ್ ವಿಭಾಗವನ್ನು ವಿಭಜಿಸುವ ರೈಲ್ವೆ ನಿರ್ಧಾರ ತಕ್ಷಣ ಪರಿಶೀಲಿಸಬೇಕು. ಕೇರಳದ ಹಿತಾಸಕ್ತಿಗಳನ್ನು ಪರಿಗಣಿಸದೆ ಮಂಗಳೂರು ಸೆಂಟ್ರಲ್ ನಿಲ್ದಾಣವನ್ನು ಪಾಲಕ್ಕಾಡ್ ವಿಭಾಗದಿಂದ ಏಕಪಕ್ಷೀಯವಾಗಿ ಹೊರಗಿಡುವುದು ಆಕ್ಷೇಪಾರ್ಹ. ಪಾಲಕ್ಕಾಡ್ ವಿಭಾಗದ ಆದಾಯದಲ್ಲಿನ ಗಮನಾರ್ಹ ಕಡಿತವು ಭವಿಷ್ಯದ ಅಭಿವೃದ್ಧಿ ಚಟುವಟಿಕೆಗಳ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು ಮತ್ತು ಕೇಂದ್ರ ರೈಲ್ವೆ ಸಚಿವಾಲಯದ ಕ್ರಮ ಸ್ವೀಕಾರಾರ್ಹವಲ್ಲ.

— ಕಲ್ಲಟ್ರ ಮಾಹಿನ್, ಶಾಸಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net