ಅಂಗನವಾಡಿ ಸ್ಥಳಾಂತರ ಭೀತಿ!

ಸರ್ಕಾರಿ ಜಾಗ ಇಲ್ಲದೆ ತೊಂದರೆ
ಮಲ್ಯರಬೆಟ್ಟು ಅಂಗನವಾಡಿ ಕೇಂದ್ರ
ಮಲ್ಯರಬೆಟ್ಟು ಅಂಗನವಾಡಿ ಕೇಂದ್ರ
Published on: 

ರಾಘವೇಂದ್ರ ಪೈ ಗಂಗೊಳ್ಳಿ

ಗಂಗೊಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಮಲ್ಯರಬೆಟ್ಟು ಅಂಗನವಾಡಿ ಕೇಂದ್ರ ಸ್ವಂತ ನಿವೇಶನ ಇಲ್ಲದೆ ಸ್ಥಳಾಂತರದ ಭೀತಿ ಎದುರಿಸುತ್ತಿದೆ.

ಗಂಗೊಳ್ಳಿ ಚರ್ಚ್ ರಸ್ತೆಯ ಸಂತ ಜೋಸೆಫರ ಹಿರಿಯ ಪ್ರಾಥಮಿಕ ಶಾಲೆ ವಠಾರದಲ್ಲಿ ಶಾಲೆ ಆಡಳಿತ ಮಂಡಳಿ ಒಪ್ಪಿಗೆ ಮೇರೆಗೆ 2016ರ ಅಕ್ಟೋಬರ್ 2ರಂದು ಅಂಗನವಾಡಿ ಕೇಂದ್ರ ಆರಂಭಿಸಲಾಯಿತು. ಆದರೆ ಇದೀಗ ಅಂಗನವಾಡಿ ತೆರವುಗೊಳಿಸುವಂತೆ ಪರೋಕ್ಷ ಒತ್ತಡಗಳು ಹೆಚ್ಚಾಗುತ್ತಿವೆ. ಅಂಗನವಾಡಿ ಕಿಟಕಿ ಗಾಜು ಪುಡಿ ಮಾಡಿರುವುದು, ಕೇಂದ್ರಕ್ಕೆ ನೀರು ಸರಬರಾಜು ಸ್ಥಗಿತ, ವಠಾರದಲ್ಲಿ ತ್ಯಾಜ್ಯ ವಿಲೇವಾರಿ ಮಾಡುವ ಮೂಲಕ ಪರೋಕ್ಷವಾಗಿ ಅಂಗನವಾಡಿಯನ್ನು ಶಾಲೆ ವಠಾರದಿಂದ ತೆರವುಗೊಳಿಸುವ ಪ್ರಯತ್ನ ನಡೆಯುತ್ತಿದೆ ಎಂಬ ಆರೋಪ ಕೇಳಿಬಂದಿದೆ.

ಅಂಗನವಾಡಿ ಕೇಂದ್ರ ತೆರವುಗೊಳಿಸುವಂತೆ ಶಾಲೆ ಆಡಳಿತ ಮಂಡಳಿ ಮೂರ‌್ನಾಲ್ಕು ವರ್ಷಗಳ ಹಿಂದೆ ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಸ್ಥಳೀಯ ಗ್ರಾಮ ಪಂಚಾಯಿತಿಗೆ ಮನವಿ ಸಲ್ಲಿಸಿತ್ತು. ಆದರೆ ಸ್ಥಳಾಂತರಕ್ಕೆ ಸೂಕ್ತ ನಿವೇಶನ ಇಲ್ಲದಿರುವುದರಿಂದ ಮತ್ತು ನಿವೇಶನ ದೊರೆಯುವವರೆಗೆ ಈ ಶಾಲೆಯಲ್ಲಿ ಅಂಗನವಾಡಿ ಕೇಂದ್ರ ನಡೆಸಲು ಶಾಲೆ ಆಡಳಿತ ಮಂಡಳಿ ಒಪ್ಪಿಗೆ ಸೂಚಿಸಿತ್ತು.

ಇದೇ ಶಾಲೆ ವಠಾರದಲ್ಲಿ ಅಂಗನವಾಡಿ ಕೇಂದ್ರದ ಎದುರು ನಿರ್ಮಿಸಲಾಗಿದ್ದ ಅಕ್ಷರ ದಾಸೋಹ ಕೊಠಡಿಯನ್ನು ನೀಡುವಂತೆ ಶಿಕ್ಷಣ ಇಲಾಖೆಗೆ ಮನವಿ ಮಾಡಿಕೊಳ್ಳಲಾಗಿತ್ತಾದರೂ ಈ ಕಟ್ಟಡವನ್ನು ನೀಡಲು ಶಾಲೆ ಆಡಳಿತ ಮಂಡಳಿ ಹಿಂದೇಟು ಹಾಕುತ್ತಿದೆ. ಹೀಗಾಗಿ ಮಲ್ಯರಬೆಟ್ಟು ಅಂಗನವಾಡಿ ಕೇಂದ್ರ ಸ್ಥಳಾಂತರ ಇಲಾಖೆಗೆ ಬಿಸಿತುಪ್ಪವಾಗಿ ಪರಿಣಮಿಸಿದೆ. ಈ ಅಂಗನವಾಡಿಯಲ್ಲಿ 28 ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ.

ಮಲ್ಯರಬೆಟ್ಟುವಿನಲ್ಲಿ 10 ವರ್ಷಗಳ ಹಿಂದೆ ಆರಂಭಿಸಲಾಗಿದ್ದ ಅಂಗನವಾಡಿ ಕೇಂದ್ರವನ್ನು ಸ್ಥಳಾಂತರಿಸುವಂತೆ ಒತ್ತಡ ಹೇರಲಾಗುತ್ತಿದೆ. ಅಂಗನವಾಡಿ ಕೇಂದ್ರವನ್ನು ಶಾಲಾ ಕಟ್ಟಡದಲ್ಲಿ ಆರಂಭಿಸಲು ಒಪ್ಪಿಗೆ ನೀಡಿದ ಬಳಿಕವಷ್ಟೇ ಕೇಂದ್ರ ತೆರೆಯಲಾಗಿದೆ. ಇದೀಗ ಬೇರೆ ಕಾರಣ ನೀಡಿ ಅಂಗನವಾಡಿ ಕಟ್ಟಡ ಬಿಟ್ಟು ಕೊಡುವಂತೆ ಹೇಳುತ್ತಿರುವುದು ಸರಿಯಲ್ಲ. ಬದಲಿ ವ್ಯವಸ್ಥೆ ಆಗುವ ತನಕ ಬಿಟ್ಟು ಹೋಗುವ ಪ್ರಶ್ನೆಯೇ ಇಲ್ಲ.
ಫಿಲೋಮಿನಾ ಫರ್ನಾಂಡಿಸ್ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರ ಸಂಘ ಜಿಲ್ಲಾಧ್ಯಕ್ಷೆ
ಅಂಗನವಾಡಿ ಕೇಂದ್ರ ಸ್ಥಳಾಂತರ ವಾಡಲು ಸೂಕ್ತ ನಿವೇಶನ ದೊರೆಯುವ ತನಕ ಈ ಶಾಲೆಯಲ್ಲಿ ಅಂಗನವಾಡಿ ಕೇಂದ್ರ ನಡೆಸಲು ಸಂಬಂಧಪಟ್ಟ ಶಾಲೆ ಆಡಳಿತ ಮಂಡಳಿ ಒಪ್ಪಿಗೆ ಸೂಚಿಸಿತ್ತು. ಮಲ್ಯರಬೆಟ್ಟು ಪರಿಸರದಲ್ಲಿ ಸರ್ಕಾರಿ ಸ್ಥಳ, ಕಟ್ಟಡಗಳು ಹಾಗೂ ಸ್ವಂತ ನಿವೇಶನ ಇಲ್ಲ. ಹೀಗಾಗಿ ಅಂಗನವಾಡಿ ಕೇಂದ್ರ ಸ್ಥಳಾಂತರ ಕಷ್ಟ. ಅಂಗನವಾಡಿ ಕೇಂದ್ರ ಉಳಿಸಿಕೊಳ್ಳಲು ಹೋರಾಟ ಅನಿವಾರ್ಯವಾಗಿದ್ದು, ಶೀಘ್ರ ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು.
ಕೃಷ್ಣ ಖಾರ್ವಿ ಸ್ಥಳೀಯರು