ಸ್ಟೆರ್‌ಲೈಟ್ ಕಂಪನಿ ನಡೆಗೆ ರೈತರಿಂದ ವಿರೋಧ

 ತೆಂಕಮಿಜಾರಿನಲ್ಲಿ ಸ್ಟೆರ್‌ಲೈಟ್ ಕಾಮಗಾರಿಗೆ ರೈತರು ವಿರೋಧ ವ್ಯಕ್ತಪಡಿಸಿದರು.
ತೆಂಕಮಿಜಾರಿನಲ್ಲಿ ಸ್ಟೆರ್‌ಲೈಟ್ ಕಾಮಗಾರಿಗೆ ರೈತರು ವಿರೋಧ ವ್ಯಕ್ತಪಡಿಸಿದರು.
Published on
ವಿಜಯವಾಣಿ ಸುದ್ದಿಜಾಲ ಮೂಡುಬಿದಿರೆ
ತೆಂಕಮಿಜಾರು ಗ್ರಾಮದ ಪಡೀಲು ಕೊನ್ನೆರಬೆಟ್ಟು ಪ್ರದೇಶದಲ್ಲಿ ಸಂತ್ರಸ್ತರಿಗೆ ಯಾವುದೇ ಪರಿಹಾರ ನೀಡದೇ ಸ್ಟೇರ್‌ಲೈಟ್ ಕಂಪನಿ ಟವರ್ ನಿರ್ಮಾಣಕ್ಕೆ ಪೂರಕವಾದ ಕಾಮಗಾರಿ ಆರಂಭಿಸಲು ಮುಂದಾದ ಹಿನ್ನೆಲೆಯಲ್ಲಿ ಸೋಮವಾರ ರೈತರು, ಭಾರತೀಯ ಕಿಸಾನ್ ಸಂಘದ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಕಾಮಗಾರಿ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದರು.
ಬೂಬ ಗೌಡ, ಅಪ್ಪಯ್ಯ ಗೌಡ, ಮೋನಪ್ಪ ಹಾಗೂ ಸುಂದರ ಶೆಟ್ಟಿ ಎಂಬುವರ ಜಾಗದಲ್ಲಿ ಟವರ್ ನಿರ್ಮಾಣಕ್ಕೆ ಪೂರಕವಾದ ಕಾಮಗಾರಿ ಕೈಗೊಳ್ಳಲು ಕಂಪನಿ ಮೊದಲು ಮರಗಳ ಸಮೀಕ್ಷೆ ನಡೆಸಿತ್ತು. ಇದೇ ಪ್ರದೇಶದಲ್ಲಿ ಈಗಾಗಲೇ ಟವರ್ ನಿರ್ಮಾಣಗೊಂಡಿದ್ದು, ಅದಕ್ಕೆ ಸಂಪರ್ಕವಾಗಿ ವಿದ್ಯುತ್ ತಂತಿ ಎಳೆಯುವ ಉದ್ದೇಶದಿಂದ ಈ ನಾಲ್ವರು ಸಂತ್ರಸ್ತರ ಜಾಗದಲ್ಲಿ ಕೆಲವು ಮರಗಳನ್ನು ಕಡಿಸಲು ಕಂಪನಿ ಮುಂದಾಗಿದೆ.
ಕಂಪನಿ ಅಧಿಕಾರಿಗಳಿಗೆ ಮರಗಳ ಮೌಲ್ಯ ನಿರ್ಧಾರಕ್ಕೆ ಸಂಬಂಧಿಸಿದ ದಾಖಲೆಗಳು ಹಾಗೂ ಸೂಕ್ತ ಪರಿಹಾರಧನವನ್ನು ಒದಗಿಸಿದ ಬಳಿಕವೇ ಕಾಮಗಾರಿ ನಡೆಸಲು ಅವಕಾಶ ನೀಡುವುದಾಗಿ ಸಂತ್ರಸ್ತರು ತಿಳಿಸಿದ್ದರು. ಆದರೆ ಕಂಪನಿ ಯಾವುದೇ ದಾಖಲೆ ಅಥವಾ ಪರಿಹಾರ ನೀಡದೇ ಪೊಲೀಸ್ ಪಡೆಯೊಂದಿಗೆ ಸೋಮವಾರ ಕಾಮಗಾರಿ ಆರಂಭಿಸಲು ಮುಂದಾದ ಹಿನ್ನೆಲೆಯಲ್ಲಿ ರೈತರು ಹಾಗೂ ಸಂತ್ರಸ್ತರು ತೀವ್ರ ವಿರೋಧ ವ್ಯಕ್ತಪಡಿಸಿದರು.

ಸೂಕ್ತ ದಾಖಲೆಗಳು ಹಾಗೂ ಪರಿಹಾರ ನೀಡದೇ ಕಾಮಗಾರಿ ನಡೆಸಲು ಮುಂದಾದ ಕಂಪನಿ ಮತ್ತು ಅವರಿಗೆ ರಕ್ಷಣೆಯಾಗಿ ಬಂದ ಪೊಲೀಸ್ ಇಲಾಖೆ ಕ್ರಮವನ್ನು ರೈತ ಮುಖಂಡ ಶಾಂತಿಪ್ರಸಾದ್ ಹೆಗ್ಡೆ ತರಾಟೆಗೆ ತೆಗೆದುಕೊಂಡರು.

ಸಂತ್ರಸ್ತರು ಕೇಳಿದ ದಾಖಲೆಗಳು ಹಾಗೂ ಸೂಕ್ತ ಪರಿಹಾರವನ್ನು ನೀಡಿದಲ್ಲಿ ತಮ್ಮ ಜಾಗದಲ್ಲಿ ಕಾಮಗಾರಿ ನಡೆಸಲು ಅವಕಾಶ ನೀಡುವುದಾಗಿ ಅವರು ತಿಳಿಸಿದ್ದಾರೆ.
ಜಿಲ್ಲಾ ಕಾರ್ಯದರ್ಶಿ ಪ್ರವೀಣ್ ಭಂಡಾರಿ, ಕಿಸಾನ್ ಪ್ರಮುಖರು ಹಾಗೂ ಗ್ರಾಪಂ ಸದಸ್ಯರಾದ ಹರಿಪ್ರಸಾದ್ ಶೆಟ್ಟಿ, ನೇಮಿರಾಜ್ ಶೆಟ್ಟಿ, ಗ್ರಾಮದ ಕಿಸಾನ್ ಅಧ್ಯಕ್ಷ ಹೊನ್ನಪ್ಪ ಗೌಡ, ಸಂಜೀವ ಗೌಡ, ಕಿಸಾನ್ ಪ್ರಮುಖರಾದ ಶಿವಕುಮಾರ್, ಪಡೀಲು ಕಿಸಾನ್ ಕಾರ್ಮಿಕ ಪ್ರಮುಖ ನೀತ ಗೌಡ ಪಾಲ್ಗೊಂಡಿದ್ದರು.

ಕಂಪನಿ ಮತ್ತು ಪೊಲೀಸ್ ಅಧಿಕಾರಿಗಳ ಸಮ್ಮುಖದಲ್ಲೇ ಸಹಾಯಕ ಆಯುಕ್ತರನ್ನು ದೂರವಾಣಿ ಮೂಲಕ ಸಂಪರ್ಕಿಸಲಾಗಿದೆ. ಕಾನೂನುಬದ್ಧವಾಗಿ ಸಂತ್ರಸ್ತರಿಗೆ ನೀಡಬೇಕಾದ ಪರಿಹಾರಧನ ಒದಗಿಸಿದ ಬಳಿಕವೇ ಕಾಮಗಾರಿ ಆರಂಭಿಸಬೇಕು. ಇಲ್ಲದಿದ್ದರೆ ಸಂತ್ರಸ್ತರು ನೇರವಾಗಿ ದೂರು ಸಲ್ಲಿಸಬಹುದೆಂದೂ ತಿಳಿಸಿದ್ದಾರೆ. ಆದರೂ ಕಂಪೆನಿ ಪೊಲೀಸ್ ಇಲಾಖೆಯ ನೆರವಿನಿಂದ ದಬ್ಬಾಳಿಕೆಗೆ ಮುಂದಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net