ಕೌಟುಂಬಿಕ ಕಲಹ; ಒಂಟಿಯಾಗಿದ್ದ ವೃದ್ಧನ ರಕ್ಷಣೆ

ಪಾರ್ಶ್ವವಾಯು ಪೀಡಿತ ಒಂಟಿ ವೃದ್ಧನನ್ನು ರಕ್ಷಿಸಿ ಹೊಸಬೆಳಕು ಆಶ್ರಮಕ್ಕೆ ಸೇರಿಸಲಾಯಿತು. ವಿಶು ಶೆಟ್ಟಿ. ಶ್ರೀಲತಾ, ಗೌರೀಶ್​, ರೇವತಿ ಇತರರಿದ್ದರು.
ಪಾರ್ಶ್ವವಾಯು ಪೀಡಿತ ಒಂಟಿ ವೃದ್ಧನನ್ನು ರಕ್ಷಿಸಿ ಹೊಸಬೆಳಕು ಆಶ್ರಮಕ್ಕೆ ಸೇರಿಸಲಾಯಿತು. ವಿಶು ಶೆಟ್ಟಿ. ಶ್ರೀಲತಾ, ಗೌರೀಶ್​, ರೇವತಿ ಇತರರಿದ್ದರು.
Published on: 

* ಮಾನವೀಯತೆ ಮೆರೆದ ಮಹಿಳಾ ಅಧಿಕಾರಿ, ವಿಶು ಶೆಟ್ಟಿ

ಉಡುಪಿ: ಕಾರ್ಕಳದ ಕಲ್ಯಾ ಗ್ರಾಪಂ ವ್ಯಾಪ್ತಿಯ ಮನೆಯಲ್ಲಿ ಒಬ್ಬರೇ ಅಸಹಾಯಕ ಸ್ಥಿತಿಯಲ್ಲಿದ್ದ ಪಾರ್ಶ್ವವಾಯು ಪೀಡಿತ ವೃದ್ಧರನ್ನು ಶಿಶು ಕಲ್ಯಾಣಾಧಿಕಾರಿ ಶ್ರೀಲತಾ ಅವರ ಮಾಹಿತಿಯ ಮೇರೆಗೆ ಸಮಾಜ ಸೇವಕ ವಿಶು ಶೆಟ್ಟಿ ಅಂಬಲಪಾಡಿ ರಕ್ಷಿಸಿ ಬೈಲೂರಿನ ಹೊಸಬೆಳಕು ಆಶ್ರಮಕ್ಕೆ ದಾಖಲಿಸಿದ್ದಾರೆ.

ದೋಗು ಶೆಟ್ಟಿ (80) ರಸಲ್ಪಟ್ಟ ವೃದ್ಧರಾಗಿದ್ದು, ಕೌಟುಂಬಿಕ ಕಲಹದಿಂದ ಒಬ್ಬಂಟಿಯಾಗಿದ್ದಾರೆ. ತನಗೆ ಹೆಂಡತಿ ಮಕ್ಕಳಿದ್ದು ಜಗಳದಿಂದಾಗಿ ನಾನು ಈ ಪರಿಸ್ಥಿತಿಗೆ ಬಂದಿದ್ದೇನೆ. ಇರುವ ಮನೆ, ಜಾಗವೆಲ್ಲ ಮಾರಾಟವಾಗಿದೆ. ಪಾರ್ಶ್ವವಾಯುವಿನಿಂದ ನಡೆದಾಗಲು ಆಗುತ್ತಿಲ್ಲ. ವೀಲ್​ಚೇರ್​ನಲ್ಲಿ ಕುಳಿತಿರುತ್ತೇನೆ. ಶೌಚಕ್ಕೆ ಹೋಗಲು ಆಗದ ಕೆಟ್ಟ ಪರಿಸ್ಥಿತಿಯಲ್ಲಿದ್ದೇನೆ. ಸ್ವಲ್ಪ ಗಂಜಿ ಮತ್ತು ನೀರು ಮಾತ್ರ ಸೇವಿಸಿ ಬದುಕುತ್ತಿದ್ದೇನೆ ಎಂದು ಅಳಲು ತೋಡಿಕೊಂಡಿದ್ದಾರೆ.

ಅಧಿಕಾರಿಯ ಶ್ಲಾಘನೀಯ ಕಾರ್ಯ

ಕಾರ್ಕಳದ ಶಿಶು ಕಲ್ಯಾಣಾಧಿಕಾರಿಯಾಗಿರುವ ಶ್ರೀಲತಾ ಅವರು ಕಲ್ಯಾ ಗ್ರಾಪಂ ವ್ಯಾಪ್ತಿಯಲ್ಲಿ ಎಸ್​ಐಆರ್​ ಕರ್ತವ್ಯ ನಿರ್ವಹಿಸುತ್ತಿದ್ದರು. ಈ ಸಂದರ್ಭದಲ್ಲಿ ಅಂಗನವಾಡಿ ಕಾರ್ಯಕರ್ತರಿಂದ ದೋಗು ಶೆಟ್ಟಿ ಅವರ ಅಸಹಾಯಕ ಸ್ಥಿತಿ ತಿಳಿದು, ಗ್ರಾಪಂ ಪಿಡಿಒ ರೇವತಿ ಅವರೊಂದಿಗೆ ವೃದ್ಧರಿದ್ದ ಮನೆಗೆ ಧಾವಿಸಿದರು. ಅವರನ್ನು ವಿಚಾರಿಸಿದಾಗ, ಒಂಟಿಯಾಗಿ ಇನ್ನು ಬದುಕಲು ಸಾಧ್ಯವಿಲ್ಲ. ಸಹಾಯ ಬೇಕು ಎಂದರು.

ವೃದ್ಧರ ಅಸಹನೀಯ ಬದುಕು ಕಂಡ ಶ್ರೀಲತಾ, ಸಹಾಯದ ಭರವಸೆ ನೀಡಿ ಧೈರ್ಯ ತುಂಬಿದರು. ತನ್ನ ಎಸ್​ಐಆರ್​ ಸೇವಾ ಕಾರ್ಯದ ಜತೆಗೆ ಕಾನೂನು ಪ್ರಕ್ರಿಯೆ ನಡೆಸಿ ಮಾನವೀಯ ನೆಲೆಯಲ್ಲಿ ಸಂಬಂಧಪಟ್ಟವರ ಗಮನಕ್ಕೆ ತಂದರು. ಇಂತಹ ಅಧಿಕಾರಿ ನಿಜಕ್ಕೂ ಸಮಾಜದ ಆಸ್ತಿ. ಮನವಿಗೆ ಹೊಸಬೆಳಕು ಆಶ್ರಮದ ತನುಲಾ ಅವರು ಸ್ಪಂದಿಸಿ ಆಶ್ರಯ ನೀಡಿದ್ದಾರೆ ಎಂದು ವಿಶು ಶೆಟ್ಟಿ ಸಂತಸ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net